ಆರಾಧ್ಯ ದೈವ ರಾವುತರಾಯನ ಜಾತ್ರೆ ಸಂಪನ್ನ

| Published : Oct 19 2024, 12:35 AM IST

ಆರಾಧ್ಯ ದೈವ ರಾವುತರಾಯನ ಜಾತ್ರೆ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಐದು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ನಡೆದ ಪಟ್ಟಣದ ಆರಾಧ್ಯ ದೈವ ಐತಿಹಾಸಿಕ ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. ಜಾತ್ರೆಯ ಕೊನೆಯ ದಿನವಾದ ಶುಕ್ರವಾರ ಸಂಜೆ ರಾವುತರಾಯನ ಬಂಡಿ ಪುರ ಪ್ರವೇಶ ಮಾಡಿದ್ದು, ಸಾವಿರಾರು ಸುಮಂಗಲಿಯರು ಉತ್ಸವಕ್ಕೆ ನೀರು ಎರೆದು ಅದ್ಧೂರಿಯಾಗಿ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಐದು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ನಡೆದ ಪಟ್ಟಣದ ಆರಾಧ್ಯ ದೈವ ಐತಿಹಾಸಿಕ ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. ಜಾತ್ರೆಯ ಕೊನೆಯ ದಿನವಾದ ಶುಕ್ರವಾರ ಸಂಜೆ ರಾವುತರಾಯನ ಬಂಡಿ ಪುರ ಪ್ರವೇಶ ಮಾಡಿದ್ದು, ಸಾವಿರಾರು ಸುಮಂಗಲಿಯರು ಉತ್ಸವಕ್ಕೆ ನೀರು ಎರೆದು ಅದ್ಧೂರಿಯಾಗಿ ಸ್ವಾಗತಿಸಿದರು.

ಶುಕ್ರವಾರ ಬೆಳಗ್ಗೆಯೇ ಮಲ್ಲಯ್ಯನ ದೇವಸ್ಥಾನದಿಂದ ತೆರೆದ ಬಂಡಿಯಲ್ಲಿ ಸಹಸ್ರಾರು ಭಕ್ತಾದಿಗಳ ಜಯಘೋಷದೊಂದಿಗೆ ಮಲ್ಲಯ್ಯನನ್ನು ಮೂಲ ದೇವಸ್ಥಾನಕ್ಕೆ ಕರೆತರಲಾಯಿತು. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳಿಂದ ಆಗಮಿಸಿದ್ದ ಭಕ್ತ ಸಮೂಹ ವಾಸ್ತವ್ಯ ಹೂಡಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಆರಾಧ್ಯ ದೈವ ರಾವುತರಾಯನ ಕೃಪೆಗೆ ಪಾತ್ರವಾದರು. ಬೆಳಗ್ಗೆಯಿಂದಲೇ ಪ್ರಾರಂಭವಾದ ಭವ್ಯ ಬಂಡಿ ಮೆರವಣಿಗೆಯಲ್ಲಿ ವಿರಾಜಮಾನನಾಗಿ ಕಂಗೊಳಿಸಿದ ರಾವುತರಾಯನನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಿಸಿದರು. ಅಲ್ಲದೇ, ಭಂಡಾರ ಎಸೆದು ಏಳುಕೋಟಿ, ಏಳುಕೋಟಿ, ಏಳುಕೋಟಿ ಎಂಬ ಜೈಕಾರಗಳನ್ನು ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು.

ಜಾತ್ರೆಯಲ್ಲಿ ವಿಶೇಷವಾಗಿ ವಗ್ಗೈಯ್ಯಗಳು ಹೆಗಲ ಮೇಲೆ ಕಂಬಳಿ ಹೊತ್ತು, ಕೈಯಲ್ಲಿ ತ್ರಿಶೂಲ ಹಿಡಿದು ಹಣೆ ತುಂಬ ಭಂಡಾರ ಬಡಿದುಕೊಂಡು ರಾವುತರಾಯನ ಬಂಡಿ ಮುಂದೆ ಕುಣಿಯುತ್ತ ಜನರ ಗಮನ ಸೆಳೆದರು. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಐದು ದಿನಗಳವರೆಗೆ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಪ್ರತಿದಿನ ಪೂಜಾ ಕಾರ್ಯ, ರಸಮಂಜರಿ, ಕುಸ್ತಿ ಪಂದ್ಯಾವಳಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾತ್ರೋತ್ಸವಕ್ಕೆ ಮೆರುಗು ತಂದರು. ಜಾತ್ರೋತ್ಸವಕ್ಕೆ ಪಿಎಸ್ಐ ಬಸವರಾಜ ತಿಪ್ಪಾರಡ್ಡಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್‌ ಕಲ್ಪಿಸಿದ್ದರು.

ಅದ್ಧೂರಿ ಬಂಡಿ ಉತ್ಸವ:

ವಿವಿಧತೆಯಲ್ಲಿ ಏಕತೆ ಸಾರುವ ಭಾವೈಕ್ಯತೆಯ ಭಗವಂತ ಎಂದು ಪ್ರಸಿದ್ಧಿ ಹೊಂದಿರುವ ರಾವುತರಾಯನ ಬಂಡಿ ಉತ್ಸವ ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ನಡೆಯಿತು. ದಾರಿಯುದ್ದಕ್ಕೂ ಡೊಳ್ಳು ಕುಣಿತ, ವಗ್ಗೈಯ್ಯಗಳ ಕುಣಿತ, ಬಿಂದಿಗೆ ನೀರು ಸುರಿದುಕೊಂಡು ಭಂಢಾರವೆರಚಿಕೊಂಡು ಭಕ್ತರನ್ನು ಭಂಡಾರದಲ್ಲಿ ಮುಳುಗಿಸಿ ಬಂಡಿ ಎಳೆಯುವ ದೃಶ್ಯ ಮನಮೋಹಕವಾಗಿತ್ತು. ಉತ್ಸವ ಸಂದರ್ಭದಲ್ಲಿ ಬಂಡಿ ಮೇಲೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತರು ಭಕ್ತಿ ಮೆರೆದರು. ವಿವಿಧ ರಾಜ್ಯಗಳಿಂದ ಸಾವಿರಾರು ಜನರು ಆಗಮಿಸಿ ಬಳೆ, ಓಲೆಗಳ ಸಾಲು ಸಾಲು ಅಂಗಡಿಗಳು. ಬಾಯಿ ಸಿಹಿ ಮಾಡುವ ಮಿಠಾಯಿ, ಬಜ್ಜಿ ಸೇರಿದಂತೆ ಹಲವಾರು ತಿಂಡಿ, ತಿನಿಸುಗಳು ಜನರನ್ನು ಆಕರ್ಷಿಸುತ್ತಿದ್ದವು. ಮಕ್ಕಳ ಮನರಂಜನೆಯ ಆಟಗಳು ಜಾತ್ರೆಯಲ್ಲಿ ವಿಶೇಷವಾಗಿದ್ದವು. ಮಹಾನವಮಿ ಅಮಾವಾಸ್ಯೆಯಿಂದ ಪ್ರಾರಂಭವಾದ ಜಾತ್ರೆಯ ಚಟುವಟಿಕೆಗಳು ರಾವುತರಾಯ ಮೂಲ ಸ್ಥಾನ ಸೇರುವುದರೊಂದಿಗೆ ಜಾತ್ರೆ ಸಂಪನ್ನಗೊಂಡಿತು.-----------

ಬಾಕ್ಸ್‌

ಕಾರ್ಣಿಕ ನುಡಿದ ರಾವುತರಾಯ

ರಾವುತರಾಯ ಪ್ರತಿವರ್ಷ ಮಲ್ಲಯ್ಯ ದೇವಸ್ಥಾನಕ್ಕೆ ತೆರಳುವಾಗ ಹಾಗೂ ಬರುವಾಗ ಕಾರ್ಣಿಕರು ಭವಿಷ್ಯದ ಕುರಿತು ಹೇಳಿಕೆಗಳನ್ನು ಹೇಳುವ ವಾಡಿಕೆಯಿದೆ. ಈ ಬಾರಿ ಅವರು ಹೇಳಿದಂತೆ, ಧರ್ಮ ಧರ್ಮ ಅಂದು ಧರ್ಮ ಹಿಡಿಯಲಿಲ್ಲ, ಕರ್ಮ ಬೆನ್ನತೈತಿ. ಬಿಳಿ ಜೋಳ ಕಟ್ಟಿಗೆ ಬಕ್ಕಳ, ಕಡಲಿ, ಗೋಧಿ ಜೋಳದ ಬೆನ್ನತೈತಿ. ತೊಗರಿ ಒಳಗ ಕಡ್ಡಿ ಬಿಟ್ಟಿನಿ, ಅವರ ದೈವಾನುಸರಿ ಬೆಳೆ. ಎಷ್ಟು ಹೇಳಿದರು ಬುದ್ಧಿ ಬರಲಿಲ್ಲ, ಧರ್ಮದಿಂದ ನಡೆದವರ ಮನೆಯಾಗ ಕೂಸಾಗಿ ಇರುತ್ತೇನೆ. ಬಸವಣ್ಣನ ಪತ್ತಿ(ಕಣಕಿ) ಕಾಯ್ಕೋರಿ ಎಂದು ಹೇಳುವ ಮೂಲಕ ಮುಂದಿನ ಕಷ್ಟಕಾಲದ ಕುರಿತು ಸುಳಿವು ನೀಡಿದರು.