ಸಾರಾಂಶ
ರಾಣಿಬೆನ್ನೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗೆ ಬಂದಿರುವ ಗೋವಿನ ಜೋಳ, ಹತ್ತಿ, ಶೇಂಗಾ ಮತ್ತಿತರೆ ಬೆಳೆ ನೀರಿಗೆ ಸಿಕ್ಕು ಹಾಳಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸುರಿದ ಮುಂಗಾರು ಮಳೆಯನ್ನೆ ನಂಬಿ ಬಿತ್ತನೆ ಮಾಡಿದ್ದ ಗೋವಿನ ಜೋಳದ ಫಸಲು ಕಟಾವಿಗೆ ಬಂದಿದ್ದು, ಕೆಲವರು ಕಟಾವು ಮಾಡಿ ರಾಶಿ ಹಾಕಿದರೆ, ಇನ್ನು ಕೆಲವರು ಮಳೆಯ ಸುರಿಯುವಿಕೆ ನಿಂತ ಮೇಲೆ ಕಟಾವು ಮಾಡಿದರಾಯಿತು ಎಂದು ಬಿಟ್ಟಿದ್ದಾರೆ.
ಮತ್ತೆ ಸಾಲದ ಸುಳಿಗೆ ಸಿಲುಕಿದ ರೈತ: ಗೋವಿನಜೋಳ ಬೆಳೆದ ರೈತರು ಈಗಾಗಲೆ ಬೀಜ, ಗೊಬ್ಬರ, ಹೊಲ ಹದ ಮಾಡಲು, ಕಳೆ ಕೀಳಲು, ಕಟಾವು ಮಾಡಲು ಆಳಿನ ಕೂಲಿಗಾಗಿ ಸಾಕಷ್ಟು ಸಾಲ ಮಾಡಿದ್ದಾರೆ. ಕಟಾವು ಮಾಡಿ ಹಾಕಿರುವ ರಾಶಿಯಲ್ಲಿ ಮೊಳಕೆ ಒಡೆಯುತ್ತಿರುವುದರಿಂದ ಹಾಗೂ ಹೊಲಗಳು ಜಲಾವೃತವಾಗಿದ್ದು, ನೀರಿನಲ್ಲಿಯೇ ಫಸಲು ಹಾಳಾಗಿ ಕಸವಾಗುತ್ತಿರುವುದರಿಂದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಈ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.ವಾಣಿಜ್ಯ ಬೆಳೆಗಳೆಲ್ಲಾ ನೀರು ಪಾಲು: ಜಿಲ್ಲೆಯಾದ್ಯಂತ ಮುಂಗಾರು ಬೆಳೆಗಳಾಗಿ ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನ ಕಾಯಿ, ಮೆಕ್ಕೆಜೋಳ, ಶೇಂಗಾ, ಸೋಯಾ ಅವರೆ ಬೆಳೆಗಳನ್ನು ಬೆಳೆದ ರೈತರ ಮೊಗದಲ್ಲಿ ನಗುವಿನ ಛಾಯೆ ಮೂಡಿತ್ತು. ಇತ್ತೀಚಿನ ದಿನಗಳಲ್ಲಿ ಎಡಬಿಡದೆ ಮಳೆಯು ಸುರಿಯುತ್ತಿರುವುದರಿಂದ ಬೆಳೆಗಳೆಲ್ಲಾ ನೀರುಪಾಲಾಗಿ ರೈತರೆಲ್ಲಾ ಕಂಗಾಲಾಗಿದ್ದಾರೆ. ಕಟಾವು ಮಾಡಬೇಕೆನ್ನುವ ಹೊತ್ತಲ್ಲಿಯೇ ಚಿತ್ತಾ ಮಳೆಯ ರುದ್ರನರ್ತನಕ್ಕೆ ಹಾನಿಯನ್ನು ಅನುಭವಿಸುವಂತಾಗಿದೆ.
ಕಳೆದ ಹಲವಾರು ವರ್ಷಗಳಿಂದ ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳುತ್ತಾರೆ ಅಷ್ಟೇ. ಪ್ರಕೃತಿ ವಿಕೋಪದಿಂದ ಹಾಗೂ ಹವಾಮಾನ ವೈಪರೀತ್ಯದಿಂದ ಹಾನಿಗೊಳಗಾದ ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ಸೂಕ್ತ ಪರಿಹಾರವನ್ನು ಹಾನಿ ಅನುಭವಿಸುವ ರೈತರ ಖಾತೆಗೆ ನೀಡುವಲ್ಲಿ ಅನೇಕ ರೀತಿಯ ತಾರತಮ್ಯಗಳು ನಡೆಯುತ್ತಿವೆ.ಬೆಳೆ ಬೆಳೆಯಲು ಮಾಡಿರುವ ಸಾಲ, ಅತಿವೃಷ್ಟಿ-ಅನಾವೃಷ್ಟಿಯಿಂದಾದ ಹಾನಿ ಅನ್ನದಾತರಾದ ನಮ್ಮನ್ನೇ ಕಾಡುತ್ತಿವೆ. ಜಿಲ್ಲಾಧಿಕಾರಿಗಳು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಬೇಕು, ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಚಳಗೇರಿ ರೈತ ವೀರನಗೌಡ ಕರೆಗೌಡ್ರ ಹೇಳಿದರು.