ಸಾರಾಂಶ
ಅರಕಲಗೂಡು ತಾಲೂಕಿನ ಕಾರ್ಗಲ್ಲಿನ ಗೋಮಾಳದಲ್ಲಿರುವ ದಲಿತ ಕುಟುಂಬಗಳ ದುಸ್ಥಿತಿ ಕನ್ನಡಪ್ರಭ ವಾರ್ತೆ ಅರಕಲಗೂಡು
ಗ್ರಾಮ ಠಾಣಾ ಜಾಗದಿಂದ ವಂಚಿತಗೊಂಡಿರುವ ತಾಲೂಕಿನ ತರಿಗಳಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಗಲ್ಲು ಗ್ರಾಮದ ಐದು ದಲಿತ ಕುಟುಂಬ ಸರ್ಕಾರದಿಂದ ಮಂಜೂರಾಗಿರುವ ಗೋಮಾಳ ಕೃಷಿ ಜಮೀನಿನಲ್ಲಿಯೇ ಕಳೆದ 45 ವರ್ಷಗಳಿಂದಲೂ ಕೂಡ ವಾಸವಿದ್ದು, ತಿರುಗಾಡುವ ರಸ್ತೆ ಕಲ್ಪಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ.ಕಾರ್ಗಲ್ಲು ಗ್ರಾಮದಲ್ಲಿ ಇತರೆ ವರ್ಗದವರು ಗ್ರಾಮಠಾಣಾ ಜಾಗದಲ್ಲಿ ವಾಸವಿದ್ದು, ದಲಿತ ಕುಟುಂಬಗಳಿಗೆ ಮಾತ್ರ ಗ್ರಾಮಠಾಣಾ ಜಾಗವನ್ನು ಕಲ್ಪಿಸಿಲ್ಲ.ಇದರಿಂದ ರಸ್ತೆ ಬದಿಯಲ್ಲಿ ವಾಸವಿದ್ದ ಕುಟುಂಬಗಳು 1978ರಲ್ಲಿ ಅನುಭವದ ಮೇಲೆ 1 ಎಕರೆ 20 ಗುಂಟೆ ಜಮೀನನ್ನು ಮಂಜೂರು ಮಾಡಿಸಿಕೊಂಡು ಅದೇ ಜಮೀನಿನಲ್ಲಿಯೇ ಈ ಕುಟುಂಬಗಳು ಎರಡು ತಲೆಮಾರು ಜೀವನ ಕಳೆದಿದ್ದು, ಇಂದಿಗೂ ಕೂಡ ಇತರೆ ವರ್ಗದವರ ಜಮೀನಿನ ಬದುಗಳಲ್ಲಿಯೇ ಭಯದಿಂದ ತಿರುಗುತ್ತಾ ಸಂಕಷ್ಟದಲ್ಲಿದ್ದಾರೆ.ಗ್ರಾಮದ ಸರ್ವೇನಂಬರ್ 137ರಲ್ಲಿ ಒಟ್ಟು 86 ಎಕರೆಗೂ ಅಧಿಕ ಗೋಮಾಳ ಜಮೀನು ಇದ್ದು, ಅನುಭವದಲ್ಲಿ ಭೂಮಿ ಮಂಜೂರು ಮಾಡುವ ವೇಳೆ 40 ಎಕರೆ ಭೂಮಿಯನ್ನು ಜಾನುವಾರುಗಳ ಮೇವು, ತಿರುಗುವ ರಸ್ತೆ ಸಲುವಾಗಿ ಮೀಸಲಿಟ್ಟು ಉಳಿದ ಜಮೀನನ್ನು ಅನುಭವನದ ಮೇಲೆ ಒಂದು ಎಕರೆಯಿಂದ ನಾಲ್ಕು ಎಕರೆ ತನಕ 17 ಮಂದಿ ರೈತರಿಗೆ ಮಂಜೂರಾತಿ ಮಾಡಲಾಗಿದೆ. ದಲಿತ ಕುಟುಂಬಗಳಿಗೆ ಮಂಜೂರಾಗಿರುವ ಕೃಷಿ ಭೂಮಿ ಗ್ರಾಮಾಠಾಣೆಯಿಂದ ದೂರವಿರುವುದಲ್ಲದೇ ಸುತ್ತಮುತ್ತಲೂ ಇತರೆ ವರ್ಗದವರು ಉಳುಮೆ ಮಾಡುತ್ತಿದ್ದಾರೆ. ಮಧ್ಯದಲ್ಲಿರುವ ಈ ಐದು ಮಂದಿ ದಲಿತ ಕುಟುಂಬಗಳಿಗೆ ತಿರುಗಾಡಲು ರಸ್ತೆಯನ್ನು ಸರ್ಕಾರಿ ಭೂಮಿ ಮಂಜೂರು ಮಾಡುವ ವೇಳೆ ಬಿಟ್ಟಿಲ್ಲ. ಇದರಿಂದ ಕೃಷಿ ಮಾಡಿರುವ ಜಮೀನಿನ ಬದುಗಳಲ್ಲಿಯೇ ಜಮೀನಿನವರ ವಿರೋಧದ ನಡುವೆ ಭಯದಿಂದ ಈ ಕುಟುಂಬಗಳು ಓಡಾಡುತ್ತಿವೆ. ರಾತ್ರಿವೇಳೆಯಂತು ಕೃಷಿ ಜಮೀನಿನಲ್ಲಿ ಓಡಾಡುವುದು ಜೀವ ಭಯವನ್ನು ಉಂಟುಮಾಡಿದೆ.
ತಿರುಗುವ ವಿಚಾರಕ್ಕೆ ವಾಗ್ವಾದ, ಘರ್ಷಣೆ: ಕೃಷಿ ಜಮೀನಿನಲ್ಲಿ ವಾಸವಿರುವ ಕುಟುಂಬದವರು ನಿತ್ಯವೂ ಇತರೆ ವರ್ಗದವರ ಜಮೀನಿನಲ್ಲಿ ತಿರುಗುವ ವಿಚಾರ ಸಲುವಾಗಿ ಹತ್ತಾರು ಬಾರಿ ಜಗಳ, ಘರ್ಷಣೆ, ಶೋಷಣೆಯನ್ನು ಅನುಭವಿಸುತ್ತಿದ್ದಾರೆ. ಪ್ರತ್ಯೇಕ ರಸ್ತೆ ಇಲ್ಲದ ಪರಿಣಾಮ ಸವರ್ಣೀಯರ ಜಮೀನೆ ಅವರಿಗೆ ಕಾಲುದಾರಿಯಾಗಿದೆ. ಬೇಸಿಗೆ ಕಾಲದಲ್ಲಿ ಬೆಳೆ ಇಲ್ಲದ ವೇಳೆ ತಿರುಗಲು ಸಮಸ್ಯೆ ಎದುರಾಗುವುದಿಲ್ಲ. ಮುಂಗಾರು ಕೃಷಿ ವೇಳೆಯಂತು ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ವಿಷಯ ಗೊತ್ತಿದ್ದರೂ ಕೂಡ ಅಕ್ಕಪಕ್ಕದ ಜಮೀನಿನವರು ಮಾನವೀಯತೆ ದೃಷ್ಠಿಯಿಂದ ಕನಿಷ್ಟ 10 ಅಡಿಯಷ್ಟು ಜಾಗವನ್ನು ಬಿಟ್ಟುಕೊಟ್ಟಿಲ್ಲ. ಹಾಲಿ ಅನುಭವನದಲ್ಲಿ ಇರುವ ಜಮೀನಿಗೆ ಬೇಲಿಯನ್ನು ನಿರ್ಮಿಸಿಕೊಂಡಿರುವುದು ಸಹ ಕಂಡುಬಂದಿದೆ.ವಾಸವಿರುವ ಮನೆ ಬಳಿಯೇ ಶವಸಂಸ್ಕಾರ: ಸರ್ಕಾರ ಗೋಮಾಳ ಜಾಗದಲ್ಲಿ ಮಂಜೂರಾತಿ ಮಾಡುವ ವೇಳೆ ಕಡ್ಡಾಯವಾಗಿ ಸ್ಮಶಾನಕ್ಕೆ ಜಾಗವನ್ನು ಮೀಸಲಿಡುತ್ತದೆ. ಆದರೆ ಕಾರ್ಗಲ್ಲು ಗ್ರಾಮದಲ್ಲಿನ ಸ್ಮಶಾನ ಮಾತ್ರ ದಲಿತ ಕುಟುಂಬಗಳಿಗೆ ಇಲ್ಲವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ 5 ಮಂದಿ ಸಾವನಪ್ಪಿದ್ದು, ಇವರನ್ನು ವಾಸವಿರುವ ಮನೆಯಿಂದ 20 ಅಡಿ ಅಂತರದಲ್ಲಿಯೇ ಶವಸಂಸ್ಕಾರ ಮಾಡುತ್ತಿದ್ದಾರೆ.
ಬಂಧುಬಾಂಧವರಿಂದ ದೂರ: ಈ ಐದು ಕುಟುಂಬಗಳ ಹೆಣ್ಣು ಮಕ್ಕಳು, ಗಂಡು ಮಕ್ಕಳಿಗೆ ವಿವಾಹ ಆಗಿದೆ. ಮನೆ ಮುಂದೆ ಮದುವೆ ಮಾಡುವ ವೇಳೆ ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ. ನೆಂಟರಿಷ್ಟರು ಬಂದುಹೋಗಲು ರಸ್ತೆ ಇಲ್ಲ ಎಂದು ಖ್ಯಾತೆ ತೆಗೆದಿರುವುದುಂಟು, ಅಲ್ಲದೆ ತುಂಬು ಗರ್ಭಿಣಿಯನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುವ ಸಲುವಾಗಿ ಹೊಲದ ಬದುವಿನಲ್ಲಿ ನಡೆದು ಹೋಗುವ ವೇಳೆ ಕಾಲುಜಾರಿಬಿದ್ದು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅಲ್ಲದೆ ಅನಾರೋಗ್ಯದಿಂದ ಅರಕಲಗೂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯನ್ನು ಗ್ರಾಮಕ್ಕೆ ತಂದು ಶವಸಂಸ್ಕಾರ ಮಾಡುವ ವೇಳೆ ಸಹ ಕಾಲುಜಾರಿ ಬಿದ್ದಿರುವುದು ಸಹ ಕಂಡುಬಂದಿದೆ.ಶಿಕ್ಷಣದಿಂದ ವಂಚನೆ: ಕಾರ್ಗಲ್ಲು ಗ್ರಾಮದಲ್ಲಿ ಪ್ರಾಥಮಿಕ ಶಾಲೆ,ಅಂಗನವಾಡಿ ಕೇಂದ್ರವಿದ್ದು, ಇಲ್ಲಿನ ಶಿಕ್ಷಣವನ್ನು ಸಕಾಲದಲ್ಲಿ ಪಡೆಯಲು ಈ ಐದು ದಲಿತ ಕುಟುಂಬಗಳಿಗೆ ಇದುವರೆಗೂ ಸಾಧ್ಯವಾಗುತ್ತಿಲ್ಲ. ಕೂಲಿ ಕೆಲಸಕ್ಕೆ ತೆರಳುವ ಬಡಕುಟುಂಬಗಳು ಶಿಕ್ಷಣದಿಂದ ವಂಚಿತಗೊಂಡಿವೆ.
ಸರ್ಕಾರದ ಸೌಕರ್ಯ ಸಿಕ್ಕಿಲ್ಲ : ಕೃಷಿ ಜಮೀನಿನಲ್ಲಿ ವಾಸವಿರುವ ದಲಿತ ಕುಟುಂಬಗಳಿಗೆ ಇದುವರೆಗೂ ಕೂಡ ಯಾವುದೇ ಸರ್ಕಾರಿ ಸವಲತ್ತುಗಳು ಸ್ಥಳೀಯ ಗ್ರಾಪಂ, ತಾಲೂಕು ಆಡಳಿತ ವತಿಯಿಂದ ಸಿಕ್ಕಿಲ್ಲ. ಮನೆ ಮುಂಭಾಗ ರಸ್ತೆ, ಚರಂಡಿ ಇಲ್ಲ. ದೂರದಿಂದ ವೈರ್ ಎಳೆದುಕೊಂಡು ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದಾರೆ. ಕೊಳವೆ ಬಾವಿಯ ನೀರೆ ಇವರಿಗೆ ಆಸರೆಯಾಗಿದೆ. ಹೊಸದಾಗಿ ಮನೆ ನಿರ್ಮಿಸಿಕೊಳ್ಳಲು ಆಲೋಚನೆ ಮಾಡಿದರೂ ಸಹ ಸಾಮಾನುಗಳನ್ನು ಸಾಗಿಸುವ ರಸ್ತೆ ಇಲ್ಲದಿರುವುದರಿಂದ ಹಳೆಯ ಮುರುಕಲ ಮನೆಯಲ್ಲಿಯೇ ವಾಸವಿದ್ದಾರೆ.ನಮ್ಮ ಪೂರ್ವಿಕರು ಕಾರ್ಗಲ್ಲು ಗ್ರಾಮದಲ್ಲಿ ವಾಸವಿದ್ದರು. ಬಳಿಕ ಆ ಜಾಗವನ್ನು ನಮ್ಮಿಂದ ಸವರ್ಣೀಯರು ಕಿತ್ತುಕೊಂಡು ಬೀದಿಗೆ ತಳ್ಳಿದ್ದರು. ಸರ್ಕಾರದಿಂದ ಮಂಜೂರಾದ ಭೂಮಿಯಲ್ಲಿ ಮನೆ ಕಟ್ಟಿಕೊಂಡು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ. ರಸ್ತೆ ಮಾಡಿಸಿಕೊಡಿ ಎಂದು ಗ್ರಾಪಂ,ತಾಲೂಕು ಆಡಳಿತಕ್ಕೆ ಮನವಿ ನೀಡಿದ್ದರೂ ಕೂಡ ಗಮನಕೊಟ್ಟಿಲ್ಲ. ರಾಜಕಾರಣಿಗಳು ಸಹ ನಮ್ಮಿಂದ ಮತ ಪಡೆಯುತ್ತಿದ್ದಾರೆಯೇ ಹೊರತು ಸಮಸ್ಯೆಗೆ ಸ್ಪಂದಿಸಿಲ್ಲ. ತಿರುಗುವ ವಿಚಾರಕ್ಕೆ ಜಗಳ ಮಾಡಿಕೊಳ್ಳುವುದೇ ನಮ್ಮ ದಶಕಗಳ ಕಾಯಕವಾಗಿದೆ. ಶಿವಮ್ಮ, ನೊಂದ ಮಹಿಳೆ, ಕಾರ್ಗಲ್ಲು ಗ್ರಾಮ.ಕಾರ್ಗಲ್ಲು ಗ್ರಾಮದ ಗೋಮಾಳ ಜಮೀನಿನಲ್ಲಿ ವಾಸವಿರುವ ದಲಿತ ಕುಟುಂಬಗಳಿಗೆ ಇದುವರೆಗೂ ರಸ್ತೆ ಕಲ್ಪಿಸಲು ಸಾಧ್ಯವಾಗಿಲ್ಲ. ಕೃಷಿ ಜಮೀನಿನ ನಡುವೆ ಕುಟುಂಬಗಳು ಇದ್ದು, ಅಕ್ಕಪಕ್ಕದ ಜಮೀನಿನವರು ಹಿಡುವಳಿ ಜಮೀನು ಬಿಡುತ್ತಿಲ್ಲ. ಜಾಗ ಬಿಟ್ಟುಕೊಟ್ಟರೇ ತಿರುಗುವ ರಸ್ತೆ ಮಾಡಿಸಲು ಸಾಧ್ಯವಾಗುತ್ತದೆ. ಈ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.ವಿಜಯ್ ಕುಮಾರ್, ಪಿಡಿಒ, ತರಿಗಳಲೆ ಗ್ರಾಪಂ.