ಮರೆಯಾಗುತ್ತಿರುವ ಚಿತ್ರಗಾರರ ಕಲೆ

| Published : Mar 23 2024, 01:02 AM IST

ಸಾರಾಂಶ

ಕಳೆದ 3-4 ವರ್ಷಗಳ ಹಿಂದೆ ದಾಳಿಮಾಡಿದ ಕೊರೋನಾದಿಂದಾಗಿ ಇವರ ವ್ಯಾಪಾರಕ್ಕೆ ದೊಡ್ಡ ಹೊಡೆತವೇ ಬಿದ್ದಿತು. ಗಾಯದ ಮೇಲೆ ಬರೆ ಎಂಬಂತೆ ಪಿಓಪಿ ಮೂರ್ತಿಗಳ ಹಾವಳಿಯಿಂದಾಗಿ ಇವ ರ ವ್ಯಾಪಾರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಣ್ಣು, ಕಟ್ಟಿಗೆಯಲ್ಲಿ ಸುಂದರ ಮೂರ್ತಿಗಳನ್ನಾಗಿಸುವ ಚಿತ್ರಗಾರ ಕುಟುಂಬಗಳು ಇಂದು ತಮ್ಮ ಮೂಲವೃತ್ತಿಯಿಂದ ವಿಮುಖವಾಗುತ್ತಿವೆ. ಕಲೆಗೆ ಸಿಗದ ಸೂಕ್ತ ಬೆಲೆ, ಕೆಲವು ವರ್ಷಗಳ ಹಿಂದೆ ಪಿಓಪಿ ಮೂರ್ತಿಗಳ ಹಾವಳಿಯಿಂದ ಪಾತಾಳಕ್ಕೆ ಕಂಡಿದ್ದ ವ್ಯಾಪಾರ ಮತ್ತೇ ಮೇಲೇಳುತ್ತಲೆ ಇಲ್ಲ.

ನಗರದ ಬೊಮ್ಮಾಪುರದ ಚಿತ್ರಗಾರ ಓಣಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿನ ಹತ್ತಾರು ಕುಟುಂಬಗಳು ಮೂರ್ತಿ ತಯಾರಿಕೆಯನ್ನೇ ತಮ್ಮ ಮೂಲಕಸಬಾಗಿಸಿಕೊಂಡಿವೆ. ಇಂದಿಗೂ ಇದೇ ವೃತ್ತಿಯನ್ನು ನಂಬಿಕೊಂಡು ಜೀವನದ ಬಂಡಿ ಸಾಗಿಸುತ್ತಿವೆ. ಆದರೆ, ಇನ್ನು ಕೆಲವು ಕುಟುಂಬಗಳು ಈ ಮೂಲ ವೃತ್ತಿಯನ್ನು ಕೈಬಿಟ್ಟು ಬೇರೆ ಬೇರೆ ವೃತ್ತಿಗೆ ವಾಲಿಕೊಳ್ಳುತ್ತಿದ್ದಾರೆ.

ಸುಮಾರು 8-10 ತಲೆಮಾರುಗಳಿಂದ ಇಲ್ಲಿನ ಚಿತ್ರಗಾರ ಕುಟುಂಬ ಮಣ್ಣಿನಿಂದ ಮೂರ್ತಿ ತಯಾರಿಕೆ, ದೇವಿಗಳ ವಿಗ್ರಹ, ಛತ್ತರಗಿ, ತೊಟ್ಟಿಲು, ಮಂಟಪ, ಪಲ್ಲಕ್ಕಿ ಹಾಗೂ ಹುಲಿವೇಷಧಾರಿಗಳಿಗೆ ಬಣ್ಣಹಚ್ಚುವ ಕಾಯಕವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡು ಬಂದಿದ್ದಾರೆ. ಗಣೇಶ ಚತುರ್ಥಿ, ಹೋಳಿಹುಣ್ಣಿಮೆ, ನಾಗರ ಪಂಚಮಿ, ಮಣ್ಣೆತ್ತಿನ ಅಮವಾಸ್ಯೆಯ ವೇಳೆ ಬಗೆಬಗೆಯ ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಏಕೆ ಈ ಸಮಸ್ಯೆ?

ಕಳೆದ 3-4 ವರ್ಷಗಳ ಹಿಂದೆ ದಾಳಿಮಾಡಿದ ಕೊರೋನಾದಿಂದಾಗಿ ಇವರ ವ್ಯಾಪಾರಕ್ಕೆ ದೊಡ್ಡ ಹೊಡೆತವೇ ಬಿದ್ದಿತು. ಗಾಯದ ಮೇಲೆ ಬರೆ ಎಂಬಂತೆ ಪಿಓಪಿ ಮೂರ್ತಿಗಳ ಹಾವಳಿಯಿಂದಾಗಿ ಇ‍ವರ ವ್ಯಾಪಾರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ತಯಾರಿಸಿದ ಮೂರ್ತಿಗಳನ್ನು ಖರೀದಿಸಲು ಇಲ್ಲದೇ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುವಂತಾಯಿತು. ಕೊರೋನಾ ಹಾವಳಿ ತಗ್ಗಿ ಈಗ ಕೊಂಚ ಮಾರಾಟ ಏರಿಕೆ ಕಂಡರೂ ಹಿಂದಿನಂತೆ ಜನರು ಮೂರ್ತಿ ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ಮೂರ್ತಿ ತಯಾರಕ ಉದಯ ಕಾಂಬಳೆ ನೊಂದು ನುಡಿಯುತ್ತಾರೆ.

ಯಾವುದೇ ಹಬ್ಬಗಳಿರಲಿ ಪೂಜೆಗೆ ಮೂರ್ತಿಗಳು ಬೇಕಾದರೆ ಬಹುತೇಕ ಚಿತ್ರಗಾರ ಓಣಿಯಲ್ಲೇ ಖರೀದಿಸುವುದು ಸಾಮಾನ್ಯ. ಅದರಲ್ಲೂ ಗಣೇಶ ಚತುರ್ಥಿ, ಹೋಳಿಹುಣ್ಣಿಮೆ ಹಬ್ಬದಲ್ಲಂತೂ ಈ ಓಣಿಯು ಜನರಿಂದಲೇ ತುಂಬಿಹೋಗಿರುತ್ತದೆ.

ಜಿಲ್ಲೆಯ ವಿವಿಧ ತಾಲೂಕುಗಳಲ್ಲದೇ ಗದಗ, ಹಾವೇರಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ವಿವಿಧ ಹಳ್ಳಿಗಳ ಜನತೆ ಇಲ್ಲಿಗೆ ಬಂದು ಮೂರ್ತಿಗಳನ್ನು ತಗೆದುಕೊಂಡು ಹೋಗುತ್ತಾರೆ. ಇಲ್ಲಿಯೇ ವಿಶೇಷ ಪೂಜೆ ಮಾಡಿ ಮೆರಣಿಗೆಯ ಮೂಲಕ ತೆಗೆದುಕೊಂಡು ಹೋಗುವುದು ಸಾಮಾನ್ಯ.

ಕಿಟ್ಟದ ರತಿ-ಕಾಮ ಫೇಮಸ್‌

ಇಲ್ಲಿ ತಯಾರಾಗುವ ಕಿಟ್ಟ (ಕಟ್ಟಿಗೆ) ರತಿ-ಕಾಮ ಮೂರ್ತಿಗಳು ಹೆಚ್ಚಿನ ಪ್ರಖ್ಯಾತಿ ಪಡೆದಿವೆ. ಶಿಖಾರಿಪುರ ಬಳಿಯ ಹಣಜಿಯಲ್ಲಿ ಸಿಗುವ ಹಳವಾಸ ಹೆಸರಿನ ಕಟ್ಟಿಗೆ ತಂದು ಅದರಲ್ಲಿ ಮೂರ್ತಿ ತಯಾರಿಸಲಾಗುತ್ತದೆ. ಈ ಕಟ್ಟಿಗೆ ತುಂಬಾ ಹಗುರವಾಗಿರುತ್ತದೆ. ಇದರೊಂದಿಗೆ ಮೂರ್ತಿಗೆ ರೂಪ ನೀಡಲು ಕಟ್ಟಿಗೆಯ ಪುಡಿ ಬಳಕೆ ಮಾಡಿ ಮೂರ್ತಿ ತಯಾರಿಸಲಾಗುತ್ತದೆ. ಈ ಮೂರ್ತಿಗಳು ಹಲವು ವರ್ಷಗಳ ವರೆಗೆ ಬಾಳಿಕೆ ಬರುತ್ತವೆ. 2 ಅಡಿಯಿಂದ 5-6 ಅಡಿಯ ವರೆಗೂ ಮೂರ್ತಿ ತಯಾರಿಸಲಾಗುತ್ತದೆ. ಈ ಮೂರ್ತಿಗಳು ₹12 ಸಾವಿರದಿಂದ ಹಿಡಿದು ₹1 ಲಕ್ಷದ ವರೆಗೂ ಮಾರಾಟವಾಗುತ್ತವೆ.

ಆಸಕ್ತಿ ತೋರುತ್ತಿಲ್ಲ

ನೂರಾರು ವರ್ಷಗಳಿಂದ ಇದೇ ವೃತ್ತಿ ಮಾಡುತ್ತ ಬಂದಿದ್ದೇವೆ. ವ್ಯಾಪಾರದಲ್ಲಿ ಲಾಭವಿಲ್ಲದೇ ಸಂತಷ್ಟ ಅನುಭವಿಸುವಂತಾಗಿದೆ. ಇಂದಿನ ಯುವಪೀಳಿಗೆ ಈ ಕಲೆ ಕಲಿಯಲು ಆಸಕ್ತಿ ತೋರುತ್ತಿಲ್ಲ. ನಮ್ಮ ತಲೆಮಾರಿಗೆ ಈ ಕಲೆ ನಶಿಸಿ ಹೋಗುತ್ತದೆಯೇ ಎಂಬ ಆತಂಕವಿದೆ.

- ಉದಯ ಕಾಂಬಳೆ, ಮೂರ್ತಿ ತಯಾರಕರು