ಖೋಟಾನೋಟು ಚಲಾವಣೆ ಯತ್ನ:ಹೊರ ರಾಜ್ಯದ ಮೂವರ ಬಂಧನ

| Published : Oct 19 2025, 01:00 AM IST

ಖೋಟಾನೋಟು ಚಲಾವಣೆ ಯತ್ನ:ಹೊರ ರಾಜ್ಯದ ಮೂವರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಖೋಟಾನೋಟು ಚಲಾವಣೆಗೆ ಯತ್ನಿಸಿದ್ದ ಹೊರ ರಾಜ್ಯದ ಮೂವರನ್ನು ಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಖೋಟಾನೋಟು ಚಲಾವಣೆಗೆ ಯತ್ನಿಸಿದ್ದ ಹೊರ ರಾಜ್ಯದ ಮೂವರನ್ನು ಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ತಮಿಳುನಾಡು ಮೂಲದ ಮೀರ್‌ ಮೊಹಿದ್ದೀನ್‌, ಶೇಕ್‌ ಮೊಹಮ್ಮದ್ ಹಾಗೂ ರಾಜೇಶ್ವರನ್‌ ಬಂಧಿತರಾಗಿದ್ದು, ಈ ಜಾಲದಲ್ಲಿ ತಪ್ಪಿಸಿಕೊಂಡಿರುವ ಇತರೆ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ. ಆರೋಪಿಗಳಿಂದ 500 ರು. ಮುಖ ಬೆಲೆಯ 31 ನಕಲಿ ನೋಟುಗಳು ಹಾಗೂ ಕಾರು ಜಪ್ತಿಯಾಗಿದೆ. ಇತ್ತೀಚೆಗೆ ಜಯನಗರದ ಬಳಿ ಕಾರಿನಲ್ಲಿ ಖೋಟಾನೋಟು ತಂದು ಚಲಾವಣೆಗೆ ಕೆಲವರು ಯತ್ನಿಸಿರುವ ಬಗ್ಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಸಬ್ ಇನ್ಸ್‌ಪೆಕ್ಟರ್ ಬಸವರಾಜ ಪಾಟೀಲ್ ನೇತೃತ್ವದ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಮಗೆ 10 ಲಕ್ಷ ರು. ಅಸಲಿ ನೋಟು ನೀಡಿದರೆ 30 ಲಕ್ಷ ರು. ಮೌಲ್ಯದ ನಕಲಿ ನೋಟು ಕೊಡುವುದಾಗಿ ತಮಿಳುನಾಡು ಗ್ಯಾಂಗ್ ಆಫರ್‌ ನೀಡಿತ್ತು. ಈ ಮಾತಿಗೆ ಒಪ್ಪಿದ ತಮ್ಮ ಗ್ರಾಹಕರಿಗೆ ಖೋಟು ಪೂರೈಸಲು ಆ ತಂಡದ ಮೂವರು ಬಂದಿದ್ದರು. ಜಯನಗರದ 5ನೇ ಬ್ಲಾಕ್‌ನಲ್ಲಿ ಕಾರಿನಲ್ಲಿ ಕುಳಿತು ಆರೋಪಿಗಳು ಕಾರು ನಿಲ್ಲಿಸಿಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.