ಜಡ್ಜ್‌ ಮೇಲೆ ಶೂ ಎಸೆಯಲೆತ್ನ: ಚಾಮರಾಜನಗರ ಬಂದ್

| Published : Oct 19 2025, 01:00 AM IST

ಜಡ್ಜ್‌ ಮೇಲೆ ಶೂ ಎಸೆಯಲೆತ್ನ: ಚಾಮರಾಜನಗರ ಬಂದ್
Share this Article
  • FB
  • TW
  • Linkdin
  • Email

ಸಾರಾಂಶ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ನಗರದ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಶನಿವಾರ ಕರೆ ನೀಡಿದ್ದ ಚಾಮರಾಜನಗರ ಸ್ವಯಂ ಬಂದ್ ಯಶಸ್ವಿಯಾಯಿತು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ನಗರದ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಶನಿವಾರ ಕರೆ ನೀಡಿದ್ದ ಚಾಮರಾಜನಗರ ಸ್ವಯಂ ಬಂದ್ ಯಶಸ್ವಿಯಾಯಿತು.

ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಬಂದ್ ಮಾಡಲಾಗಿತ್ತು, ಬೆಳಗ್ಗೆಯೇ ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡರು ಕಾರ್ಯಕರ್ತರು ನಗರದ ಭುವನೇಶ್ವರಿ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ವ್ಯಾಪಾರ ವಹಿವಾಟು ಬಂದ್‌ ಮಾಡಿಸಲಾಯಿತು.

ಬೆಳಗ್ಗೆ ಕೆಲ ಸಮಯ ಕೆಎಸ್‌ಆರ್‌ಟಿ ಬಸ್, ಖಾಸಗಿ ಬಸ್ ಹಾಗೂ ಆಟೋಗಳು ಸಂಚರಿಸಿದವು. ಆನಂತರ ಮನವಿ ಮಾಡಿದ ಬಸ್ ಸಂಪೂರ್ಣ ಸ್ಥಗಿತವಾಯಿತು, ಇದರಿಂದಾಗಿ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವಂತಾಯಿತು. ಮೈಸೂರಿನಿಂದ ಬಂದ ಬಸ್‌ಗಳು ಬೈಪಾಸ್ ರಸ್ತೆಯಲ್ಲಿ ಸಂಚರಿಸಿ, ಡಿಪೋ ಸೇರಿದವು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿತ್ತು.

ನಗರದ ಭುವನೇಶ್ವರಿ ವೃತ್ತದಲ್ಲಿ ಸಭೆ ನಡೆಸಿದ ಮುಖಂಡರು ಮಾತನಾಡಿ, ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್‌ನನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಕೆಲವರು ಮರಣದಂಡೆನೆಯನ್ನು ವಿಧಿಸಬೇಕೆಂದು ಆಕ್ರೋಶವ್ಯಕ್ತಪಡಿಸಿದರು.

ಮಧ್ಯಾಹ್ನ ೩ ಗಂಟೆಯ ನಂತರ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗೆಳಿಗೆ ಮನವಿ ಸಲ್ಲಿಸಿದರು.

ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ಅಯ್ಯನಪುರ ಶಿವಕುಮಾರ್ ಮಾತನಾಡಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ. ರಾಕೇಶ್ ಕಿಶೋರ್ ವರ್ತನೆ ಖಂಡನೀಯ ಇದೊಂದು ಸಂವಿಧಾನದ ಮೇಲೆ ಮಾಡಿದ ಅಪಚಾರ ಎಂದರು.

ಇದು ಭಾರತ ಸಂವಿಧಾನ ವ್ಯವಸ್ಥೆ ತಲೆತಗ್ಗಿಸುವ ವಿಚಾರವಾಗಿದೆ. ಇದು ನ್ಯಾಯಾಂಗದ ಮೇಲೆ ಅವಿಶ್ವಾಸ ಮೂಡಿಸುವ ಘಟನೆ ಇದಾಗಿದೆ. ಇಂತಹ ಘಟನೆಯಿಂದ ಸಮಾಜದಲ್ಲಿ ಅಶಾಂತಿ ನಿರ್ಮಾಣ ಆಗುತ್ತದೆ. ರಾಕೇಶ್ ಕಿಶೋರ್ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಇಂತಹ ಘಟನೆಗಳು ಮರುಕಳಿಸಬಾರದು ಎಂದು ಒತ್ತಾಯಿಸಿದರು.

ದೇಶವು ಸರ್ವಧರ್ಮ ಜಾತಿ ಭಾಷೆ ಸಂಸ್ಕೃತಿಯನ್ನು ಒಳಗೊಂಡ ಸಂವಿಧಾನವಾಗಿದೆ. ಈಗಿರುವಾಗ ಇಂತಹ ಸಂದರ್ಭದಲ್ಲಿ ರಾಷ್ಟ್ರದ ಅತ್ಯುನ್ನತ ಪದವಿಯಾದ ಮತ್ತು ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ನ್ಯಾಯಾಂಗ ಪೀಠದ ಮುಖ್ಯ ನ್ಯಾಯಮೂರ್ತಿವರ ಮೇಲೆ ನಡೆದಿರುವ ಘಟನೆಯು ಅತ್ಯಂತ ಖಂಡನೀಯ ಎಂದರು.

ದೇಶದಲ್ಲಿ ಅನ್ಯಾಯವಾದಾಗ ಪ್ರತಿಯೊಬ್ಬರು ಸಂವಿಧಾನ ಬದ್ಧವಾಗಿ ಜಾತಿ, ಧರ್ಮ, ವರ್ಣವನ್ನು ಬಿಟ್ಟು ಧ್ವನಿ ಎತ್ತಬೇಕು. ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೋರಾಡಬೇಕು. ಧರ್ಮ ಮುಖ್ಯವಲ್ಲ ದೇಶ ಮುಖ್ಯ ಎಂದು ಅಂಬೇಡ್ಕರ್ ಹೇಳಿದ್ದಾರೆ ಎಂದರು.

ಮನುವಾದಿಗಳು ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿರುವುದು ಖಂಡನೀಯ, ನ್ಯಾಯಾಂಗದ ಮೇಲೆ ದೌರ್ಜನ್ಯ ಮಾಡಲು ಹೊರಟ್ಟಿದ್ದು ಸರಿಯಲ್ಲ, ವಕೀಲನ ಮೇಲೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ದೇಶಕ್ಕೆ ಅವಮಾನ ಮಾಡಿರುವ ಪ್ರಕರಣ ಇದಾಗಿದೆ. ನ್ಯಾಯ ದೊರಕಿಸುವ ನ್ಯಾಯಾಧೀಶರಿಗೆ ಶೂ ಎಸೆಯಲು ಯತ್ನಿಸಿದ್ದು ಖಂಡನೀಯ. ಆ ವಕೀಲರಿಗೆ ಗಡಿಪಾರು ಮಾಡುವುದಲ್ಲ ಗಲ್ಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಮೈಸೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಪುರುಷೋತ್ತಮ್, ಮುಖಂಡರಾದ ಅಯ್ಯನಪುರ ಚಿಕ್ಕಮಹದೇವ್, ಆರ್.ಮಹದೇವ್ , ಬಿ.ಕೆ. ರವಿಕುಮಾರ್, ಪು. ಶ್ರೀನಿವಾಸನಾಯಕ ಸೋಮೇಶ್ವರ್, ಉಮೇಶ್ ಆರ್, ಅಬ್ರಹಾರ್ ಅಹಮದ್, ಬಿಎಸ್ ಪಿ ನಾಗಯ್ಯ, ಬ್ಯಾಡಮೂಡ್ಲು ಬಸವಣ್ಣ, ಪ್ರಸನ್ನಕುಮಾರ್, ಪುಟ್ಟಸ್ವಾಮಿ, ವಿವಿಧ ಸಂಘಟನೆಳ ಪದಾಧಿಕಾರಿಳು, ವಿವಿಧ ಸಮಾಜದ ಮುಖಂಡರು ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಆರ್‌ಎಸ್‌ಎಸ್ ಬಟ್ಟಿಂಗ್ಸ್ ತೆರವು:ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಶನಿವಾರ ಸಂಜೆ ಆರ್‌ಎಸ್‌ಎಸ್ ಪಥ ಸಂಚಲನ ಇದ್ದುದರಿಂದ ಭುವನೇಶ್ವರಿ ವೃತ್ತದಲ್ಲಿ ಬಟ್ಟಿಂಗ್ಸ್ ಕಟ್ಟಲಾಗಿತ್ತು, ಇದರಿಂದ ಕೋಪಗೊಂಡ ಸಂವಿಧಾನ ಸಂರಕ್ಷಣಾ ಸಮಿತಿಯ ಕಾರ್ಯಕರ್ತರ, ಆರ್.ಎಸ್. ಎಸ್. ಸಂವಿಧಾನ ವಿರೋಧಿಯಾಗಿದೆ, ಇಂದು ನಾವು ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಬಂದ್‌ಗೆ ಅನುಮತಿ ಪಡೆದಿದ್ದೇವೆ ಎಂದರು.

ಈ ಬಟ್ಟಿಂಗ್ಸ್ ಕೆಳಗಡೆ ಕುಳಿತು ಸಭೆ ಮಾಡುವುದಿಲ್ಲ, ತಕ್ಷಣ ಇದನ್ನು ತೆರವುಗೊಳಿಸಿ ಇಲ್ಲದಿದ್ದರೆ ನಾವೇ ತೆರವಿಗೆ ಮುಂದಾಗುತ್ತೇವೆ ಎಂದು ಪೊಲೀಸರಿಗೆ ಎಚ್ಚರಿಸಿದರು. ತಕ್ಷಣ ನಗರಸಭೆಗೆ ತಿಳಿಸಲಾಯಿತು, ಅಷ್ಟರೊಳಗೆ ಆರ್.ಎಸ್. ಎಸ್ ಕಾರ್ಯಕರ್ತರೇ ಬಂದು ಬಟ್ಟಿಂಗ್ಸ್ ಬಿಚ್ಚಿಕೊಂಡು ಹೋದರು.