ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶ ಕಂಡ ಅಪರೂಪದ ನಾಯಕ. ದಲಿತರು ಮಾತ್ರವಲ್ಲದೆ ಎಲ್ಲ ಶೋಷಿತರಿಗೆ ಗೌರವ ತಂದುಕೊಡಲು ಪ್ರಯತ್ನಿಸಿದರಲ್ಲದೆ, ದೇಶದಲ್ಲಿ ಸಾಮಾಜಿಕ ನ್ಯಾಯ ಸಿಗದವರ ಪರ ಹೋರಾಟ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶ ಕಂಡ ಅಪರೂಪದ ನಾಯಕ. ದಲಿತರು ಮಾತ್ರವಲ್ಲದೆ ಎಲ್ಲ ಶೋಷಿತರಿಗೆ ಗೌರವ ತಂದುಕೊಡಲು ಪ್ರಯತ್ನಿಸಿದರಲ್ಲದೆ, ದೇಶದಲ್ಲಿ ಸಾಮಾಜಿಕ ನ್ಯಾಯ ಸಿಗದವರ ಪರ ಹೋರಾಟ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನ
ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಅಗತ್ಯವಿರುವ ಸಂವಿಧಾನ ಕುರಿತು ಚಿಂತನೆ ನಡೆಸಿ, ಇತರ ದೇಶಗಳ ಸಂವಿಧಾನ ಅಧ್ಯಯನ ಮಾಡಿ ಉತ್ತಮ ಸಂವಿಧಾನ ನೀಡಿದರು ಎಂದರು.
ನಮ್ಮ ಸಾಮಾಜಿಕ ವ್ಯವಸ್ಥೆ ಬದಲಾವಣೆಯಾಗಬೇಕು
ನಮ್ಮ ಸಾಮಾಜಿಕ ವ್ಯವಸ್ಥೆ ಬದಲಾವಣೆಯಾಗಬೇಕು. ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು, ಸಾಮಾಜಿಕ ನ್ಯಾಯ ಸ್ಥಾಪನೆಯಾಗಬೇಕು ಎಂದು ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಅದರ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಲು ಸಂವಿಧಾನ ಪೀಠಿಕೆ ಬೋಧಿಸಲಾಗುತ್ತಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕು ಮತ್ತು ಬಾಧ್ಯತೆ ನೀಡಿದೆ. ಸಂವಿಧಾನದ ಧ್ಯೇಯೋದ್ದೇಶಗಳು ಎಲ್ಲರಿಗೂ ಅರ್ಥವಾಗಬೇಕು ಎಂಬ ಕಾರಣದಿಂದ ಸರ್ಕಾರ ಅದನ್ನು ಜಾರಿ ಮಾಡಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರು ತಮ್ಮ ಕೊನೆಯ ದಿನಗಳಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು. ಹುಟ್ಟುವಾಗ ಹಿಂದುವಾಗಿದ್ದೆ, ಸಾಯುವಾಗ ಹಿಂದುವಾಗಿ ಸಾಯಲಾರೆ ಎಂದಿದ್ದರು. ಹಿಂದು ಧರ್ಮದಲ್ಲಿದ್ದ ಸಾಮಾಜಿಕ ವ್ಯವಸ್ಥೆಗೆ ಅವರು ರೋಸಿ ಹೋಗಿ ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಿದ್ದರು ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಡಾ.ಎಚ್.ಸಿ.ಮಹದೇವಪ್ಪ ಇತರರಿದ್ದರು.