ಸಾರಾಂಶ
ಪಟ್ಟಣದಲ್ಲಿ ಮಂಗಳವಾರ ಬೆಳಕಿನ ಹಬ್ಬ ದೀಪಾವಳಿಯ ಅಮವಾಸ್ಯೆಯ ಸಂಭ್ರಮ ಕಂಡುಬಂದಿತ್ತು. ಐತಿಹಾಸಿಕ ಮೂಲನಂದೀಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿತ್ತು. ವಿಶೇಷ ಪೂಜೆ, ಪುನಸ್ಕಾರಗಳಲ್ಲಿ ಜನರು ನಿರತರಾಗಿದ್ದರು.
ಬಸವರಾಜ ನಂದಿಹಾಳ
ಬಸವನಬಾಗೇವಾಡಿ : ಪಟ್ಟಣದಲ್ಲಿ ಮಂಗಳವಾರ ಬೆಳಕಿನ ಹಬ್ಬ ದೀಪಾವಳಿಯ ಅಮವಾಸ್ಯೆಯ ಸಂಭ್ರಮ ಕಂಡುಬಂದಿತ್ತು. ಐತಿಹಾಸಿಕ ಮೂಲನಂದೀಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿತ್ತು. ವಿಶೇಷ ಪೂಜೆ, ಪುನಸ್ಕಾರಗಳಲ್ಲಿ ಜನರು ನಿರತರಾಗಿದ್ದರು.
ಪಟ್ಟಣದ ಬಸವೇಶ್ವರ ವೃತ್ತ ಸೇರಿದಂತೆ ಮಾರುಕಟ್ಟೆ ಪ್ರದೇಶದಲ್ಲಿ ಹಬ್ಬದ ಖರೀದಿಯ ಭರಾಟೆ ಜೋರಾಗಿತ್ತು. ಮಾರುಕಟ್ಟೆಯಲ್ಲಿ ಪೂಜೆಗೆ ಅಗತ್ಯವಿರುವ ಚೆಂಡು ಹೂ, ಸೇವಂತಿಗೆ, ಬಾಳೆದಿಂಡು, ಕಬ್ಬು, ಸೇಬು, ಬಾಳೆಹಣ್ಣು , ಕಬ್ಬು, ಕುಂಬಳಕಾಯಿ ಸೇರಿದಂತೆ ವಿವಿಧ ಹಣ್ಣು-ಹಂಪಲಗಳ ಖರೀದಿಯಲ್ಲಿ ತೊಡಗಿದ್ದರು. ಚೆಂಡು ಹೂ ಪ್ರತಿ ಕೆಜಿಗೆ ₹ 70-120, ಸೇವಂತಿಗೆ ₹ 150-200 ಮಾರಾಟವಾಯಿತು. ವಿವಿಧ ಹಣ್ಣುಗಳ ದರ ಹೆಚ್ಚಳವಿತ್ತು. ಬೂದು ಕುಂಬಳಕಾಯಿ ₹ 50 ರಿಂದ 300, ಬಾಳೆ ಗಿಡ ಜೋಡಿಗೆ ₹ 30-1000 ರವರೆಗೂ ಮಾರಾಟವಾದವು. ಪಟ್ಟಣದ ಹೊರವಲಯದಲ್ಲಿ ಹಾಕಲಾಗಿದ್ದ ಅಂಗಡಿಗಳಲ್ಲಿ ಪಟಾಕ್ಷಿ ವ್ಯಾಪಾರವೂ ಜೋರಾಗಿತ್ತು.
ಬೆಳಗ್ಗೆಯಿಂದಲೇ ಹಬ್ಬದ ಚಟುವಟಿಕೆಗಳು ಆರಂಭವಾಗಿದ್ದವು. ಮಹಿಳೆಯರು ಹಬ್ಬದ ಅಡುಗೆ ಮಾಡಿದ ನಂತರ ಕುಟುಂಬದ ಸದಸ್ಯರೆಲ್ಲರೂ ಸೇರಿಕೊಂಡು ಶ್ರದ್ದಾ ಭಕ್ತಿಯಿಂದ ಲಕ್ಷ್ಮೀ ಪೂಜೆಯಲ್ಲಿ ಭಾಗಿಯಾದರು. ವಾಹನಗಳ ಮಾಲೀಕರು, ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆಯನ್ನು ಆಚರಿಸಿದರು. ಪೂಜೆಯಾದ ನಂತರ ಮಕ್ಕಳು ಸೇರಿದಂತೆ ಎಲ್ಲರೂ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು. ಮನೆ, ಅಂಗಡಿಗಳ ಮುಂದೆ ಹಣತೆ, ರಂಗೋಲಿ, ಆಕಾಶ ಬುಟ್ಟಿ, ರಂಗು ರಂಗಿನ ವಿದ್ಯುದೀಪಗಳ ಅಲಂಕಾರ ರಾರಾಜಿಸುತ್ತಿತ್ತು.
ಪಟ್ಟಣದಲ್ಲಿ ಸೋಮವಾರ ನರಕ ಚತುರ್ದಶಿ ಆಚರಿಸಲಾಯಿತು. ಮಂಗಳವಾರ ಸಂಜೆ ದೀಪಾವಳಿ ಅಮವಾಸ್ಯೆ ಆಚರಣೆ ಮಾಡಿದರು. ಬುಧವಾರ ದೀಪಾವಳಿ ಪಾಡ್ಯ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲು ಜನರು ಸಿದ್ಧತೆಯಲ್ಲಿದ್ದಾರೆ. ಪಾಡ್ಯದಂದು ಗುಳವ್ವರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜೆ ನೆರವೇರುವುದು ಸಂಪ್ರದಾಯ.
ಪಟ್ಟಣದ ಹೃದಯ ಭಾಗದಲ್ಲಿರುವ ಮಾರುಕಟ್ಟೆಗೆ ಹೆಚ್ಚಿನ ಜನರು ಆಗಮಿಸಿದ್ದರಿಂದ ಅಲ್ಲಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಪ್ರತಿ ಹಬ್ಬದಲ್ಲಿ ಆಗುತ್ತಿದ್ದಂತೆ ಜನಸಂದಣಿ ಆಗದಂತೆ ವ್ಯಾಪಾರ ವಹಿವಾಟು ನಡೆಯಿತು. ಆಯ್ದ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಹಾಗೂ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.