ಸಾರಾಂಶ
ಆಂಧ್ರಪ್ರದೇಶದಲ್ಲಿ 1500ಕ್ಕೂ ಹೆಚ್ಚು ಬಯಲಾಟಗಳಿಗೆ ಸ್ತ್ರೀಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ.
ಬಳ್ಳಾರಿ: ಕರ್ನಾಟಕ ಬಯಲಾಟ ಅಕಾಡೆಮಿಯು 2023-24, 2024-25ನೇ ಸಾಲಿನ ಗೌರವ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದ್ದು, ಜಿಲ್ಲೆಯ ಇಬ್ಬರು ಹಿರಿಯ ಬಯಲಾಟ ಕಲಾವಿದರು ಗೌರವ ಪ್ರಶಸ್ತಿಗೆ ಹಾಗೂ ಓರ್ವರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
2023-24ನೇ ಸಾಲಿನ ಗೌರವ ಪ್ರಶಸ್ತಿಗೆ ಹಿರಿಯ ಬಯಲಾಟ ಕಲಾವಿದೆ ಓಂಕಾರಮ್ಮ, 2024-25ನೇ ಸಾಲಿನ ಗೌರವ ಪ್ರಶಸ್ತಿಗೆ ವಂದವಾಗಲಿ ಎಚ್.ಎಂ. ಪಂಪಯ್ಯಸ್ವಾಮಿ, 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ತೊಗಲುಗೊಂಬೆ ಕಲಾವಿದ ಕೆ.ಹೊನ್ನೂರಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ಬಯಲಾಟ ಅಕಾಡೆಮಿ ತಿಳಿಸಿದೆ.ಕಪ್ಪಗಲ್ ಓಂಕಾರಮ್ಮ:
ಬಳ್ಳಾರಿ ತಾಲೂಕಿನ ಕಪ್ಪಗಲ್ ಗ್ರಾಮದ ಓಂಕಾರಮ್ಮ ಬಯಲಾಟ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದವರು. 18ನೇ ವಯಸ್ಸಿನಲ್ಲಿ ರಂಗಪ್ರವೇಶ ಪಡೆದು, ಕರ್ನಾಟಕ, ಆಂಧ್ರಪ್ರದೇಶದಲ್ಲಿ 1500ಕ್ಕೂ ಹೆಚ್ಚು ಬಯಲಾಟಗಳಿಗೆ ಸ್ತ್ರೀಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ. ಅಭಿಮನ್ಯುಕಾಳಗ, ಸುಂದೋಪ ಸುಂದರ, ರಾಮಾಯಣ, ಗಿರಿಜಾಕಲ್ಯಾಣ ಸೇರಿದಂತೆ ಅನೇಕ ಪೌರಾಣಿಕ ಪಾತ್ರಗಳಿಗೆ ಜೀವತುಂಬಿದ್ದಾರೆ.ಪಂಪಯ್ಯಸ್ವಾಮಿ:
ಕರ್ನಾಟಕ ಆಂಧ್ರ ಗಡಿಭಾಗ ವಂದವಾಗಲಿ ಗ್ರಾಮದ ಪಂಪಯ್ಯಸ್ವಾಮಿ 16ನೇ ವಯಸ್ಸಿನಲ್ಲಿಯೇ ಅಭಿಮನ್ಯು ಕಾಳಗ ಬಯಲಾಟದ ಮೂಲಕ ಕಲಾಕ್ಷೇತ್ರ ಪ್ರವೇಶ ಮಾಡಿದವರು. ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ 1 ಸಾವಿರಕ್ಕೂ ಹೆಚ್ಚು ಬಯಲಾಟಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೂಲ ಬಯಲಾಟ ಹಾಗೂ ಆಂಧ್ರದಲ್ಲಿ ಬಯಲಾಟ ಮೂಲಕ ಕನ್ನಡಭಾಷೆ ಉಳಿವಿಗೆ ಶ್ರಮಿಸಿದ್ದಾರೆ.ಕೆ.ಹೊನ್ನೂರುಸ್ವಾಮಿ:
ಬಳ್ಳಾರಿಯ ಕೆ.ಹೊನ್ನೂರಸ್ವಾಮಿ ಅಳಿವಿನಂಚಿನಲ್ಲಿರುವ ತೊಗಲುಗೊಂಬೆ ಕಲಾ ಪ್ರಕಾರವನ್ನು ಜೀವಂತವಾಗಿರಿಸಲು ಸಾಕಷ್ಟು ಶ್ರಮಿಸಿದ್ದಾರೆ. 2009-10ರಲ್ಲಿ ಶ್ರೀಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡವನ್ನು ಕಟ್ಟಿ ರಾಜ್ಯದ ನಾನಾ ಕಡೆ ಪ್ರದರ್ಶನ ನೀಡಿದ್ದಾರೆ. ರಾಮಾಯಣ, ಮಹಾಭಾರತದ ಮಹಾಕಾವ್ಯಗಳಲ್ಲಿನ ಪಾತ್ರಗಳಿಗೆ ತೊಗಲುಗೊಂಬೆ ಮೂಲಕ ಜೀವದ ತುಂಬಿರುವ ಹೊನ್ನೂರಸ್ವಾಮಿ ಸಾಮಾಜಿಕ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶಿಷ್ಟವಾದ ತೊಗಲುಗೊಂಬೆ ಕಲೆಯನ್ನು ಬಳಸಿಕೊಂಡು ಸೈ ಎನಿಸಿಕೊಂಡಿದ್ದಾರೆ.