ರೈಲ್ವೆಯ 6 ಕಟ್ಟಡಗಳಿಗೆ ಬಿಇಇ ಶೂನ್ಯ+ ಸರ್ಟಿಫಿಕೆಟ್‌!

| Published : Mar 15 2025, 01:02 AM IST

ಸಾರಾಂಶ

. ನೈರುತ್ಯ ರೈಲ್ವೆ ವಲಯ ಪ್ರಸಕ್ತ ವರ್ಷ ಅಂದರೆ 2024ರ ಡಿಸೆಂಬರ್‌ ವರೆಗೂ 4.79 ದಶಲಕ್ಷ ಯುನಿಟ್‌ ಅನ್ನು ಸೌರಶಕ್ತಿಯಿಂದ ಉತ್ಪಾದಿಸುವ ಮೂಲಕ ₹ 2.90 ಕೋಟಿ ಉಳಿತಾಯ ಮಾಡಿಕೊಂಡಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಸೌರಶಕ್ತಿ ಬಳಕೆ ಮೂಲಕ ನೈರುತ್ಯ ರೈಲ್ವೆ ವಲಯ ವಿದ್ಯುತ್‌ ಖರೀದಿ ಕಡಿಮೆ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿದೆ. ಪ್ರಸಕ್ತ ವರ್ಷ ಅಂದರೆ 2024ರ ಡಿಸೆಂಬರ್‌ ವರೆಗೂ 4.79 ದಶಲಕ್ಷ ಯುನಿಟ್‌ ಅನ್ನು ಸೌರಶಕ್ತಿಯಿಂದ ಉತ್ಪಾದಿಸುವ ಮೂಲಕ ₹ 2.90 ಕೋಟಿ ಉಳಿತಾಯ ಮಾಡಿಕೊಂಡಿದೆ.

ಈ ನಡುವೆ ಬೆಂಗಳೂರು ವಿಭಾಗದ ನಾಲ್ಕು ನಿಲ್ದಾಣಗಳು ಸೇರಿ 6 ಕಟ್ಟಡಗಳು ಅಗತ್ಯಕ್ಕಿಂತ ಹೆಚ್ಚು ವಿದ್ಯುತ್‌ ಉತ್ಪಾದಿಸಿದ ಪರಿಣಾಮ ಕೇಂದ್ರ ಸರ್ಕಾರದ "ಬಿಇಇ ಶೂನ್ಯ ಪ್ಲಸ್‌ " ಪ್ರಮಾಣಪತ್ರ ಪಡೆಯುವಲ್ಲಿ ಯಶಸ್ವಿಯಾಗಿವೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ವಿಭಾಗದಲ್ಲಿ ಬರುವ ದೇವರಪಲ್ಲಿ ರೈಲ್ವೆ ನಿಲ್ದಾಣ, ಮಲ್ಗೂರು, ವಡ್ಡರಹಳ್ಳಿ, ನಾರಾಯಣಪುರ ನಿಲ್ದಾಣ, ಬೆಂಗಳೂರು ರೈಲ್ವೆ ಆಸ್ಪತ್ರೆ, ಹೆಜ್ಜಾಲದಲ್ಲಿನ ಭಾರತೀಯ ರೈಲ್ವೆ ವಿಪತ್ತು ನಿರ್ವಹಣಾ ಸಂಸ್ಥೆ ಈ ಆರು ಕಟ್ಟಡಗಳು ಪ್ರಸಕ್ತ ವರ್ಷದಲ್ಲಿ ಸೌರಶಕ್ತಿ ಮೂಲಕ ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್‌ ಉತ್ಪಾದಿಸಿವೆ. ಈ ಕಾರಣದಿಂದ ಕೇಂದ್ರ ಸರ್ಕಾರದ ಇಂಧನ ಸಚಿವಾಲಯದ ವ್ಯಾಪ್ತಿಯಲ್ಲಿನ ಬ್ಯೂರೋ ಆಫ್‌ ಎನರ್ಜಿ ಎಫಿಶಿಯನ್ಸಿಯಿಂದ ಶೂನ್ಯ ಪ್ಲಸ್‌ ಪ್ರಮಾಣಪತ್ರ ನೀಡಿವೆ. ಇದರಲ್ಲಿ ಎರಡು ನಿಲ್ದಾಣಗಳಿಗೆ ಡಿಸೆಂಬರ್‌ನಲ್ಲಿ ಪ್ರಮಾಣ ಪತ್ರ ನೀಡಿದ್ದರೆ, ಉಳಿದ ನಾಲ್ಕು ಕಟ್ಟಡಗಳಿಗೆ ಕಳೆದ 2 ದಿನಗಳ ಹಿಂದೆಯಷ್ಟೇ ಪ್ರಮಾಣ ಪತ್ರ ನೀಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಮೂಲಗಳು ತಿಳಿಸಿವೆ.

ಸ್ವಾವಲಂಬಿಯಾಗುವತ್ತ ಹೆಜ್ಜೆ

ನೈಋತ್ಯ ರೈಲ್ವೆ ವಲಯವೂ ರೈಲು ನಿಲ್ದಾಣ, ಸೇವಾ ಕಟ್ಟಡ, ಎಲ್ಸಿ ಗೇಟ್‌ಗಳು ಸೇರಿದಂತೆ ಎಲ್ಲಿ ವಿದ್ಯುತ್ ಅವಶ್ಯಕತೆ ಇದೆಯೇ ಅಲ್ಲೆಲ್ಲ ಸೋಲಾರ್ ಪ್ಯಾನೆಲ್‌ ಅಳವಡಿಸಿ ತನ್ನ ಇಂಧನ ಅಗತ್ಯವನ್ನು ತಾನೇ ಉತ್ಪಾದಿಸಲು ದಿಟ್ಟ ಹೆಜ್ಜೆ ಇಟ್ಟಿದೆ.

ವಲಯದಲ್ಲಿ ಅಳವಡಿಸಲಾದ ಸೋಲಾರ್ ಫಲಕಗಳ ಸಾಮರ್ಥ್ಯ 6712 ಕೆಡಬ್ಲೂಪಿ (ಕಿಲೋವ್ಯಾಟ್‌ ಪೀಕ್‌) ಆಗಿದ್ದು, ಇದರಲ್ಲಿ 146 ನಿಲ್ದಾಣಗಳಿಂದ 2159.705 ಕೆಡಬ್ಲೂಪಿ, 27 ಸೇವಾ ಕಟ್ಟಡಗಳಿಂದ 4280.25 ಕೆಡಬ್ಲುಪಿ, 312 ಲೆವಲ್‌ ಕ್ರಾಸಿಂಗ್‌ ಗೇಟ್‌ಗಳಿಂದ 141.32 ಕೆಡಬ್ಲುಪಿ ಮತ್ತು 22 ಸೌರ ಪಂಪ್‌ಗಳಿಂದ 130.360 ಕೆಡಬ್ಲುಪಿ ವಿದ್ಯುತ್‌ ಪಡೆಯಲಾಗುತ್ತಿದೆ.

ನಿಲ್ದಾಣಗಳಲ್ಲಿ ಹುಬ್ಬಳ್ಳಿ, ಕೆಎಸ್ಆರ್ ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ, ಹೊಸಪೇಟೆ, ಗದಗ ಮತ್ತು ಬಳ್ಳಾರಿ ನಿಲ್ದಾಣಗಳಲ್ಲಿ ಸೌರ ಮೇಲ್ಛಾವಣಿ ಫಲಕ ಅಳವಡಿಸಿದೆ. 27 ಸೇವಾ ಕಟ್ಟಡಗಳಾದ ರೈಲ್ವೆ ಸೌಧ, ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಗಳು (ಹುಬ್ಬಳ್ಳಿ ಮತ್ತು ಬೆಂಗಳೂರು), ಹಳೆಯ ಪ್ರಧಾನ ವ್ಯವಸ್ಥಾಪಕರ ಕಚೇರಿ (ಹುಬ್ಬಳ್ಳಿ), ಪಾರ್ಸೆಲ್ ಕಚೇರಿ (ಬೆಂಗಳೂರು), ರೈಲ್ವೆ ಆಸ್ಪತ್ರೆ (ಬೆಂಗಳೂರು), ಮತ್ತು ಭಾರತೀಯ ರೈಲ್ವೆ ವಿಪತ್ತು ನಿರ್ವಹಣಾ ಸಂಸ್ಥೆ (ಹೆಜ್ಜಾಲ) ಸೇರಿದಂತೆ ಇತರೆ ಕಟ್ಟಡಗಳಲ್ಲಿ ಸೌರ ಫಲಕ ಅಳವಡಿಸಲಾಗಿದೆ.

ಹುಬ್ಬಳ್ಳಿ ಕಾರ್ಯಾಗಾರದಲ್ಲಿ 1045 ಕೆಡಬ್ಲುಪಿ ಸಾಮರ್ಥ್ಯದ ಮತ್ತು ಮೈಸೂರು ಕಾರ್ಯಾಗಾರದಲ್ಲಿ 530 ಕೆಡಬ್ಲುಪಿ ಸಾಮರ್ಥ್ಯದ ಸೌರ ಫಲಕ ಅಳವಡಿಸಲಾಗಿದೆ. ಕೃಷ್ಣರಾಜಪುರಂ ಡೀಸೆಲ್ ಲೋಕೋ ಶೆಡ್ (240 ಕೆಡಬ್ಲುಪಿ) ಮತ್ತು ಹುಬ್ಬಳ್ಳಿ ಇಎಂಡಿ ಶೆಡ್ (640 ಕೆಡಬ್ಲುಪಿ)ಗಳಲ್ಲಿ ಕೂಡ ಸೌರ ಫಲಕ ಅಳವಡಿಸಲಾಗಿದೆ. ಇದಲ್ಲದೇ, 312 ಲೆವೆಲ್ ಕ್ರಾಸಿಂಗ್ ಗೇಟ್‌ಗಳಿಗೆ ಚಾವಣಿ ಸೌರ ಫಲಕ ಅಳವಡಿಸಲಾಗಿದೆ. ಸೌರಶಕ್ತಿ ಉತ್ಪಾದನೆ ಹಾಗೂ ಬಳಕೆಯಿಂದ ಈ ನೈರುತ್ಯ ವಲಯಕ್ಕೆ 4 ವರ್ಷದಲ್ಲಿ ಕೋಟಿ ಕೋಟಿ ಹಣ ಉಳಿತಾಯವಾಗಿದೆ.

ಒಟ್ಟಿನಲ್ಲಿ ಸೌರಶಕ್ತಿ ಬಳಕೆ ಮೂಲಕ ವಿದ್ಯುತ್‌ ಖರೀದಿ ಕಡಿಮೆ ಮಾಡುವ ಮೂಲಕ ಸ್ವಾವಲಂಬಿಯಾಗುವತ್ತ ದಿಟ್ಟ ಹೆಜ್ಜೆಯನ್ನಂತೂ ನೈರುತ್ಯ ರೈಲ್ವೆ ವಲಯ ಹೊಂದಿದೆ.

ಉತ್ಪಾದನೆ; ಉಳಿತಾಯ ಎಷ್ಟು?

ವರ್ಷ ಉತ್ಪಾದನೆ (ಯುನಿಟ್‌) ಉಳಿತಾಯ (ಕೋಟಿಗಳಲ್ಲಿ)

2021-224.61 ದಶಲಕ್ಷ ಯು. 1.96 ಕೋ

2022-234.90 ದಶಲಕ್ಷ ಯು. 2.06 ಕೋಟಿ

2023-24 5.69 ದಶಲಕ್ಷ ಯು. 2.81 ಕೋಟಿ

2024-25 (ಡಿಸೆಂಬರ್‌) 4.79 ದಶಲಕ್ಷ ಯು. 2.90 ಕೋಟಿ

ಉಳಿತಾಯ

ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಸೌರಶಕ್ತಿ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರಸಕ್ತ ವರ್ಷ

ಅಂದರೆ 2024ರ ಡಿಸೆಂಬರ್‌ ವರೆಗೆ ಬರೋಬ್ಬರಿ 4.79 ದಶಲಕ್ಷ ಯುನಿಟ್‌ ವಿದ್ಯುತ್‌ನ್ನು ಸೌರಶಕ್ತಿ ಮೂಲಕ ಉತ್ಪಾದಿಸಲಾಗಿದೆ. ಇದರಿಂದ 2.90 ಕೋಟಿ ಉಳಿತಾಯವಾಗಿದೆ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚುತ್ತಾ ಸಾಗಿದೆ.

- ಮಂಜುನಾಥ ಕನಮಡಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈರುತ್ಯ ರೈಲ್ವೆ ವಲಯ