ಸಾರಾಂಶ
‘ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ ಎಷ್ಟು ಕೋಟಿ ರು. ಅನುದಾನ ನೀಡುತ್ತೇವೆ ಎಂಬ ಬಗ್ಗೆ ಸದನದಲ್ಲೇ ಉತ್ತರ ಕೊಡಬೇಕು ಎಂದು ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದರು.
ಸುವರ್ಣ ವಿಧಾನ ಪರಿಷತ್ತು : ‘ಉತ್ತರ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳನ್ನು ಆದ್ಯತೆ ಮೇಲೆ ಪೂರ್ಣಗಳಿಸಲು ಕ್ರಮ ವಹಿಸಬೇಕು. ಈ ಭಾಗವನ್ನು ಪ್ರವಾಸೋದ್ಯಮ ಕೇಂದ್ರವಾಗಿಸಲು ಸರ್ವಪಕ್ಷಗಳ ಕ್ರಿಯಾ ಸಮಿತಿ ರಚಿಸಬೇಕು. 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಲ್ಲೇ ನಿರ್ಮಿಸಬೇಕು. ಈ ಭಾಗದ ಅಭಿವೃದ್ಧಿಗೆ ಎಷ್ಟು ಕೋಟಿ ರು. ಅನುದಾನ ನೀಡುತ್ತೇವೆ ಎಂಬ ಬಗ್ಗೆ ಸದನದಲ್ಲೇ ಉತ್ತರ ಕೊಡಬೇಕು ಎಂದು ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದರು.
ಶುಕ್ರವಾರ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಕುರಿತ ಮಾತನಾಡಿದ ಬಿಜೆಪಿಯ ಕೇಶವ ಪ್ರಸಾದ್, ಪ್ರತಾಪ್‌ಸಿಂಹ ನಾಯಕ್, ಕಾಂಗ್ರೆಸ್ಸಿನ ಡಿ.ಟಿ. ಶ್ರೀನಿವಾಸ್, ನಾಗರಾಜ್ ಯಾದವ್ ಸೇರಿ ಅನೇಕ ಸದಸ್ಯರು, ರಾಜ್ಯ ಸರ್ಕಾರ ಇಚ್ಛಾಶಕ್ತಿಯಿಂದ ಅಭಿವೃದ್ಧಿಗೆ ಮುಂದಾಗಬೇಕು, ಕಾಲ ಮಿತಿಯಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದರು.
ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್, 60ರ ದಶಕದಲ್ಲಿ ಕೆಲವೇ ಸಾವಿರ ಕೋಟಿಗಳಲ್ಲಿ ಮುಗಿಯಬೇಕಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಇಂದು ಲಕ್ಷಾಂತರ ಕೋಟಿ ರು. ವ್ಯಯ ಮಾಡಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳಿಗೆ 60 ಸಾವಿರ ಕೋಟಿ ರು. ಖರ್ಚು ಮಾಡುವ ಬದಲು ಈ ಯೋಜನೆಗೆ 30 ಸಾವಿರ ಕೋಟಿ ರು. ಬಜೆಟ್‌ನಲ್ಲಿ ಇಟ್ಟಿದ್ದರೆ ಈ ಭಾಗದ ಭಗೀರಥ ಆಗುತ್ತಿದ್ದರು. ಇದೇ ರೀತಿ ಈ ಭಾಗದಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ನಿಧಾನಗತಿಯಲ್ಲಿವೆ, ಕೆಲವು ಬಾಕಿ ಉಳಿದಿವೆ. ಅಂಥ ಎಲ್ಲ ಯೋಜನೆಗಳನ್ನು ಆದ್ಯತೆ ಮೇಲೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ನೈಸರ್ಗಿಕ ಸಂಪತ್ತಿಗೆ ಕೊರತೆ ಇಲ್ಲ. ಆದರೆ, ಈ ಭಾಗದ ಸಮಗ್ರ ಅಭಿವೃದ್ಧಿಗೆ ಇಚ್ಛಾಶಕ್ತಿಯ ನಾಯಕತ್ವದ ಕೊರತೆ ಇದೆ. ಸರ್ಕಾರದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಎನ್ನುವುದಲ್ಲ. ಉತ್ತರ ಕರ್ನಾಟಕ ಯಾವ್ಯಾವ ಯೋಜನೆಗಳಿಗೆ ಎಷ್ಟೆಷ್ಟು ಅನುದಾನ ನೀಡುತ್ತೇವೆ ಎಂದು ಅಧಿವೇಶನದಲ್ಲೇ ಘೋಷಿಸಬೇಕು ಎಂದರು.
ಕ್ರಿಯಾ ಸಮಿತಿ ರಚಿಸಿ: ಬಿಜೆಪಿಯ ಕೇಶವ ಪ್ರಸಾದ್ ಮಾತನಾಡಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅನೇಕ ಐತಿಹಾಸಿಕ ದೇವಾಲಯಗಳು, ನದಿಗಳು, ಜಲಾಶಯಗಳು, ಚಾರಣಧಾಮಗಳು, ಕೋಟೆ ಕೊತ್ತಲುಗಳು ಸೇರಿ ಅನೇಕ ಪ್ರವಾಸಿತಾಣಗಳಿವೆ. ಹಾಗಾಗಿ ಈ ಭಾಗವನ್ನು ಪ್ರವಾಸೀ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ವಪಕ್ಷಗಳನ್ನೂ ಒಳಗೊಂಡ ಕ್ರಿಯಾ ಸಮಿತಿ ರೂಪಿಸಬೇಕು. ಈ ಸಮಿತಿಯಿಂದ ಉತ್ತಮ ವರದಿ ಪಡೆದು ಅದನ್ನು ಮುಂದಿನ ಬೆಳಗಾವಿ ಅಧಿವೇಶನದೊಳಗೆ ಹಂತ ಹಂತವಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಅಂತಾರಾಷ್ಟ್ರೀಯ ಏರ್ಪೋರ್ಟ್: ಕಾಂಗ್ರೆಸ್ ಸದಸ್ಯ ಡಿ.ಟಿ.ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉತ್ತರ ಕರ್ನಾಟಕದ ಭಾಗದಲ್ಲಿ ನಿರ್ಮಿಸಬೇಕು. ಇದರಿಂದ ಸರ್ಕಾರದ ಬಿಯಾಂಡ್ ಬೆಂಗಳೂರು ಪರಿಕಲ್ಪನೆಗೆ ಅರ್ಥಸಿಗುತ್ತದೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.
ಹಿಡಕಲ್ ಜಲಾಶಯಕ್ಕೆ ಹಿಂದೆ ಮುಳುಗಡೆಯಾದ ಭೂಮಿಗೆ ಸಂಬಂಧಿಸಿದ ಸಂತ್ರಸ್ತರಿಗೆ ಅಧಿಕಾರಿಗಳ ಲೋಪದಿಂದ ಅರಣ್ಯ ಭೂಮಿಯನ್ನು ಪುನರ್ವಸತಿಗಾಗಿ ಕೊಟ್ಟಿದ್ದಾರೆ. ಇದರಿಂದ ಆ ಭೂಮಿಗೆ ಇಷ್ಟು ವರ್ಷವಾದರೂ ಒಂದು ನಕ್ಷೆ, ಮ್ಯುಟೇಷನ್, ಹದ್ದುಬಸ್ತು ಸೇರಿ ಒಂದೇ ಒಂದು ಕಂದಾಯ ದಾಖಲೆಗಳಿಲ್ಲ. ಇದರಿಂದ 45 ಗ್ರಾಮಗಳ ಜನ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ಆ ಜನರ ಸಮಸ್ಯೆಗೆ ಪರಿಹಾರ ಒದಗಿಸಿಕೊಡುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್‌ನ ನಾಗರಾಜ್ ಯಾದವ್ ಮಾತನಾಡಿ, ಬೆಳಗಾವಿಯಲ್ಲಿ ವಿಧಾನಸೌಧ ಕಟ್ಟಿದ ಮಾತ್ರಕ್ಕೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗುವುದಿಲ್ಲ. ಆಳುವ ಎಲ್ಲ ಸರ್ಕಾರಗಳು ಸರ್ಕಾರದ ಒಂದಷ್ಟು ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಬೆಳಗಾವಿಯಲ್ಲೇ ಸಚಿವ ಸಂಪುಟ ಸಭೆ ನಡೆಸಬೇಕು ಎಂದರು.