ಸಾರಾಂಶ
ಡಾ.ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ವಿಷ್ಣುವರ್ಧನ್ ಅಳಿಯ ಅನಿರುದ್ಧ ಜಟ್ಕರ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು : ಡಾ.ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ವಿಷ್ಣುವರ್ಧನ್ ಅಳಿಯ ಅನಿರುದ್ಧ ಜಟ್ಕರ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅನಿರುದ್ಧ ಜಟ್ಕರ್, ‘ಕರ್ನಾಟಕ ರತ್ನ ಪ್ರಶಸ್ತಿಗೆ ಡಾ.ವಿಷ್ಣುವರ್ಧನ್ ಅವರು ಅರ್ಹರು. ಹೀಗಾಗಿ ಅಭಿಮಾನಿಗಳ ಪರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಗೌರವಕ್ಕೆ ವಿಷ್ಣುವರ್ಧನ್ ಸೂಕ್ತ ಎಂದು ಸರ್ಕಾರಕ್ಕೆ ನೆನಪಿಸಿದ್ದೇನೆ. ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳ ಗಮನಕ್ಕೂ ತರುತ್ತೇನೆ’ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ವಿಷ್ಣು ಸಮಾಧಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅನಿರುದ್ಧ್, ‘ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಪುಣ್ಯಭೂಮಿ ತೆರವು ಮಾಡಿರುವ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ.
ಆದರೆ, ಈಗಾಗಲೇ ರಾಜ್ಯ ಸರ್ಕಾರ ಮೈಸೂರಿನಲ್ಲಿ 5 ಎಕರೆ ಜಾಗದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ಮಾಡಿದೆ. ಹೀಗಾಗಿ ವಿಷ್ಣುವರ್ಧನ್ ಕುಟುಂಬದವರಾಗಿ ನಾವು ಮತ್ತೆ ಇನ್ನೊಂದು ಜಾಗ ಕೇಳಲಿಕ್ಕಾಗಲ್ಲ. ಆದರೂ ಅಂತ್ಯ ಸಂಸ್ಕಾರ ನಡೆದಿರುವ ಅಭಿಮಾನ್ ಸ್ಟುಡಿಯೋ ಜಾಗಕ್ಕೆ ಪ್ರಾಮುಖ್ಯತೆ ಇದೆ. ಆ ಜಾಗ ಬಾಲಣ್ಣ ಕುಟುಂಬಕ್ಕೆ ಸೇರಿದ್ದು. ಬಾಲಣ್ಣ ಕುಟುಂಬದವರು ಮನಸ್ಸು ಮಾಡಿ ತೆರವು ಮಾಡಿದ ಜಾಗದಲ್ಲೇ ಮಂಟಪ ಕಟ್ಟುವಂತಾಗಲಿ’ ಎಂದರು.