ಸಾರಾಂಶ
ರಿಯಾಲಿಟಿ ಶೋ ಸ್ಟಾರ್ ಬುಲೆಟ್ ರಕ್ಷಕ್‌ಗೆ ಸಂಕಷ್ಟ ಎದುರಾಗಿದ್ದು ಖಾಸಗಿ ವಾಹಿನಿ ರಿಯಾಲಿಟಿ ಶೋನಲ್ಲಿ ನಾಡದೇವತೆ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವತೆ ಕುರಿತು ಲಘು ಹೇಳಿಕೆ ನೀಡಿದ ಆರೋಪದಡಿ ಆತನ ವಿರುದ್ಧ ತನಿಖೆಗೆ ಆಗ್ರಹಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ದಾಖಲಾಗಿದೆ.
ಬೆಂಗಳೂರು : ಬಿಗ್ ಬಾಸ್ ಮಾಜಿ ಸ್ಪರ್ಧಿಗಳ ಬಳಿಕ ಈಗ ಮತ್ತೊಬ್ಬ ರಿಯಾಲಿಟಿ ಶೋ ಸ್ಟಾರ್ ಬುಲೆಟ್ ರಕ್ಷಕ್‌ಗೆ ಸಂಕಷ್ಟ ಎದುರಾಗಿದ್ದು ಖಾಸಗಿ ವಾಹಿನಿ ರಿಯಾಲಿಟಿ ಶೋನಲ್ಲಿ ನಾಡದೇವತೆ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವತೆ ಕುರಿತು ಲಘು ಹೇಳಿಕೆ ನೀಡಿದ ಆರೋಪದಡಿ ಆತನ ವಿರುದ್ಧ ತನಿಖೆಗೆ ಆಗ್ರಹಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ದಾಖಲಾಗಿದೆ.
ಜಯನಗರ 1ನೇ ಹಂತದ ಸೋಮೇಶ್ವರ ನಗರದ ಬಿ.ಎಸ್.ಮಹೇಶ್ ದೂರು ನೀಡಿದ್ದು, ಖಾಸಗಿ ವಾಹಿನಿಯ ‘ಭರ್ಜರಿ ಬ್ಯಾಚುಲರ್ಸ್-2’ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕುರಿತು ಅಗೌರವಯುತವಾಗಿ ಮಾತನಾಡಿದ್ದಾರೆಂದು ದೂರಿದ್ದಾರೆ.
ನಾಡದೇವತೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಹಿಂದೂ ಧರ್ಮೀಯರ ಭಾವನೆಗೆ ರಕ್ಷಕ್ ಧಕ್ಕೆ ತಂದಿದ್ದಾರೆ. ಈ ಹಗುರ ಮಾತು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಕ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಚಾಮುಂಡೇಶ್ವರಿ ದೇವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿರುವ ರಕ್ಷಕ್, ಖಾಸಗಿ ವಾಹಿನಿಯ ಬರಹಗಾರರು, ನಿರ್ದೇಶಕರು ಹಾಗೂ ಆ ಕಾರ್ಯಕ್ರಮದ ರೂವಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಯುಕ್ತರಿಗೆ ಮಹೇಶ್ ಕೋರಿದ್ದಾರೆ.
ಮಚ್ಚು ಹಿಡಿದು ರೀಲ್ಸ್ ಪ್ರಕರಣ ಸಂಬಂಧ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಜೈಲು ಸೇರಿದ್ದಾರೆ. ಈಗ ನಾಡದೇವತೆ ಕುರಿತು ಲಘುವಾಗಿ ಮಾತನಾಡಿ ಖ್ಯಾತ ಹಾಸ್ಯ ನಟ ದಿ.ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಸಂಕಷ್ಟಕ್ಕೆ ಸಿಲುಕಿದ್ದಾನೆ.