ಸಾರಾಂಶ
ಮೇ 5 ರಿಂದ ಮೇ 17ರವರೆಗೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ವಿವಿಧ ದತ್ತಾಂಶ ಸಂಗ್ರಹಕ್ಕೆ ಮನೆ-ಮನೆ ಸಮೀಕ್ಷೆ ಶುರು ಮಾಡಲಿದೆ.
ಬೆಂಗಳೂರು : ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ಶಿಫಾರಸು ಮಾಡಲು ಸರ್ಕಾರ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ನೇತೃತ್ವದ ಆಯೋಗ ಮೇ 5 ರಿಂದ ಮೇ 17ರವರೆಗೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ವಿವಿಧ ದತ್ತಾಂಶ ಸಂಗ್ರಹಕ್ಕೆ ಮನೆ-ಮನೆ ಸಮೀಕ್ಷೆ ಶುರು ಮಾಡಲಿದೆ.
ಯಾವೊಂದೂ ಕುಟುಂಬವೂ ಸಮೀಕ್ಷೆಯಿಂದ ಹೊರಗೆ ಉಳಿಯಬಾರದು ಎಂಬ ಉದ್ದೇಶದಿಂದ ಮೂರು ಹಂತದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಮೇ 5 ರಿಂದ ಮೇ 17ರವರೆಗೆ ಮನೆ-ಮನೆಗೆ ಸಮೀಕ್ಷೆ ನಡೆಯಲಿದೆ.
ಈ ವೇಳೆ ತಪ್ಪಿ ಹೋಗಿರುವವರು ತಮ್ಮ ವಿವರ ಘೋಷಿಸಲು ಪಂಚಾಯಿತಿ ಮಟ್ಟದಲ್ಲಿ ಮೇ 19 ರಿಂದ 21 ರವರೆಗೆ ಮೂರು ದಿನಗಳ ಕಾಲ ಏರ್ಪಡಿಸುವ ತಾತ್ಕಾಲಿಕ ಶಿಬಿರ ಕೇಂದ್ರಕ್ಕೆ ಭೇಟಿ ನೀಡಬಹುದು.
ಇನ್ನು ಮನೆ-ಮನೆ ಸಮೀಕ್ಷೆ ಹಾಗೂ ಶಿಬಿರ ಕೇಂದ್ರಕ್ಕೂ ಭೇಟಿ ನೀಡಲಾಗದೆ ಹೊರ ಪ್ರದೇಶದಲ್ಲಿ ವಾಸವಾಗಿರುವವರ ಅನುಕೂಲಕ್ಕಾಗಿ ಆನ್‌ಲೈನ್ ಮೂಲಕ ದತ್ತಾಂಶ ನೀಡಲು ಸಹ ಅವಕಾಶ ಕಲ್ಪಿಸಲಾಗಿದೆ. ಅಂಥವರು ಮೇ 19ರಿಂದ ಮೇ 23 ರವರೆಗೆ ಆನ್‌ಲೈನ್ ಮೂಲಕ ತಮ್ಮ ಉಪ ಜಾತಿ ಹಾಗೂ ವಿವರ ಘೋಷಿಸಿಕೊಳ್ಳಬಹುದು.
ಏನಿದು ಒಳ ಮೀಸಲಾತಿ ಸಮೀಕ್ಷೆ?:
ಒಳ ಮೀಸಲಾತಿ ಕುರಿತು ಮಧ್ಯಂತರ ವರದಿ ನೀಡಿರುವ ನ್ಯಾ.ನಾಗಮೋಹನ್ ದಾಸ್ ಆಯೋಗ, ಅದರಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನಿಗದಿ ಮಾಡಲು ಸಮಗ್ರ ದತ್ತಾಂಶ ಲಭ್ಯವಿಲ್ಲ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಆಯೋಗಕ್ಕೆ ಎರಡು ತಿಂಗಳ ಗಡುವನ್ನೂ ನೀಡಿತ್ತು.
ಹೀಗಾಗಿ ಸಂಪೂರ್ಣ ಸಿದ್ಧತೆಯೊಂದಿಗೆ ಆಯೋಗವು ಮನೆ-ಮನೆ ಸಮೀಕ್ಷೆ ಶುರು ಮಾಡಿದೆ. ಈ ವೇಳೆ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳಿಂದ ಪರಿಶಿಷ್ಟ ಜಾತಿಯ ಉಪ ಜಾತಿ, ಕುಟುಂಬ ಸದಸ್ಯರ ವಿವರ, ವೃತ್ತಿ, ಶಿಕ್ಷಣ, ಸಾರ್ವಜನಿಕ ಉದ್ಯೋಗದ ಪ್ರಾತಿನಿಧ್ಯತೆ, ಸಾಮಾಜಿಕ ಸ್ಥಿತಿಗತಿ ಕುರಿತ ವಿವಿಧ ದತ್ತಾಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು.
ಪ್ರತಿ ಮನೆಗೂ ಗಣತಿದಾರರ ಭೇಟಿ:
ಸಮೀಕ್ಷೆ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ನ್ಯಾ.ನಾಗಮೋಹನ್‌ದಾಸ್, ಗಣತಿಗಾಗಿ 59,000 ಮಂದಿ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗಿದೆ. ಶಿಕ್ಷಕರ ಕೊರತೆ ಇರುವ ಕಡೆ ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಇವರ ಪರಿವೀಕ್ಷಣೆಗೆ 6,000 ಮಂದಿ ಗ್ರಾಪಂ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಸೂಪರ್‌ವೈಸರ್‌ಗಳಾಗಿ ನೇಮಿಸಲಾಗಿದೆ. ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಬೇತಿ ಪೂರ್ಣಗೊಂಡಿದ್ದು, ಅವರಿಂದ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಗಣತಿದಾರರಿಗೆ ತರಬೇತಿ ನೀಡಲಾಗುತ್ತಿದೆ.
ಕೇವಲ ಪರಿಶಿಷ್ಟ ಜಾತಿಗೆ ಸೇರಿದವರ ಮನೆ ಮಾತ್ರವಲ್ಲ, ಪ್ರತಿ ಮನೆಗೂ ಗಣತಿದಾರರು ಭೇಟಿ ಮಾಡಬೇಕು. ಪರಿಶಿಷ್ಟ ಜಾತಿ ಅಲ್ಲದ ಮನೆ ಮೇಲೆ ಗುರುತು ಹಾಕಿ ಪರಿಶಿಷ್ಟ ಜಾತಿಯವರಾಗಿದ್ದರೆ ಸಮೀಕ್ಷೆ ನಡೆಸಿ ವಿವರ ದಾಖಲಿಸಬೇಕು ಎಂದು ಹೇಳಿದರು.
ಯಾವ ದತ್ತಾಂಶಕ್ಕಾಗಿ ಸಮೀಕ್ಷೆ?
ಸಮೀಕ್ಷೆಯ ಸಂದರ್ಭದಲ್ಲಿ ಪರಿಶಿಷ್ಟರ ಒಟ್ಟು 101 ಜಾತಿಗಳಲ್ಲಿ ಬಹುತೇಕ ಜಾತಿಗಳ ದತ್ತಾಂಶ ಸಂಗ್ರಹ ಸಮಸ್ಯೆಯಲ್ಲ. ಜಾತಿಗಳ ಗುಂಪು ಆಗಿರುವ ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ ಎಂದು ನಮೂದಿಸುವುದು ಸಮಸ್ಯೆ. ಹೊಲೆಯ ಹಾಗೂ ಮಾದಿಗ ಇಬ್ಬರೂ ಸೇರಿ ಆದಿ ಕರ್ನಾಟಕ ಎಂದು ಬರೆಸಿದ್ದಾರೆ. ಇದೇ ದೊಡ್ಡ ಸಮಸ್ಯೆಯಾಗಿದೆ. ಒಳ ಮೀಸಲಾತಿ ನೀಡಲು ಉಂಟಾಗಿರುವ ದೊಡ್ಡ ಸವಾಲೇ ಇದು. ಹೀಗಾಗಿ ನಿಮ್ಮ ನಿಮ್ಮ ಉಪ ಜಾತಿ ಅಥವಾ ಮೂಲ ಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ. ಈ ಕುರಿತು ದಲಿತ ಮುಖಂಡರು ಸಹ ಜಾಗೃತಿ ಮೂಡಿಸುತ್ತಿದ್ದಾರೆ. ಈ ಸ್ಪಷ್ಟನೆ ಪಡೆಯುವುದೇ ನಮ್ಮ ಪ್ರಮುಖ ಗುರಿ ಎಂದು ನ್ಯಾ. ನಾಗಮೋಹನ್ ದಾಸ್ ಹೇಳಿದರು.
ಮೊಬೈಲ್ ಆ್ಯಪ್‌ನಲ್ಲೇ ದತ್ತಾಂಶ ಸಂಗ್ರಹ:
ಪರಿಶಿಷ್ಟ ಜಾತಿಯವರ ಶೈಕ್ಷಣಿಕ, ಸಾಮಾಜಿಕ ಹಿಂದುಳಿದಿರುವಿಕೆ ಹಾಗೂ ಸಾರ್ವಜನಿಕ ಉದ್ಯೋಗದಲ್ಲಿನ ಪ್ರಾತಿನಿಧ್ಯತೆ ಅರಿಯುವುದು ನಮ್ಮ ಮುಖ್ಯ ಉದ್ದೇಶ. ಇದಕ್ಕಾಗಿ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಆ ಆ್ಯಪ್ ಮೂಲಕವೇ ಸಮೀಕ್ಷೆ ನಡೆಸಬೇಕು. ಆ್ಯಪ್ ಬಳಕೆ ಮಾಡುವ ಬಗ್ಗೆ ತರಬೇತಿ ಜತೆಗೆ ಕೈಪಿಡಿಯನ್ನೂ ನೀಡಿದ್ದೇವೆ. ಒಂದು ವೇಳೆ ಗಣತಿದಾರರಿಗೆ ಸಮಸ್ಯೆ ಉಂಟಾದರೆ ಸಂಪರ್ಕಿಸಲು ವಾರ್ ರೂಂ ಹಾಗೂ ಸಹಾಯವಾಣಿ ಸಂಖ್ಯೆಯನ್ನೂ ನೀಡಲಾಗಿದೆ. ಒಟ್ಟಾರೆ ಪ್ರಕ್ರಿಯೆಯನ್ನು ನೋಡಲು ರಾಜ್ಯ ಮಟ್ಟದ ಸಮನ್ವಯ ಸಮಿತಿ ರಚಿಸಲಾಗಿದೆ ಎಂದು ನಾಗಮೋಹನ್‌ದಾಸ್ ಅವರು ಮಾಹಿತಿ ನೀಡಿದರು.
ಶೇ.100 ರಷ್ಟು ಸಮೀಕ್ಷೆ ಸಾಧ್ಯ:
ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ನಡೆಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ನ್ಯಾ.ನಾಗಮೋಹನ್ ದಾಸ್ ಅವರು, ನಮ್ಮ ಬಳಿ ಈಗಾಗಲೇ 2024ರ ಲೋಕಸಭೆ ಚುನಾವಣೆ ಮತಗಟ್ಟೆ ಮ್ಯಾಪಿಂಗ್ ಇದೆ. ಎಷ್ಟು ಬೂತ್‌ಗಳಿವೆ? ಬೂತ್‌ನಲ್ಲಿ ಎಷ್ಟು ಮನೆ, ಎಷ್ಟು ಮತದಾರರು ಇದ್ದಾರೆ ಎಂಬ ಮಾಹಿತಿ ಇದೆ. ಇದನ್ನು ಘಟಕ ಎಂದು ಪರಿಗಣಿಸಿ ಗಣತಿದಾರರು ಬೂತ್‌ನಲ್ಲಿನ ಪ್ರತಿ ಮನೆಗೆ ಭೇಟಿ ನೀಡುತ್ತಾರೆ.
ಇದು ಹಿಂಸೆ, ಶೋಷಣೆ, ಅಪಮಾನಕ್ಕೆ ಒಳಗಾಗಿರುವ ಬಡವರ ಕೆಲಸ. ಹೀಗಾಗಿ ಶ್ರದ್ಧೆಯಿಂದ ಕಾಳಜಿಯಿಂದ ಮಾಡಲು ಸೂಚಿಸಿದ್ದೇನೆ. ನಮ್ಮ ಸಣ್ಣ ತಪ್ಪು ಒಂದು ಜಾತಿ, ಸಮುದಾಯಕ್ಕೆ ಅನ್ಯಾಯ ಉಂಟು ಮಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ದಲಿತ ಮುಖಂಡರು ಹಾಗೂ ಜನರು ಸಕ್ರಿಯವಾಗಿ ಚಳುವಳಿ ಎಂಬಂತೆ ಭಾಗವಹಿಸಬೇಕು.
- ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್