ಕೆಪಿಎಸ್ಸಿಗೆ ಮೂಗುದಾರ : ಸುಧಾರಣೆ ತರುವ ಕುರಿತು ಸಿಎಸ್‌ ನೇತೃತ್ವದ ಸಮಿತಿ ರಚನೆಗೆ ಸಂಪುಟ ಸಮ್ಮತಿ

| N/A | Published : Mar 15 2025, 08:05 AM IST

KPSC New 02
ಕೆಪಿಎಸ್ಸಿಗೆ ಮೂಗುದಾರ : ಸುಧಾರಣೆ ತರುವ ಕುರಿತು ಸಿಎಸ್‌ ನೇತೃತ್ವದ ಸಮಿತಿ ರಚನೆಗೆ ಸಂಪುಟ ಸಮ್ಮತಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರ ಆಯ್ಕೆ ಹಾಗೂ ಕೆಪಿಎಸ್ಸಿಗೆ ಸುಧಾರಣೆ ತರುವ ಕುರಿತು ಶಿಫಾರಸು ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನೊಳಗೊಂಡ ಶೋಧನಾ ಸಮಿತಿ ರಚಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಬೆಂಗಳೂರು :  ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರ ಆಯ್ಕೆ ಹಾಗೂ ಕೆಪಿಎಸ್ಸಿಗೆ ಸುಧಾರಣೆ ತರುವ ಕುರಿತು ಶಿಫಾರಸು ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನೊಳಗೊಂಡ ಶೋಧನಾ ಸಮಿತಿ ರಚಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಅಲ್ಲದೆ, 2ನೇ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿ ಟಿ.ಎಂ.ವಿಜಯಭಾಸ್ಕರ್‌ ಅವರು ನೀಡಿರುವ ಶಿಫಾರಸಿನಂತೆ ಕೆಪಿಎಸ್ಸಿ ಸದಸ್ಯ ಸಂಖ್ಯೆಯನ್ನು 14 ರಿಂದ 8ಕ್ಕೆ ಇಳಿಸುವ ಕುರಿತು ಪರಿಶೀಲನೆ ನಡೆಸಲೂ ಸಂಪುಟ ನಿರ್ಧರಿಸಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ, ಅಕ್ರಮ ಹಾಗೂ ಸ್ವಜನಪಕ್ಷಪಾತದ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮೂಗುದಾರ ಹಾಕಲು ಕಳೆದ ಸಚಿವ ಸಂಪುಟ ಸಭೆಯಲ್ಲೇ ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಕಾಯ್ದೆ-1959ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿತ್ತು.

ಈವರೆಗೆ ಕೆಪಿಎಸ್ಸಿ ಕುರಿತ ಯಾವುದೇ ನಿಯಮಾವಳಿ ರೂಪಿಸಲು ಸರ್ಕಾರ ಕೆಪಿಎಸ್ಸಿ ಜತೆ ಸಮಾಲೋಚನೆ ಮಾಡಬೇಕು ಎಂಬ ನಿಯಮವಿತ್ತು. ಇದನ್ನು ತೆಗೆದು ಹಾಕಲು ತೀರ್ಮಾನಿಸಿ ಕೆಪಿಎಸ್ಸಿಗೆ ನಿಯಮಾವಳಿ ರೂಪಿಸುವುದು ಅಥವಾ ತಿದ್ದುಪಡಿ ತರಲು ಕೆಪಿಎಸ್ಸಿಗೆ ಜತೆ ಸಮಾಲೋಚನೆ ಅಗತ್ಯವಿಲ್ಲ ಎಂದು ತಿದ್ದುಪಡಿ ಮಾಡಲಾಗಿದೆ. ಇದೀಗ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೋಟಾ ಸಮಿತಿ ಶಿಫಾರಸುಗಳನ್ನು ಗಂಭೀರವಾಗಿ ಚರ್ಚಿಸಿದ್ದು, ಕೆಪಿಎಸ್ಸಿ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಕ್ಕೆ ವ್ಯಾಪಕ ಹುಡುಕಾಟ ಸಮಿತಿ ಸ್ಥಾಪಿಸಲು ತೀರ್ಮಾನಿಸಲಾಗಿದೆ.

ಜತೆಗೆ ಪ್ರಸ್ತುತ ಸಿ ಹಾಗೂ ಬಿ ಗ್ರೂಪ್‌ನ ಹುದ್ದೆಗಳ ನೇಮಕಾತಿ ವೇಳೆ ಸಂದರ್ಶನವನ್ನು ತೆಗೆದು ಹಾಕಲಾಗಿದೆ. ಹೀಗಾಗಿ 15 ಮಂದಿ ಕೆಪಿಎಸ್‌ಸಿ ಸದಸ್ಯರ ಸಂಖ್ಯೆ ಅಗತ್ಯವಿಲ್ಲ. ಸದಸ್ಯರ ಸಂಖ್ಯೆ ಹೆಚ್ಚಿದ್ದಷ್ಟೂ ಆಯೋಗದ ಮಹತ್ವ ಹಾಗೂ ಗೌಪ್ಯ ವಿಚಾರಗಳನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ನೇಮಕಾತಿ ಅಕ್ರಮಗಳಿಗೆ ಅವಕಾಶ ನೀಡಬಹುದು ಎಂಬ ಕಾರಣ ನೀಡಿ ಕೆಪಿಎಸ್ಸಿ ಸದಸ್ಯರ ಸಂಖ್ಯೆ ಕಡಿಮೆ ಮಾಡುವ ಕುರಿತು ಪರಿಶೀಲಿಸಿ ನಿರ್ಧರಿಸಲು ರಾಜ್ಯಪಾಲರ ಅನುಮೋದನೆ ಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಕೆಪಿಎಸ್ಸಿಯಲ್ಲಿ ಸ್ವಜನಪಕ್ಷಪಾತಕ್ಕೆ ಬ್ರೇಕ್‌ ಹಾಕಲು ಈವರೆಗೆ ಆಯೋಗಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನದ ಪ್ರಶ್ನೆ ಬಂದರೂ ಅಧ್ಯಕ್ಷರು ಸಭೆ ನಡೆಸಿ ತೀರ್ಮಾನಿಸಬಹುದಿತ್ತು. ಈ ನಿಯಮ ಬದಲಿಸಿ ಆಯೋಗದ ಸಭೆಗೆ ಅಧ್ಯಕ್ಷರನ್ನು ಸೇರಿಸಿ ಒಟ್ಟು ಸದಸ್ಯರ ಶೇ.50 ರಷ್ಟು ಕೋರಂ ಅಗತ್ಯ ಎಂದು ಮಾಡಲಾಗಿದೆ.

ಇನ್ನು ಸಭೆಯಲ್ಲಿ ಎಲ್ಲಾ ತೀರ್ಮಾನ ಹಾಗೂ ನಡಾವಳಿಗಳನ್ನು ಕಾರ್ಯದರ್ಶಿಗಳೇ ಖುದ್ದಾಗಿ ದಾಖಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.