ಸಾರಾಂಶ
ಮನೆಯಲ್ಲಿ ನನ್ನ ತಾಯಿಯವರು ಈ ವಿಚಾರದಲ್ಲಿ ಸುತರಾಂ ಒಪ್ಪದ ಕಾರಣ ನನ್ನ ಏರ್‌ಫೋರ್ಸ್ ಸೇರುವ ಬಯಕೆ, ತವಕ ಸಾಕಾರಗೊಳ್ಳದ ಕನಸಾಗಿ ಉಳಿದು ಬಿಟ್ಟಿತು
ಕಲಬುರಗಿ : ನನಗೆ ಏರ್‌ಫೋರ್ಸ್ ಸೇರಬೇಕೆಂಬ ಆಸೆಯಿತ್ತು. ವಿಮಾನ ಹಾರಾಟದ ಎನ್‌ಸಿಸಿ ತರಬೇತಿಗೆ ಆಯ್ಕೆಯಾಗಿದ್ದೆ. ಆದರೆ, ಮನೆಯಲ್ಲಿ ನನ್ನ ತಾಯಿಯವರು ಈ ವಿಚಾರದಲ್ಲಿ ಸುತರಾಂ ಒಪ್ಪದ ಕಾರಣ ನನ್ನ ಏರ್‌ಫೋರ್ಸ್ ಸೇರುವ ಬಯಕೆ, ತವಕ ಸಾಕಾರಗೊಳ್ಳದ ಕನಸಾಗಿ ಉಳಿದು ಬಿಟ್ಟಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸೇನಾ ಪೂರ್ವ ತರಬೇತಿ ಕೇಂದ್ರದಲ್ಲಿ ಸೇನೆಯ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು. ಪ್ರಜಾಪ್ರಭುತ್ವ ಉಳಿದದ್ದೇ ಸೇನೆ, ಸಂವಿಧಾನದಿಂದ. ನಾನೂ ಸೇನೆ ಸೇರುವ ಕನಸು ಕಂಡವ, ವಿಮಾನ ಹಾರಾಟದ ತರಬೇತಿ ಪಡೆದು ಏರ್‌ಫೋರ್ಸ್ ಸೇರಬೇಕೆಂಬ ಇಚ್ಚೆ ಇತ್ತಾದರೂ ಮನೆಯಲ್ಲಿ ತಾಯಿಯ ಸಮ್ಮತಿ ಸಿಗದೆ ಏರ್‌ಫೋರ್ಸ್ ಕನಸು ಕೈಗೂಡಲಿಲ್ಲ.
ಜಕ್ಕೂರು ಏರ್ ಫೀಲ್ಡ್‌ನಲ್ಲಿ ನನಗೆ ತರಬೇತಿಗೆ ಕರೆದಾಗ ಮನೆಯಲ್ಲಿ ಪೋಷಕರ ಸಹಿ ಕಡ್ಡಾಯವೆಂದರು. ಖರ್ಗೆ ಸಾಹೇಬರ ಸಹಿಯನ್ನು ಹೇಗೋ ಮಾಡಿಸಿ, ತಾಯಿ ಸಹಿ ತರೋದಾಗಿ ಹೇಳುತ್ತಲೇ 1 ಹಂತದ ವಿಮಾನ ಹಾರಾಟ ತರಬೇತಿ ಮುಗಿಸಿದ್ದೆ. ಅಲ್ಲಿರೋ ಕಮಾಂಡರ್, ತಾಯಿ ಸಹಿಗಾಗಿ ದುಂಬಾಲು ಬಿದ್ದಾಗ ನಾನು ಮನೆಯಲ್ಲಿ ತರಬೇತಿ ವಿಚಾರ ಹೇಳಲೇಬೇಕಾಯ್ತು. ಆಗ ನನ್ನ ತಾಯಿ ಇದೆಲ್ಲ ಗೊಡವೆ ಯಾಕೆಂದು ಸಹಿ ಮಾಡಲಿಲ್ಲ. ಹೀಗಾಗಿ, ನನಗೆ ತರಬೇತಿ ಮುಂದುವರಿಸಲು ಆಗಲಿಲ್ಲ. ವಿದ್ಯಾರ್ಥಿ ದೆಸೆಯಲ್ಲೇ ಎನ್‌ಸಿಸಿ ತರಬೇತಿ ಪಡೆದೆ. ಎನ್‌ಸಿಸಿ ತರಬೇತಿ ರಾಜಕೀಯದಲ್ಲಿಯೂ ಉಪಯೋಗವಾಗಿದೆ. ಆದರೆ, ಹಲವರಿಗೆ ನನ್ನ ಈ ಶಿಸ್ತಿನ ಗುಣಗಳೇ ಅಪಥ್ಯವಾಗಿವೆ ಎಂದು ತಿವಿದರು.