ಸಾರಾಂಶ
ತುಂಗಭದ್ರಾ ಅಣೆಕಟ್ಟಿಗೆ ನವಲಿಯಲ್ಲಿ ಸಮಾನಾಂತರ ಅಣೆಕಟ್ಟು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಈ ಕುರಿತು ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಲು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾರ್ಚ್‌ನಲ್ಲಿ ಸಭೆ ನಡೆಸಲಾಗುವುದು
ಬೆಂಗಳೂರು : ತುಂಗಭದ್ರಾ ಅಣೆಕಟ್ಟಿಗೆ ನವಲಿಯಲ್ಲಿ ಸಮಾನಾಂತರ ಅಣೆಕಟ್ಟು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಈ ಕುರಿತು ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಲು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾರ್ಚ್‌ನಲ್ಲಿ ಸಭೆ ನಡೆಸಲಾಗುವುದು ಎಂದು ಜಲಸಂಪನ್ಮೂಲ ಖಾತೆಯ ಹೊಣೆಯನ್ನೂ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಹಿನ್ನೆಲೆಯಲ್ಲಿ 27ರಿಂದ 30 ಟಿಎಂಸಿಯಷ್ಟು ನೀರು ನಷ್ಟವಾಗುತ್ತಿದೆ. ಅದರಿಂದಾಗಿ ಅಣೆಕಟ್ಟಿನ ಹೂಳನ್ನು ತೆರವು ಮಾಡುವ ಸಂಬಂಧವೂ ಚರ್ಚಿಸಲಾಯಿತು. ಆದರೆ, ಹೂಳಿನ ಪ್ರಮಾಣ ಹಾಗೂ ಕಾಮಗಾರಿ ವೆಚ್ಚ ಹೆಚ್ಚಿದ್ದ ಕಾರಣದಿಂದಾಗಿ ಅದನ್ನು ಕೈಬಿಟ್ಟು ನವಲಿ ಬಳಿ ಸಮಾನಾಂತರ ಅಣೆಕಟ್ಟು ನಿರ್ಮಾಣದ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅದಕ್ಕೆ ಸಂಬಂಧಿಸಿ ಈಗಾಗಲೇ ಆಂಧ್ರಪ್ರದೇಶ ಹಾಗೂ ತೆಲಂಗಾಣ ಜಲಸಂಪನ್ಮೂಲ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗಿದೆ. ಅದನ್ನು ಕೇಂದ್ರ ಜಲಶಕ್ತಿ ಸಚಿವರಿಗೂ ಮಾಹಿತಿ ನೀಡಲಾಗಿದ್ದು, ರಾಜ್ಯಗಳು ಒಪ್ಪಿಗೆ ಸೂಚಿಸಿದರೆ ಕೇಂದ್ರದಿಂದ ಅನುಮತಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿ ಸಭೆಗೆ ಕಾಲಾವಕಾಶ ನೀಡುವಂತೆ ಕೋರಿದ್ದು, ಮಾರ್ಚ್‌ನಲ್ಲಿ ಅವರೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.
ನವಲಿ ಸಮಾನಾಂತರ ಅಣೆಕಟ್ಟು ನಿರ್ಮಾಣ ಜತೆಗೆ ಪರ್ಯಾಯ ಮಾರ್ಗವನ್ನೂ ಕಂಡುಕೊಳ್ಳಲಾಗಿದೆ. ತಾಂತ್ರಿಕ ಸಲಹಾ ಸಮಿತಿ ಪರ್ಯಾಯ ಮಾರ್ಗ ಸೂಚಿಸಿದ್ದು, ಚಂದ್ರಬಾಬು ನಾಯ್ಡು ಅವರೊಂದಿಗಿನ ಸಭೆ ವೇಳೆ ಅದನ್ನೂ ಚರ್ಚಿಸಲಾಗುವುದು. ಜತೆಗೆ ತುಂಗಭದ್ರಾ ಅಣೆಕಟ್ಟಿನ ಹೂಳಿನ ಸ್ಥಿತಿ, 27ರಿಂದ 30 ಟಿಎಂಸಿ ಬಳಕೆಗೆ ಸಿಗುತ್ತಿಲ್ಲ ಎಂಬುದನ್ನು ಸಭೆಯಲ್ಲಿ ತಿಳಿಸಲಾಗುವುದು ಹಾಗೂ ಸಮಾನಾಂತರ ಅಣೆಕಟ್ಟಿನ ಅವಶ್ಯಕತೆಯನ್ನೂ ತಿಳಿಸಲಾಗುವುದು ಎಂದು ವಿವರಿಸಿದರು.
ಮೇಕೆದಾಟು ಕುರಿತು ಸ್ಪಷ್ಟ ನಿಲುವು ತಿಳಿಸಿ:ದೆಹಲಿಯಲ್ಲಿ ಜಲಶಕ್ತಿ ಸಚಿವರ ಭೇಟಿ ವೇಳೆ ಮೇಕೆದಾಟು ಯೋಜನೆ ಕುರಿತಂತೆ ಕೇಂದ್ರ ಸರ್ಕಾರದ ಸ್ಪಷ್ಟ ನಿಲುವೇನು ಎಂಬುದನ್ನು ತಿಳಿಸುವಂತೆ ಕೇಳಿದ್ದೇವೆ. ಯೋಜನೆ ಕುರಿತು ಸಮಯ ವ್ಯರ್ಥ ಮಾಡುವುದು ಬೇಡ. ಯೋಜನೆ ಅನುಷ್ಠಾನಕ್ಕೆ ಬದ್ಧರಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೋರಿದ್ದೇವೆ ಎಂದು ಇದೇ ವೇಳೆ ಶಿವಕುಮಾರ್ ತಿಳಿಸಿದರು.
ಹಾಗೆಯೇ, ಕಳಸಾ-ಬಂಡೂರಿ ಯೋಜನೆಗೆ ಇರುವ ತೊಡಕು ನಿವಾರಿಸಬೇಕು ಎಂದೂ ಕೇಳಿಕೊಂಡಿದ್ದೇವೆ. ಹಾಗೆಯೇ, ಪೆನ್ನಾರ್ ನದಿ ಕುರಿತಂತೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ತಿಕ್ಕಾಟ ನಿವಾರಿಸುವ ಕುರಿತು ಮಧ್ಯಪ್ರವೇಶಿಸುವಂತೆಯೂ ಜಲಶಕ್ತಿ ಸಚಿವರಲ್ಲಿ ಅರಿಕೆ ಮಾಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮಾ.18ಕ್ಕೆ ಜಲಶಕ್ತಿ ಸಚಿವರ ಜೊತೆ ಸಭೆ
ರಾಜ್ಯದ ನೀರಾವರಿ ವಿಚಾರಗಳ ಕುರಿತು ಮತ್ತೊಂದು ಸುತ್ತು ಚರ್ಚಿಸಲು ಮಾ.18ರಂದು ಮತ್ತೊಮ್ಮೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಸಭೆ ನಡೆಸಲಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ನದಿ ಜೋಡಣೆ ವಿಚಾರವಾಗಿ ಕೇಂದ್ರ ಸರ್ಕಾರದ ಮುಂದೆ ಹಲವು ಪ್ರಸ್ತಾವನೆಗಳಿವೆ. ಅದಕ್ಕೆ ಸಂಬಂಧಿಸಿ ನಮ್ಮ ಪಾಲಿನ ನೀರಿನ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ರಾಜ್ಯದ ಅಣೆಕಟ್ಟುಗಳ ಗೇಟ್‌ಗಳ ದುರಸ್ತಿ, ಸುರಕ್ಷತಾ ಕ್ರಮಗಳ ಅಳವಡಿಕೆ ಕುರಿತು ತಾಂತ್ರಿಕ ಸಮಿತಿ ನೇಮಿಸಲಾಗಿದ್ದು, ಸಮಿತಿ ನೀಡುವ ವರದಿಯಂತೆ ಕ್ರಮ ಕೈಗೊಳ್ಳಲು ನೆರವಾಗುವಂತೆಯೂ ಜಲಶಕ್ತಿ ಸಚಿವರಲ್ಲಿ ಕೋರಲಾಗಿದೆ. ಹಾಗೆಯೇ, ಕೃಷ್ಣ ಮೇಲ್ದಂಡೆ ಯೋಜನೆಗೆ ಸಂಬಂಧಿಸಿ ಗೆಜೆಟ್ ನೊಟಿಫಿಕೇಷನ್ ಹೊರಡಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಈ ಬಾರಿ 11 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಯೋಜನೆಗಳಿಗೆ ನೆರವಾಗುವಂತೆ ಮನವಿ ಸಲ್ಲಿಸಲಾಗಿದೆ.