ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿ ನೆರೆ ಸಂತ್ರಸ್ತರು : ಮಳೆಗಾಲದಲ್ಲಿ ರೌದ್ರವತಾರ ತಾಳುವ ನದಿಗಳಿಂದ ಬೇಕು ಮುಕ್ತಿ

| N/A | Published : Feb 17 2025, 12:32 PM IST

Cauvery River
ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿ ನೆರೆ ಸಂತ್ರಸ್ತರು : ಮಳೆಗಾಲದಲ್ಲಿ ರೌದ್ರವತಾರ ತಾಳುವ ನದಿಗಳಿಂದ ಬೇಕು ಮುಕ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿ ನೆರೆ ಸಂತ್ರಸ್ತರು

ಮಳೆಗಾಲದಲ್ಲಿ ರೌದ್ರವತಾರ ತಾಳುವ ನದಿಗಳಿಂದ ಬೇಕು ಮುಕ್ತಿ । ಸಮಸ್ಯೆಗೆ ತೇಪೆ ಹಚ್ಚದೆ ಸೂಕ್ತ ಕ್ರಮ ಅಗತ್ಯ

(ಕರ್ನಾಟಕದ ಉತ್ತರ ಭಾಗದ ೧೭ ಜಿಲ್ಲೆಗಳನ್ನು ಹಿಂಡಿ ಹಿಪ್ಪಿ ಮಾಡಿರುವ ಪ್ರವಾಹ ಸಮಸ್ಯೆಗೆ ಪ್ರಸಕ್ತ ಬಜೆಟ್‌ ಶಾಶ್ವತ ಪರಿಹಾರ ಕಲ್ಪಿಸಲಿ ಎಂದು ನೆರೆ ಸಂತ್ರಸ್ತರು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಪ್ರವಾಹಕ್ಕೆ ಒಳಗಾಗುವ ನದಿಗಳ ಅತಿಕ್ರಮಣ ತೆರವು ಮತ್ತು ಒಡಲಲ್ಲಿನ ಹೂಳೆತ್ತಿ ಪ್ರವಾಹಕ್ಕೆ ಮೂಗುದಾರ ಹಾಕಬೇಕು. ಹಿಂದೆ ನೀಡಿದ ಪರಿಹಾರ, ಸೂರು, ಪುನರ್ವಸತಿ ವಾಸ್ತವಿಕ ನೆಲೆಗಟ್ಟಿನಲ್ಲಿ ನಡೆಯದೇ ನಿತ್ರಾಣಗೊಂಡಿರುವ ನಮ್ಮ ಬದುಕಿಗೆ ಈ ಬಜೆಟ್‌ ಆಸರೆಯಾಗಲಿ ಎನ್ನುವುದು ನೆರೆ ಸಂತ್ರಸ್ತರ ಆಶಯ.)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಷ್ಟರಲ್ಲೇ ಮಂಡಿಸಲಿರುವ ‘ಬಜೆಟ್‌’ (ಆಯವ್ಯಯ) ಮೇಲೆ ವಿವಿಧ ಕ್ಷೇತ್ರದ ಜನತೆ ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಆದರೆ, ಒಂದು ಒಳ್ಳೆಯ ದಿನಕ್ಕಾಗಿ, ಸರ್ಕಾರದ ಒಂದು ದೃಢ ನಿರ್ಧಾರಕ್ಕಾಗಿ ಕಳೆದ 18 ವರ್ಷಗಳಿಂದ ಚಾತಕ ಪಕ್ಷಿಯಂತೆ ಎದುರು ನೋಡುತ್ತಿರುವ ‘ನೆರೆ ಸಂತ್ರಸ್ತರು’ ಮಾತ್ರ ಈ ಬಜೆಟ್‌ ಮೇಲೆ ಭಾರೀ ನಿರೀಕ್ಷೆ ಇಟ್ಟಿದ್ದಾರೆ. ಈಗಲಾದರೂ ತಮ್ಮ ಭಯ ನೀಗೀತು, ಮೊದಲಿನಂತೆ ಉತ್ತಮ ಬದುಕು ತಮ್ಮದಾಗುತ್ತದೆ ಎನ್ನುವ ಆಶಯ ಅವರದು.

ನೆರೆ-ಪ್ರವಾಹ ಪರಿಸ್ಥಿತಿ ಎದುರಾದಾಗ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಂಡು, ಬಜೆಟ್‌ ವೇಳೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದುದರಿಂದ 2007 ರಿಂದ 2024ರ ವರೆಗೆ ಮಂಡನೆಯಾದ ರಾಜ್ಯದ 17 ಬಜೆಟ್‌ಗಳು ನಿರಾಸೆಯನ್ನೇ ಉಣಿಸಿವೆ. ಇದರಿಂದ ಸಿದ್ದರಾಮಯ್ಯ ಅವರ ಈ ದಾಖಲೆಯ 16ನೇ ಬಜೆಟ್‌ ಮೇಲೆ ನೆರೆ ಸಂತ್ರಸ್ತರ ನಿರೀಕ್ಷೆ ಹೆಚ್ಚಿದೆ.

ಪ್ರವಾಹ ಸಮಸ್ಯೆಗೆ ಏನು ಕಾರಣ?

ನೆರೆ ಸಮಸ್ಯೆಯ ಮೂಲ ನದಿ, ಹಳ್ಳಗಳ ಅತಿಯಾದ ಒತ್ತುವರಿ ಮತ್ತು ಅವುಗಳ ಒಡಲಲ್ಲಿ ಬೆಳೆದಿರುವ ಮುಳ್ಳು, ಗಿಡಗಂಟಿ, ಆಪು, ಹೂಳು. ಇದರಿಂದಾಗಿ ತುಸುವೇ ಮಳೆಯಾದರೂ ನದಿ, ಹಳ್ಳಗಳು ಉಕ್ಕೇರಿ ಪ್ರವಾಹ ಪರಿಸ್ಥಿತಿ ನಿರ್ಮಿಸಿ, ಊರು-ಕೇರಿಗಳನ್ನು ಜಲಾವೃತಗೊಳಿಸಿ, ಜನ-ಜಾನುವಾರು, ಫಲವತ್ತಾದ ಭೂಮಿಯನ್ನು ಕೊಚ್ಚಿ ಒಯ್ದು ಮಹಾ ದುರಂತವನ್ನೇ ಸೃಷ್ಟಿಸುತ್ತಾ ಬಂದಿದೆ. ಇಂಥ ಜಲ ದುರಂತಗಳಿಗೆ ಈವರೆಗೆ 912 ಗ್ರಾಮಗಳು ತೊಂದರೆ ಎದುರಿಸಿವೆ. 4 ಲಕ್ಷ ಜನ ಸಂತ್ರಸ್ತರಾಗಿದ್ದರು. 316 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರ ಸಾವಿರಗಟ್ಟಲೇ ಜಾನುವಾರುಗಳು ಬಲಿಯಾಗಿವೆ. ಸರಿ ಸುಮಾರು ₹2 ಲಕ್ಷ ಕೋಟಿ ಹಾನಿಯ ಅಂದಾಜಿದೆ. ಈ ಮಹಾ ದುರಂತವನ್ನು ಈಗಲಾದರೂ ಗಂಭೀರವಾಗಿ ಪರಿಗಣಿಸಬೇಕಲ್ಲವೇ?

ನೆರೆ ಪೀಡಿತ ಪ್ರದೇಶ

ಬರಗಾಲಕ್ಕೆ ಮದ್ದು ಹುಡುಕುವಲ್ಲಿ ಸರ್ಕಾರಗಳು ನಿರ್ಲಕ್ಷ್ಯ ತೋರಿದ್ದರ ಪರಿಣಾಮವಾಗಿ ‘ಕರ್ನಾಟಕದ ಉತ್ತರ ಭಾಗ’ದ ಜನ ಆಗಾಗ ಉದ್ಯೋಗ ಅರಸಿ ಗೋವಾ, ಮಹಾರಾಷ್ಟ್ರ, ಮಂಗಳೂರು, ಬೆಂಗಳೂರಿನಂತ ಮಹಾನಗರಗಳಿಗೆ ‘ಗುಳೆ’ ಹೋಗುತ್ತಿದ್ದರು. ಕಳೆದ ಒಂದೂವರೆ ದಶಕದಲ್ಲಿ ಆರು ಬಾರಿ ಉಕ್ಕೇರಿದ ಪ್ರವಾಹ ಅವರ ಬದುಕನ್ನು ಬೀದಿಗೆ ಚೆಲ್ಲಿದ್ದರಿಂದ ಅವರೀಗ ಶಾಶ್ವತ ವಲಸಿಗರಾಗಿದ್ದಾರೆ. ಬರಪೀಡಿತ ನೆಲವೀಗ ನೆರೆ ಪೀಡಿತ ಪ್ರದೇಶ ಎನ್ನುವ ಹೊಸ ಹೆಸರು ಪಡೆದಿದೆ.

ಜೀವನಾಡಿ ಎನಿಸಿರುವ ಕೃಷ್ಣೆ, ಭೀಮೆ, ದೋಣಿ, ಘಟಪ್ರಭಾ, ಮಲಪ್ರಭಾ, ವರದಾ, ತುಂಗಾ, ಗಂಗಾವಳಿ, ಕಾಳಿ ನದಿಗಳು ಮತ್ತು ಬೆಣ್ಣೆಹಳ್ಳ, ತುಪ್ರಿಹಳ್ಳ, ದೊಡ್ಡ ಹಳ್ಳಗಳು ನಿಸರ್ಗದಲ್ಲಿನ ವೈಪರೀತ್ಯ, ನಿರ್ವಹಣೆ ಕೊರತೆ ಮತ್ತು ನದಿ ಪಾತ್ರದ ರೈತರ ದುರಾಸೆಯಿಂದಾಗಿ ಅಕ್ಷರಶಃ ರೌದ್ರಾವತಾರ ತಾಳುತ್ತಿವೆ. ಸುಮಾರು ದಶಕಗಳ ಬಳಿಕ ೨೦೦೭ರಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ಸರ್ಕಾರ ಹೇಗೋ ಅದನ್ನು ನಿಭಾಯಿಸಿ ಜನರಲ್ಲಿ ಧೈರ್ಯ ತುಂಬಿತ್ತು. ೨೦೦೯ರಲ್ಲಿ ವಾರಗಟ್ಟಲೇ ವರುಣ ಅಬ್ಬರಿಸಿದ್ದರಿಂದ ಆರು ದಶಕಗಳಲ್ಲೇ ಅಧಿಕ ಎನ್ನುವಂತೆ ಈ ನದಿಗಳೆಲ್ಲ ಉಕ್ಕೇರಿ ೧೧ ಜಿಲ್ಲೆಗಳ ೨೩೬ ಗ್ರಾಮಗಳು ಜಲಾವೃತಗೊಂಡಿದ್ದವು. ೧.೨೪ ಲಕ್ಷ ಜನ ಸಂತ್ರಸ್ತರಾಗಿದ್ದರು. ಸರ್ಕಾರ ೪೮೦ ಪರಿಹಾರ ಕೇಂದ್ರಗಳನ್ನು ತೆರೆದು ತಾತ್ಕಾಲಿಕ ರಕ್ಷಣೆ ನೀಡಿತ್ತು. ಆಗ ೧೯೦ ಜನ ಪ್ರಾಣ ಕಳೆದುಕೊಂಡಿದ್ದರು. ಬರೋಬ್ಬರಿ ₹೧೬ ಸಾವಿರ ಕೋಟಿ ಹಾನಿಯಾಗಿತ್ತು.

ಈ ದುರಂತದಿಂದ ನೆರೆ ಸಂತ್ರಸ್ತರು ಚೇತರಿಸಿಕೊಳ್ಳುವ ಮುನ್ನವೇ ಸರಿಯಾಗಿ ಹತ್ತು ವರ್ಷಗಳ ಬಳಿಕ 2019 ರಲ್ಲಿ ಅದಕ್ಕಿಂತ ಭೀಕರವಾದ ಪ್ರವಾಹ ಪರಿಸ್ಥಿತಿ ತಲೆದೋರಿತು. 17 ಜಿಲ್ಲೆಗಳ ೮೦ ತಾಲೂಕಿನ ೮೪೦ ಗ್ರಾಮಗಳು ನೆರೆಯಲ್ಲಿ ನೆನೆದು ತೊಪ್ಪೆಯಾದವು. ಸರ್ಕಾರ 2.2 ಲಕ್ಷ ಜನರನ್ನು ರಕ್ಷಿಸಿತು. ಅದರಲ್ಲಿ 1.26ಲಕ್ಷ ಸಂತ್ರಸ್ತರಿಗಾಗಿ704 ಪರಿಹಾರ ಕೇಂದ್ರಗಳನ್ನು ತೆರೆದು ತಾತ್ಕಾಲಿಕ ಆಸರೆ ಕಲ್ಪಿಸಿತು. ಕಳೆದ ಬಾರಿಯಷ್ಟು ಪ್ರಾಣ ಹಾನಿಯಾಗಲಿಲ್ಲ ಎನ್ನುವುದನ್ನು ಬಿಟ್ಟರೆ ಆಗಿರುವ ಹಾನಿ ನೆರೆ ಇಳಿದು 7 ವರ್ಷ ಕಳೆದರೂ ಲೆಕ್ಕಕ್ಕೆ ಸಿಗುತ್ತಿಲ್ಲ. ರಸ್ತೆ, ಸೇತುವೆಗಳು ಕೊಚ್ಚಿಹೋಗಿ ಎಷ್ಟೋ ತಾಲೂಕುಗಳು ಸಂಪರ್ಕ ಕಡೆದುಕೊಂಡಿದ್ದವು. ಆರಂಭದಲ್ಲಿ ₹೪೦ ಸಾವಿರ ಕೋಟಿ ಎಂದು ಹಾನಿಯ ಅಂದಾಜು ಮಾಡಲಾಗಿತ್ತು. ಅದು ₹1ಲಕ್ಷ ಕೋಟಿ ದಾಟಿದ ಮಾಹಿತಿ ಇದೆ.

2023ರಲ್ಲೂ ಪ್ರವಾಹ ಉತ್ತರ ಕರ್ನಾಟಕ ಅಷ್ಟೇ ಅಲ್ಲ ಕರಾವಳಿ, ಕೊಡಗು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳನ್ನು ಆವರಿಸಿ ಸರ್ಕಾರಿ ಯಂತ್ರವೇ ದಿಕ್ಕೆಟ್ಟು ನಿಲ್ಲುವಂತೆ ಮಾಡಿತ್ತು. ಕೇಂದ್ರ ಸರ್ಕಾರ ಕಳುಹಿಸಿದ್ದ ಅರೆ ಸೇನಾಪಡೆ, ಹೆಲಿಕಾಪ್ಟರ್‌ಗಳೂ ನಿಯಂತ್ರಿಸುವಲ್ಲಿ ಪರದಾಡಿದವು.

ದಾನಿಗಳ ದೊಡ್ಡ ನೆರವು

2007, 2009 ರಲ್ಲಿ ಪ್ರವಾಹಕ್ಕೆ ಸಿಕ್ಕು ನಲುಗಿದ ಒಟ್ಟು 229  ಗ್ರಾಮಗಳ ಸ್ಥಳಾಂತರಕ್ಕೆ ನಿರ್ಧರಿಸಿದ ಸರ್ಕಾರ ದಾನಿಗಳ ನೆರವು ಯಾಚಿಸಿತು. ನೆರೆ ಸಂತ್ರಸ್ತರ ನೋವಿಗೆ ಕಣ್ಣೀರಾದ, ಸರ್ಕಾರದ ಮನವಿಗೆ ಸ್ಪಂದಿಸಿದ 71 ದಾನಿಗಳು ಸಂತ್ರಸ್ತರಿಗೆ ಸೂರು ಕಲ್ಪಿಸಲು ತಾವು ಸಿದ್ಧ ಎಂದು ವಾಗ್ದಾನ ಮಾಡಿದರು. ಆದರೆ, ಕೊನೆಯಲ್ಲಿ ಮಾತಿನಂತೆ ನಡೆದುಕೊಂಡಿದ್ದು 21 ದಾನಿಗಳು ಮಾತ್ರ.

ಕೇರಳದ ಮಾತಾ ಆನಂದಮಯಿ ಮತ್ತು ಆದಿ ಚುಂಚನಗಿರಿ ಮಠದಿಂದ ಹೆಚ್ಚು ಸೂರುಗಳು ನಿರ್ಮಾಣವಾದವು. ತುಮಕೂರು ಸಿದ್ಧಗಂಗಾ ಸಂಸ್ಥೆ, ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆ, ಇನ್ಫೋಸಿಸ್, ಸಂಸದರಾಗಿದ್ದ ರಾಜೀವ ಚಂದ್ರಶೇಖರ್, ಎಸ್ಸಾರ್ ಗ್ರೂಪ್, ಬಯೋಕಾನ್, ಸೇವಾ ಭಾರತಿ, ಸಿಸ್ಕೋ, ಕಾಫಿ ಡೇ, ಸಿಟಿಜನ್ ಪೋರಂ, ರೇಣುಕಾ ಶುಗರ್ಸ್, ವಿಪ್ರೋ, ಸುತ್ತೂರು ಮಠ, ಬಿಇಎಲ್ ಸೇರಿದಂತೆ ಅನೇಕ ದಾನಿ ಸಂಸ್ಥೆಗಳು ತಾವೇ ಮುಂದಾಗಿ ನವಗ್ರಾಮ, ಇಲ್ಲವೆ ತಮ್ಮ ಶಕ್ತ್ಯಾನುಸಾರ ಮನೆಗಳನ್ನು ನಿರ್ಮಿಸಿ ಕೊಟ್ಟರು. ಉಳಿದವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೊಡ್ಡ ಪ್ರಮಾಣದ ದೇಣಿಗೆ ನೀಡಿದರು.

ತಪ್ಪು ಹೆಜ್ಜೆ ಪಾಠವಾಗಲಿ

ಸರ್ಕಾರದ ಈ ಸಿದ್ಧ ಸೂತ್ರ ನೆರೆ ಸಂತ್ರಸ್ತರಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಅನ್ವಯವಾಗುತ್ತಿಲ್ಲ ಎನ್ನುವುದು ೨೦೦೯ರ ಸಂತ್ರಸ್ತರಿಗಾಗಿ ಕಲ್ಪಿಸಿರುವ ‘ಪರಿಹಾರ’ ಮತ್ತು ‘ಆಸರೆ’ ಯೋಜನೆಯ ನವಗ್ರಾಮಗಳಿಂದ ತಿಳಿದುಬರುತ್ತದೆ. ಅವೈಜ್ಞಾನಿಕ ಸೂರುಗಳು ಈಗಲೂ ಖಾಲಿ ಖಾಲಿ ಉಳಿದಿವೆ. ಆ ನವಗ್ರಾಮಗಳು ಹಾಳು ಕೊಂಪೆಯಾಗಿವೆ. ಈ ತಪ್ಪು ಪಾಠವಾಗಬೇಕಿದೆ.

ಈ ಆಸರೆಯ ಸೂರು ಒಗ್ಗದವರು ಅದೇ ನೆರೆಪೀಡಿತ ಊರಲ್ಲಿ ಉಳಿದಿದ್ದು, ಆಗಾಗ ಸಂತ್ರಸ್ತರಾಗುತ್ತಿದ್ದಾರೆ. ಅಚ್ಚರಿಯೆಂದರೆ ಸರ್ಕಾರ ಹಿಂದೆ ಪರಿಹಾರ ನೀಡಿದ ಮನೆಗಳಿಗೇ ಮತ್ತೆ ಮತ್ತೆ ಪರಿಹಾರ ನೀಡುತ್ತಿದೆ. ಆ ಸಂತ್ರಸ್ತರೂ ಸೇರಿದಂತೆ ಎಲ್ಲ ನೆರೆ ಸಂತ್ರಸ್ತರಿಗೆ ಸೂರು, ಪುನರ್ವಸತಿ ಕಲ್ಪಿಸುವುದಾಗಿ ಹೇಳುತ್ತಲೇ ವರ್ಷಗಳನ್ನು ದೂಡುತ್ತಿದೆ. ಪ್ರತಿಬಾರಿ ಪ್ರವಾಹ ಬಂದಾಗ ಈ ಸಿದ್ಧ ಸೂತ್ರದ ನಾಟಕಗಳು, ಗಂಜೀ ಕೇಂದ್ರಗಳು, ಪರಿಹಾರ ನೀಡಿಕೆಗಳು, ಶಾಶ್ವತ ಪರಿಹಾರದ ಭರವಸೆಗಳು ಮತ್ತೆ ಮತ್ತೆ ಚಲಾವಣೆಯಲ್ಲಿ ಇರುತ್ತವೆ.

ನೆರೆಗೆ ಶಾಶ್ವತ ಪರಿಹಾರ

ಈ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಜಲತಜ್ಞ ಎಂ.ಪರಮಶಿವಯ್ಯ ಸಮಿತಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ತಂಡಗಳು ನೀಡಿದ ವರದಿಗಳು ಸರ್ಕಾರದ ಬಳಿ ಇವೆ. ಅವುಗಳ ಆಧಾರದಲ್ಲಿ ಹಿಂದಿನ ಸರ್ಕಾರ ನೆರೆ ಉಕ್ಕುವ ನದಿ-ಹಳ್ಳಗಳ ಸರ್ವೇ ಕಾರ್ಯ, ಅತಿಕ್ರಮಣ ಮತ್ತು ಹೂಳು ತೆರವು ಮಾಡುವ ಬಗ್ಗೆ ಒಂದು ಹೆಜ್ಜೆ ಮುಂದಿಟ್ಟಿದೆ. ಅದನ್ನು ದೊಡ್ಡ ಹೆಜ್ಜೆ ಮಾಡುವ, ಯೋಜನೆಯನ್ನು ಬೃಹತ್ತಾಗಿ ಕೈಗೆತ್ತಿಕೊಳ್ಳುವ ಕಳಕಳಿಯನ್ನು ಹಾಲಿ ಕಾಂಗ್ರೆಸ್‌ ಸರ್ಕಾರ ತೋರಬೇಕಿದೆ. ಅಂದರೆ ಪ್ರಸಕ್ತ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ದೊಡ್ಡ ಮಟ್ಟದ ಅನುದಾನ ತೆಗೆದಿರಿಸಿ ಕಾಯೋನ್ಮುಖ ಆಗಬೇಕಿದೆ. ಈ ನೆರೆಪೀಡಿತ ಪ್ರದೇಶದಿಂದ ಆಯ್ಕೆಯಾಗಿರುವ ಶಾಸಕರು, ಸಂಸದರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಈ ಕಾರ್ಯಕ್ಕೆ ಹೆಚ್ಚಿನ ಅನುದಾನ ನಿಗದಿ ಮಾಡಿಸಬೇಕಿದೆ. ಅದು ಅವರ ಕರ್ತವ್ಯ ಕೂಡ.