ದುರಂತ ಮೈಮರೆತ ಸರ್ಕಾರ, ತುಂಗಭದ್ರಾ ಬೋರ್ಡ್ - ಮತ್ತೊಂದು ಮಳೆಗಾಲ ಬಂದರೂ ಶಾಶ್ವತ ದುರಸ್ತಿ ಇಲ್ಲ

| N/A | Published : Feb 17 2025, 11:33 AM IST

tungabhadra

ಸಾರಾಂಶ

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರ ನೇಮಕಾತಿಗೂ, ವಿವಾದಕ್ಕೂ ಒಂದು ರೀತಿ ಕಾಯಂ ನಂಟು ಎನ್ನುವಂತಾಗಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು : ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರ ನೇಮಕಾತಿಗೂ, ವಿವಾದಕ್ಕೂ ಒಂದು ರೀತಿ ಕಾಯಂ ನಂಟು ಎನ್ನುವಂತಾಗಿದೆ.

ಮಂಡಳಿ ಅಧ್ಯಕ್ಷರು ಹೊಂದಿರಬೇಕಾದ ಜ್ಞಾನ, ಅನುಭವ ಇತ್ಯಾದಿ ಹಲವು ಅಂಶಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ನೇಮಕ ವೇಳೆ ಅದು ಕಟ್ಟುನಿಟ್ಟಾಗಿ ಪಾಲನೆಯಾಗದ ಪರಿಣಾಮ ಕಳೆದ ಒಂದು ದಶಕದಿಂದ ಮಂಡಳಿಯ ಅಧ್ಯಕ್ಷರ ನೇಮಕಾತಿ ನಿರಂತರವಾಗಿ ವಿವಾದಕ್ಕೆ ಗುರಿಯಾಗುತ್ತಿದೆ.

ಅಧ್ಯಕ್ಷರ ನೇಮಕ ಮಾಡುತ್ತಿದ್ದಂತೆ ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗುತ್ತಿದೆ. ನೇಮಕಾತಿ ವೇಳೆ ಸರ್ಕಾರ ಸುಪ್ರಿಂ ಕೋರ್ಟ್‌ ಹಾಗೂ ಹೈಕೋರ್ಟ್‌ ಮಾರ್ಗಸೂಚಿ, ಜಲ ಕಾಯ್ದೆ-1974ರ ನಿಯಮಗಳು ಪಾಲನೆಯಾಗಿಲ್ಲ. ರಾಜಕೀಯ ಕಾರಣಗಳಿಗೆ ನೇಮಕಾತಿ ನಡೆಸಲಾಗಿದೆ ಎಂದು ಆಕ್ಷೇಪಿಸಲಾಗುತ್ತಿದೆ. ಆದರೆ, ಅರ್ಜಿ ಇತ್ಯರ್ಥವಾಗುವ ವೇಳೆಗೆ ಅಧ್ಯಕ್ಷರೇ ರಾಜೀನಾಮೆ ನೀಡುವುದು ಅಥವಾ ಹೊಸದಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳು ಅಧ್ಯಕ್ಷರನ್ನು ಬದಲಿಸುತ್ತಾ ಬಂದಿವೆ.

ಮತ್ತೊಂದೆಡೆ ನೇಮಕಾತಿಯಲ್ಲಿ ಕಾನೂನು ಪಾಲನೆಯಾಗದಿದ್ದಾಗ, ಸರ್ಕಾರವನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡ ಉದಾಹರಣೆಗಳಿವೆ. ಕೆಲವೊಮ್ಮೆ ಅಧ್ಯಕ್ಷರ ನೇಮಕಾತಿ ಹೈಕೋರ್ಟ್‌ ಎತ್ತಿಹಿಡಿದು, ಅರ್ಜಿ ವಜಾಗೊಳಿಸಿದೆ. ಈ ಮಧ್ಯೆ ಅಧ್ಯಕ್ಷರನ್ನು ರಾಜ್ಯ ಸರ್ಕಾರವೇ ತೆಗೆದು ಹಾಕಿದಾಗ, ಹುದ್ದೆಯಿಂದ ಕೆಳಗೆ ಇಳಿದವರೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಸರ್ಕಾರ ಕ್ರಮ ವಿರೋಧಿಸಿದ ಸನ್ನಿವೇಶವೂ ಇದೆ.

ಇದೀಗ ಕೆಎಸ್‌ಪಿಸಿಬಿ ಅಧ್ಯಕ್ಷರಾಗಿ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ರಾಜ್ಯ ಸರ್ಕಾರ ನೇಮಿಸಿರುವುದೂ ವಿವಾದಕ್ಕೆ ಗುರಿಯಾಗಿದೆ. ನರೇಂದ್ರ ಸ್ವಾಮಿ ನೇಮಕಾತಿ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ನೀಡಿದೆ.

2015ರಿಂದ ನಿರಂತರ ವಿವಾದ:

2015ರಿಂದಲೂ ಮಂಡಳಿ ಅಧ್ಯಕ್ಷರ ನೇಮಕಾತಿ ನಿರಂತರವಾಗಿ ವಿವಾದಕ್ಕೆ ಗುರಿಯಾಗುತ್ತಿದೆ. 2015ರ ಡಿ.21ರಂದು ಸಿವಿಲ್‌ ಎಂಜಿನಿಯರಿಂಗ್‌ ಪದವೀಧರಾಗಿರುವ ಲಕ್ಷ್ಮಣ್‌ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿತ್ತು. 2017ರಲ್ಲಿ ಕೆಲವರು ಈ ನೇಮಕಾತಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪರಿಸರ ಮತ್ತು ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಅಥವಾ ಪರಿಸರ ತಂತ್ರಜ್ಞಾನ ವಿಷಯದಲ್ಲಿ ಪದವಿ ಪಡೆಯದ ಲಕ್ಷ್ಮಣ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಆಕ್ಷೇಪಿಸಿದ್ದರು. ಸೂಕ್ತ ಶೈಕ್ಷಣಿಕ ಅರ್ಹತೆ ಇಲ್ಲದ ಲಕ್ಷ್ಮಣ್‌ರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ ಎಂದು 2017ರ ಜ.6ರಂದು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

ಶಾಸಕ ಡಾ.ಕೆ. ಸುಧಾಕರ್‌ (ಹಾಲಿ ಚಿಕ್ಕಬಳ್ಳಾಪುರ ಸಂಸದ) ಅವರನ್ನು 2019ರ ಜೂ.20ರಂದು ಅಂದಿನ ಕಾಂಗ್ರೆಸ್‌-ಸಮ್ಮಿಶ್ರ ಸರ್ಕಾರ ಅಧ್ಯಕ್ಷರಾಗಿ ನೇಮಿಸಿತ್ತು. ಆ ಕುರಿತು ಹೈಕೋರ್ಟ್‌ ಮೆಟ್ಟಿಲೇರಿದ್ದ ಆರ್‌.ಆಂಜನೇಯ ರೆಡ್ಡಿ ಸುಪ್ರೀಂ ಕೋರ್ಟ್‌ ಆದೇಶ ಬದಿಗೊತ್ತಿ ಯಾವುದೇ ಮಾರ್ಗಸೂಚಿ ರಚಿಸದೆ ಸುಧಾಕರ್‌ರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದಿದ್ದರು. ಸುಧಾಕರ್ ಅವರ ನೇಮಕಾತಿಯ ಎಲ್ಲ ದಾಖಲೆಗಳನ್ನು ರಾಜ್ಯ ಸರ್ಕಾರದಿಂದ ಹೈಕೋರ್ಟ್‌ ಕೇಳಿತ್ತು. ಈ ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ ಸುಧಾಕರ್‌ 2019ರ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು.

ನಂತರ ಬಿಜೆಪಿ ಸರ್ಕಾರ ಅಧ್ಯಕ್ಷ ಹುದ್ದೆಗೆ ಎಂ.ಸುಧೀಂದ್ರರಾವ್ ಅವರನ್ನು 2019ರ ಡಿ.30ರಂದು ನೇಮಿಸಿತ್ತು. ಆ ನೇಮಕಾತಿಯನ್ನೂ ಹೈಕೋರ್ಟ್‌ನಲ್ಲಿ ಕೆಲವರು ಪ್ರಶ್ನಿಸಿದ್ದರು. ಆದರೆ, 2020ರ ಮೇ 2ರಂದು ಸುಧೀಂದ್ರರಾವ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ವಿಪರ್ಯಾಸವೆಂದರೆ ಸುಧೀಂದ್ರ ರಾವ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ಸಹಿಯಿದ್ದ ಖಾಲಿ ಹಾಳೆಗಳನ್ನು ಬಳಸಿ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಅವರಿಗೆ ಕಳುಹಿಸಿದ್ದಾರೆ. ಅದನ್ನು ಮುಖ್ಯಮಂತ್ರಿ ಅಂಗೀಕರಿಸಿದ್ದಾರೆ ಎಂದು ಆರೋಪಿಸಿದ್ದರು. ಆ ಅರ್ಜಿಯನ್ನು ಹೈಕೋರ್ಟ್‌ 2020ರ ಜು.19ರಂದು ವಜಾಗೊಳಿಸಿತ್ತು.

ಇದಾದ ಬಳಿಕ ಶಾಂತ್‌ ಎ.ತಿಮ್ಮಯ್ಯ ಅವರನ್ನು ಅಧ್ಯಕ್ಷರನ್ನಾಗಿ 2021ರ ನ.11ರಂದು ನೇಮಿಸಲಾಗಿತ್ತು. 2023ರ ಆ.31ರಂದು ಶಾಂತ್‌ ಅಧಿಕಾರಾವಧಿಯನ್ನು ಕಾಂಗ್ರೆಸ್‌ ಸರ್ಕಾರ ಕಡಿತಗೊಳಿಸಿತ್ತು. ಅದನ್ನು ಪ್ರಶ್ನಿಸಿ ಶಾಂತ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅಧ್ಯಕ್ಷ ಹುದ್ದೆಯಲ್ಲಿ ತಿಮ್ಮಯ್ಯ ಮುಂದುವರಿಯಲು ಹೈಕೋರ್ಟ್‌ ಅನುಮತಿಸಿತ್ತು. ನಂತರ ಶಾಂತ್‌ ಅವರ ಅಧಿಕಾರವಧಿ 2024ರ ನವೆಂಬರ್‌ನಲ್ಲಿ ಪೂರ್ಣಗೊಂಡಿತ್ತು.

ಇದೀಗ ಕೆಎಸ್‌ಪಿಸಿಬಿ ಅಧ್ಯಕ್ಷ ಹುದ್ದೆಗೆ ನರೇಂದ್ರ ಸ್ವಾಮಿಯನ್ನು ನೇಮಿಸಲಾಗಿದೆ. ಇದನ್ನು ಪ್ರಶ್ನಿಸಿರುವ ಆರ್‌.ಆಂಜನೇಯ ರೆಡ್ಡಿ, ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಉಲ್ಲಂಘಿಸಿ ಪರಿಸರ ವಿಜ್ಞಾನ ಪದವಿ ಪಡೆಯದ ಹಾಗೂ ಯಾವುದೇ ನಿರ್ದಿಷ್ಟ ಅರ್ಹತೆಯಿಲ್ಲದ ನರೇಂದ್ರ ಸ್ವಾಮಿಯನ್ನು ಕೇವಲ ರಾಜಕೀಯ ಕಾರಣಗಳಿಗೆ ಅಧ್ಯಕ್ಷರಾಗಿ ನೇಮಿಸಲಾಗಿದೆ. ಆದ ಕಾರಣ ಅವರ ನೇಮಕಾತಿ ರದ್ದುಪಡಿಸುವಂತೆ ಕೋರಿದ್ದಾರೆ.

ಕಾಯ್ದೆ ಏನು ಹೇಳುತ್ತೆ?

ಜಲ ಕಾಯ್ದೆಯ ಸೆಕ್ಷನ್ 4ರಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವವರು ಪರಿಸರ ಸಂರಕ್ಷಣೆ ಕುರಿತು ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಹೊಂದಿರಬೇಕು. ಆದರೆ, 2020ರ ಜೂ.19ರಂದು ಅಂದಿನ ಸರ್ಕಾರ ತಿದ್ದುಪಡಿ ನಿಯಮ ರೂಪಿಸಿ, ಪರಿಸರಕ್ಕೆ ಸಂಬಂಧಿಸಿದ ಸಂಸ್ಥೆಗಳ ಆಡಳಿತ ನಡೆಸಿದ ಅನುಭವ ಹೊಂದಿರುವ, ಸರ್ಕಾರಿ ಇಲಾಖೆ, ಸಂಸ್ಥೆ ಅಥವಾ ವಿಶ್ವವಿದ್ಯಾಲಯದ ಆಡಳಿತದ ಭಾಗವಾಗಿರುವ ಮತ್ತು 56 ರಿಂದ 65 ವರ್ಷದ ಒಳಗಿನವರು ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿತ್ತು.