ಸಾರಾಂಶ
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ಕೆಲ ಪಿಯು ಕಾಲೇಜುಗಳು ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕ ದಾಖಲಿಸುವಲ್ಲಿ ಆಗಿರುವ ತಪ್ಪು ಸರಿಪಡಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಆಗ್ರಹಿಸಿದೆ.
ಬೆಂಗಳೂರು : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ಕೆಲ ಪಿಯು ಕಾಲೇಜುಗಳು ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕ ದಾಖಲಿಸುವಲ್ಲಿ ಆಗಿರುವ ತಪ್ಪು ಸರಿಪಡಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಸಮಿತಿ ಅಧ್ಯಕ್ಷ ಬಿ.ಎನ್.ಯೋಗಾನಂದ ಅವರು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ನಿರ್ದೇಶಕ ಎಸ್.ಭರತ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಕೆಲ ಕಾಲೇಜುಗಳು ಇಲಾಖೆಯ ಸ್ಯಾಟ್ಸ್ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕ ದಾಖಲಿಸುವಾಗ ತಪ್ಪಾಗಿ ನಮೂದಿಸಿವೆ. ಉದಾಹರಣೆಗೆ ವಿದ್ಯಾರ್ಥಿಗಳು 20 ಪಡೆದಿದ್ದರೆ 2 ಎಂದು ದಾಖಲಿಸಿದ್ದಾರೆ. ಇಂತಹ ಲೋಪದಿಂದ ತಮ್ಮದಲ್ಲದ ತಪ್ಪಿಗೆ ನೂರಾರು ವಿದ್ಯಾರ್ಥಿಗಳು ಸಿಟಿಇ ಕೌನ್ಸೆಲಿಂಗ್‌ನಿಂದ ವಂಚಿತರಾಗುತ್ತಿದ್ದಾರೆ. ಇನ್ನು ಕೆಲವರು ತಮಗೆ ಸಿಗಬೇಕಾದ ಉತ್ತಮ ಕಾಲೇಜಿನ ಸೀಟುಗಳು ಕೈಬಿಟ್ಟುಹೋಗುವಂತಾಗಿದೆ. ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಇಲಾಖೆ ಕೂಡಲೇ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.
ಈ ಮಧ್ಯೆ, ಕೆಲ ವಿದ್ಯಾರ್ಥಿಗಳು ಈ ಲೋಪ ಸರಿಪಡಿಸಲು ನ್ಯಾಯಾಲಯದ ಮೊರೆ ಹೋಗಿದ್ದರು. ತಪ್ಪು ಸರಿಪಡಿಸಿ ವಿದ್ಯಾರ್ಥಿಗಳು ಪಡೆದಿರುವ ಪೂರ್ಣ ಆಂತರಿಕ ಅಂಕಗಳನ್ನು ಸೇರ್ಪಡೆ ಮಾಡಿ ಅವರ ಫಲಿತಾಂಶ ಪ್ರಕಟಿಸಬೇಕು ಮತ್ತು ಹೊಸ ಅಂಕ ಪಟ್ಟಿ ನೀಡಲು ನ್ಯಾಯಾಲಯ ಆದೇಶಿಸಿದ್ದರೂ ಇದುವರೆಗೆ ಇಲಾಖೆ ಪಾಲಿಸಿಲ್ಲ. ಇನ್ನಾದರೂ ವಿದ್ಯಾರ್ಥಿಗಳ ನೆರವಿಗೆ ಧಾವಿಸುವಂತೆ ನಿರ್ದೇಶಕರಿಗೆ ಕೋರಿದರು
- ಖಾಸಗಿ ಶಾಲಾ-ಕಾಲೇಜು ಪೋಷಕ ಸಂಘಟನೆ ಸಮಿತಿ