ಮಹಿಳೆ ಹಣೇಲಿ ಬಿಂದಿ ಇರದ ಜಾಹೀರಾತು - ಕರ್ಣಾಟಕ ಬ್ಯಾಂಕ್ ಅಸ್ಮಿತೆ ಗೌರವಿಸದಕ್ಕೆ ಸಿಇಒ ತಲೆದಂಡ

| N/A | Published : Jun 30 2025, 09:36 AM IST

Karnataka Bank
ಮಹಿಳೆ ಹಣೇಲಿ ಬಿಂದಿ ಇರದ ಜಾಹೀರಾತು - ಕರ್ಣಾಟಕ ಬ್ಯಾಂಕ್ ಅಸ್ಮಿತೆ ಗೌರವಿಸದಕ್ಕೆ ಸಿಇಒ ತಲೆದಂಡ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಸಿಇಒ ಆಗಿರುವ ಶ್ರೀಕೃಷ್ಣನ್‌ ಹರಿಹರ ಶರ್ಮಾ ನೀಡಿದ ರಾಜೀನಾಮೆ ಹಾಗೂ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ (ಇಡಿ) ಶೇಖರ್‌ ರಾವ್‌ ಕೂಡ ನೀಡಿದ ರಾಜೀನಾಮೆಯನ್ನು ಬ್ಯಾಂಕ್‌ನ ನಿರ್ದೇಶಕ ಮಂಡಳಿ  ಅಂಗೀಕರಿಸಿದೆ.

  ಮಂಗಳೂರು :  ಖಾಸಗಿ ರಂಗದ ಪ್ರತಿಷ್ಠಿತ ಮುಂಚೂಣಿಯ ಬ್ಯಾಂಕ್‌ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಸಿಇಒ ಆಗಿರುವ ಶ್ರೀಕೃಷ್ಣನ್‌ ಹರಿಹರ ಶರ್ಮಾ ನೀಡಿದ ರಾಜೀನಾಮೆ ಹಾಗೂ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ (ಇಡಿ) ಶೇಖರ್‌ ರಾವ್‌ ಕೂಡ ನೀಡಿದ ರಾಜೀನಾಮೆಯನ್ನು ಬ್ಯಾಂಕ್‌ನ ನಿರ್ದೇಶಕ ಮಂಡಳಿ ಭಾನುವಾರ ಅಂಗೀಕರಿಸಿದೆ.

ಈ ರಾಜಿನಾಮೆ 2025ರ ಜು.15ರಿಂದ ಅನ್ವಯವಾಗಲಿದೆ. ಶ್ರೀಕೃಷ್ಣನ್‌ ಹರಿಹರ ಶರ್ಮಾ ಅವರು ಮುಂಬೈಗೆ ಮರಳುವುದೂ ಸೇರಿ ವೈಯಕ್ತಿಕ ಕಾರಣಗಳಿಂದ ರಾಜಿನಾಮೆ ನೀಡಿದ್ದಾಗಿ ತಿಳಿಸಿದ್ದಾರೆ.

ಬ್ಯಾಂಕ್‌ನ ಸಿಇಒ ಶೇಖರ್ ರಾವ್ ಅವರು ಕೂಡಾ ಮಂಗಳೂರಿಗೆ ಸ್ಥಳಾಂತರಗೊಳ್ಳಲು ಅಸಾಧ್ಯ ಎಂಬ ಕಾರಣ ನೀಡಿ ಮತ್ತು ಇತರ ವೈಯಕ್ತಿಕ ಸಮಸ್ಯೆಗಳ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ. ಹೊಸ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಮತ್ತು ಹೊಸ ಕಾರ್ಯನಿರ್ವಾಹಕ ನಿರ್ದೇಶಕರನ್ನು ಗುರುತಿಸಲು ಬ್ಯಾಂಕ್ ಶೋಧನಾ ಸಮಿತಿಯನ್ನು ರಚಿಸಿದೆ.

2023ರ ಜೂನ್‌ನಲ್ಲಿ ಶ್ರೀಕೃಷ್ಣನ್‌ ಕರ್ಣಾಟಕ ಬ್ಯಾಂಕ್‌ ಎಂಡಿ ಹಾಗೂ ಸಿಇಒ ಆಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿದ್ದರು. ಅದಕ್ಕೂ ಮೊದಲು 6 ವರ್ಷ ಕಾಲ ಮಹಾಬಲೇಶ್ವರ ಎಂ.ಎಸ್‌.ಅವರು ಬ್ಯಾಂಕ್‌ನ ಎಂಡಿ, ಸಿಇಒ ಆಗಿದ್ದರು. ಅವರ ಬಳಿಕ ಆಡಳಿತ ಮಂಡಳಿ ಇದೇ ಮೊದಲ ಬಾರಿಗೆ ಕನ್ನಡಿಗೇತರ ಚೆನ್ನೈ ಮೂಲದ ಶ್ರೀಕೃಷ್ಣನ್ ಅವರನ್ನು ಎಂಡಿ, ಸಿಇಒ ಆಗಿ ನೇಮಕ ಮಾಡಿತ್ತು.

ಬ್ಯಾಂಕ್‌ನ ಹಿತಾಸಕ್ತಿಗೆ ವಿರುದ್ಧವಾಗಿ ವರ್ತನೆ ಕಂಡುಬಂದ ಹಿನ್ನೆಲೆಯಲ್ಲಿ ಜೂ.14ರಂದು ನಡೆದ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಎಂಡಿ ಶ್ರೀಕೃಷ್ಣನ್‌ ರಾಜಿನಾಮೆಗೆ ಸೂಚನೆ ನೀಡಲಾಗಿತ್ತು. ಹೀಗಾಗಿ ಶ್ರೀಕೃಷ್ಣನ್ ಅವರು ಶುಕ್ರವಾರ ಎಂಡಿ ಹಾಗೂ ಸಿಇಒ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇವರಲ್ಲದೆ ಇಡಿ ಶೇಖರ್‌ ರಾವ್‌ ಅವರಿಂದಲೂ ನಿರ್ದೇಶಕ ಮಂಡಳಿ ರಾಜಿನಾಮೆ ಕೇಳಿತ್ತು ಎಂದು ಮೂಲಗಳು ತಿಳಿಸಿವೆ.

ಸಂಸ್ಕೃತಿಗೂ ವಿರೋಧ:

ಕರ್ಣಾಟಕ ಬ್ಯಾಂಕ್‌ನ ಶತಮಾನೋತ್ಸವ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆದಾಗ ಶ್ರೀಕೃಷ್ಣನ್‌ ಅವರ ಅನುಮೋದನೆಯಲ್ಲಿ ಜಾಹೀರಾತು ಪ್ರಕಟಗೊಂಡಿತ್ತು. ಅದರಲ್ಲಿ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಮಹಿಳೆಯ ಹಣೆಯಲ್ಲಿ ಬಿಂದಿ ಧರಿಸದ ಜಾಹೀರಾತು ನೀಡಲಾಗಿತ್ತು. ಇದು ಬ್ಯಾಂಕ್‌ನ ಗ್ರಾಹಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಕನ್ನಡ ವಿರೋಧಿ ಸಿಇಒ ಆರೋಪ:

ಬ್ಯಾಂಕಿನ ಎಂಡಿ, ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಶ್ರೀಕೃಷ್ಣನ್‌ ಅವರು ಕನ್ನಡ ವಿರೋಧಿ ಧೋರಣೆ ತಳೆದಿದ್ದರು. ಕನ್ನಡಿಗರಿಂದಲೇ ಸ್ಥಾಪನೆಗೊಂಡ, ಕರ್ನಾಟಕ ಕರಾವಳಿಯ ಹೆಮ್ಮೆಯ ಕರ್ಣಾಟಕ ಬ್ಯಾಂಕ್‌ ಅದರದ್ದೇ ಆದ ಅಸ್ಮಿತೆ ಹೊಂದಿದೆ. ಕಲೆ, ಸಂಸ್ಕೃತಿಗೆ ತನ್ನದೇ ಕೊಡುಗೆ ನೀಡುತ್ತಿರುವ ಕರ್ಣಾಟಕ ಬ್ಯಾಂಕ್‌ನ ಧ್ಯೇಯ ಉದ್ದೇಶಗಳಿಗೆ ತದ್ವಿರುದ್ಧವಾದ ಧೋರಣೆಯನ್ನು ಶ್ರೀಕೃಷ್ಣನ್‌ ಹೊಂದಿದ್ದರು ಎಂಬ ಆರೋಪ ಇದೆ. ಕರ್ಣಾಟಕ ಬ್ಯಾಂಕ್‌ ಎಂಡಿ, ಸಿಇಒ ಆಗಿದ್ದರೂ ಕನ್ನಡಿಗರ ವಿರೋಧ ಕಟ್ಟಿಕೊಂಡಿದ್ದಲ್ಲದೆ, ಬ್ಯಾಂಕಿನ ಬಗೆಗಿನ ಪ್ರಚಾರದ ಜವಾಬ್ದಾರಿಯನ್ನು ಕನ್ನಡಿಗರ ಕೈಯಿಂದ ಕಿತ್ತು ಮುಂಬೈ ಕಂಪನಿಯೊಂದಕ್ಕೆ ನೀಡಿದ್ದರು.

ಮೊದಲ ಕನ್ನಡೇತರ ಸಿಇಒ:

ಕರ್ನಾಟಕದ ಕರಾವಳಿಯಲ್ಲಿ 1924 ಫೆ.18ರಂದು ಹುಟ್ಟಿ ಬೆಳೆದ ಕರ್ಣಾಟಕ ಬ್ಯಾಂಕ್‌ನಲ್ಲಿ ಈವರೆಗೂ ಕನ್ನಡಿಗರೇ ಸಿಇಒ ಆಗಿದ್ದರು. ಇದೇ ಮೊದಲ ಬಾರಿಗೆ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಕನ್ನಡೇತರರನ್ನು ಪ್ರಮುಖ ಸ್ಥಾನದಲ್ಲಿ ಕೂರಿಸುವ ಮೂಲಕ ಪ್ರಮಾದ ಎಸಗಿತ್ತು ಎಂಬ ಮಾತು ಆರಂಭದ ದಿನಗಳಲ್ಲೇ ಕೇಳಿಬಂದಿತ್ತು.

ಮುಖ್ಯವಾಗಿ ಕನ್ನಡ ವಿರೋಧಿ ಧೋರಣೆ ತಳೆದಿದ್ದ ಶ್ರೀಕೃಷ್ಣನ್‌, ಬ್ಯಾಂಕಿನ ನೇಮಕಾತಿಗಳಲ್ಲೂ ಕನ್ನಡಿಗರನ್ನು ದೂರ ಇರಿಸುವ ಪ್ರಕ್ರಿಯೆ ನಡೆಸಿದ್ದರು. ಡಿಜಿಎಂ, ಜಿಎಂಗಳ ನೇಮಕಾತಿಯಲ್ಲೂ ನಿರ್ದೇಶಕ ಮಂಡಳಿಯ ಸೂಚನೆ ಧಿಕ್ಕರಿಸಿ ಸ್ವಜನಪಕ್ಷಪಾತ ನಡೆಸುತ್ತಿದ್ದ ಆರೋಪ ವ್ಯಕ್ತವಾಗಿದೆ. ‘ನಮ್ಮ ಕರ್ಣಾಟಕ ಬ್ಯಾಂಕ್‌ ನಾಡಿನಾದ್ಯಂತ..’ ಎಂದಿದ್ದ ಸ್ಲೋಗನ್‌ನ್ನು ‘ಭಾರತ್‌ ಕಾ ಕರ್ಣಾಟಕ ಬ್ಯಾಂಕ್‌’ ಎಂದು ಬದಲಾಯಿಸಿ ಕನ್ನಡ ವಿರೋಧಿ ಮಾನಸಿಕತೆ ಮೆರೆದಿದ್ದರು.

ಇದು ಕೂಡ ನಿರ್ದೇಶಕ ಮಂಡಳಿಯ ಅಸಮಾಧಾನಕ್ಕೆ ಕಾರಣವಾಗಿತ್ತು.

ಪ್ರಧಾನ ಕಚೇರಿ ಸ್ಥಳಾಂತರ ಯತ್ನ:

ಕರ್ಣಾಟಕ ಬ್ಯಾಂಕಿನ ಪ್ರಧಾನ ಕಚೇರಿ ಮಂಗಳೂರಿನಲ್ಲಿ ಇದೆ. ನಿರ್ದೇಶಕ ಮಂಡಳಿ ಸೇರಿದಂತೆ ಎಲ್ಲ ಸಭೆಗಳು ಮಂಗಳೂರಿನ ಪ್ರಧಾನ ಕಚೇರಿಯಲ್ಲೇ ನಡೆಯುತ್ತವೆ. ಆದರೆ ಎಂಡಿ, ಸಿಇಒ ಆಗಿ ಶ್ರೀಕೃಷ್ಣನ್‌ ಅವರು ಬ್ಯಾಂಕಿನ ನಿರ್ದೇಶಕ ಮಂಡಳಿ ಹಾಗೂ ಇತರೆ ಸಭೆಗಳನ್ನು ಹೆಚ್ಚಾಗಿ ಬೆಂಗಳೂರಿನಲ್ಲೇ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಹೆಚ್ಚಿನ ಸಂದರ್ಭಗಳಲ್ಲಿ ಬೆಂಗಳೂರಿನಿಂದಲೇ ಕಾರ್ಯನಿರ್ವಹಿಸುತ್ತಿದ್ದರು. ಮಾತ್ರವಲ್ಲ ಮಂಗಳೂರಿನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಭಾರಿ ಪ್ರಯತ್ನ ನಡೆಸಿದ್ದರು. ಇದರ ವಿರುದ್ಧ ಬ್ಯಾಂಕಿನ ಗ್ರಾಹಕರಿಂದಲೇ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ನಿರ್ದೇಶಕ ಮಂಡಳಿ ಎಚ್ಚೆತ್ತು ಈ ಪ್ರಯತ್ನಕ್ಕೆ ಕಡಿವಾಣ ಹಾಕಿತ್ತು.

ಕಳೆದ ವರ್ಷ ಈ ಬ್ಯಾಂಕಿನ ಮಂಗಳೂರಿನ ಪ್ರಧಾನ ಕಚೇರಿಯ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದರ ಹಿಂದೆ ಬ್ಯಾಂಕಿನಲ್ಲಿನ ತೀವ್ರ ಒತ್ತಡ, ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿತ್ತು.

ಎಲ್ಲರಿಗಿಂತ ಮೊದಲು ತಿಳಿಯುವುದು ಇಲ್ಲೇ!

ಕರ್ಣಾಟಕ ಬ್ಯಾಂಕ್‌ ಸಿಇಒ, ಎಂಡಿ ಶ್ರೀಕೃಷ್ಣನ್‌ ರಾಜಿನಾಮೆ ನೀಡಿದ ಬಗ್ಗೆ ಭಾನುವಾರವೇ ‘ಕನ್ನಡಪ್ರಭ’ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

Read more Articles on