ವನ್ಯಜೀವಿ ದಾಳಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ : ಕಳೆದ ವರ್ಷ 50,237, ಈ ಬಾರಿ 35,580 ಕೇಸ್‌

| N/A | Published : Apr 19 2025, 10:25 AM IST

tiger

ಸಾರಾಂಶ

ರಾಜ್ಯದಲ್ಲಿ ವನ್ಯಜೀವಿಗಳು ಕಾಡಂಚಿನ ಗ್ರಾಮಗಳಿಗೆ ದಾಳಿ ಮಾಡುವ ಪ್ರಕರಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 2023-24ಕ್ಕೆ ಹೋಲಿಸಿದರೆ 2024-25ರಲ್ಲಿ 15 ಸಾವಿರ ಪ್ರಕರಣಗಳು ಕಡಿಮೆಯಾಗಿವೆ.

 ಬೆಂಗಳೂರು : ರಾಜ್ಯದಲ್ಲಿ ವನ್ಯಜೀವಿಗಳು ಕಾಡಂಚಿನ ಗ್ರಾಮಗಳಿಗೆ ದಾಳಿ ಮಾಡುವ ಪ್ರಕರಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 2023-24ಕ್ಕೆ ಹೋಲಿಸಿದರೆ 2024-25ರಲ್ಲಿ 15 ಸಾವಿರ ಪ್ರಕರಣಗಳು ಕಡಿಮೆಯಾಗಿವೆ.

ಆಹಾರ ಅರಸಿ ನಾಡಿಗೆ ಬರುವ ವನ್ಯಜೀವಿಗಳು ಬೆಳೆಗಳನ್ನು ಹಾಳು ಮಾಡುವ ಜತೆಗೆ, ಕೆಲವೊಮ್ಮೆ ಜೀವ ಹಾನಿಗೂ ಕಾರಣವಾಗುತ್ತವೆ. 2023-24ರವರೆಗೆ ವರ್ಷದಿಂದ ವರ್ಷಕ್ಕೆ ವನ್ಯಜೀವಿ ದಾಳಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲಿತ್ತು. ಅದೇ 2024-25ನೇ ಸಾಲಿನಲ್ಲಿ ವನ್ಯಜೀವಿ ದಾಳಿ ಪ್ರಕರಣ ಗಣನೀಯವಾಗಿ ಇಳಿಕೆಯಾಗಿದೆ. ಅದರಂತೆ 2022-23ರಲ್ಲಿ 47,287 ವನ್ಯಜೀವಿ ದಾಳಿ ಪ್ರಕರಣ ದಾಖಲಾಗಿದ್ದರೆ, 2023-24ರಲ್ಲಿ 50,237 ಪ್ರಕರಣ ಪತ್ತೆಯಾಗಿದೆ.

ಅದೇ 2024-25ರಲ್ಲಿ 35,580ಕ್ಕಿಳಿದಿದೆ. ಈ ಪ್ರಕರಣಗಳ ಪೈಕಿ ಕಾಡಾನೆ ದಾಳಿಯಿಂದ ಬೆಳೆ ನಾಶವಾದ ಪ್ರಕರಣಗಳೇ ಹೆಚ್ಚಿವೆ. ಹೀಗೆ 2024-25ರಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ 20,417 ಪ್ರಕರಣಗಳಿಗೆ ಪರಿಹಾರ ನೀಡಲು ಅನುಮೋದಿಸಿ, ಪರಿಹಾರವನ್ನೂ ನೀಡಲಾಗಿದೆ. ಉಳಿದಂತೆ 14,245 ಪ್ರಕರಣಗಳು ಪರಿಶೀಲನಾ ಹಂತದಲ್ಲಿದ್ದು, 918 ಪ್ರಕರಣಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಲಾಗಿದೆ.

3 ವರ್ಷದಲ್ಲಿ ₹107 ಕೋಟಿ:

ವನ್ಯಜೀವಿಗಳ ದಾಳಿಯಿಂದ ಉಂಟಾಗುವ ಹಾನಿಗೆ ಬದಲಾಗಿ ಅರಣ್ಯ ಇಲಾಖೆ ಸಹಾಯಧನ ರೂಪದಲ್ಲಿ ಹಣ ನೀಡಲಿದೆ. ಅರಣ್ಯ ಇಲಾಖೆ ಮಾಹಿತಿಯಂತೆ 2022-23ರಿಂದ 2024-25ರವರೆಗೆ ಸುಮಾರು ₹107 ಕೋಟಿ ಪರಿಹಾರ ನೀಡಲಾಗಿದೆ. 2022-23ರಲ್ಲಿ ₹35.55 ಕೋಟಿ, 2023-24ರಲ್ಲಿ ₹50.14 ಕೋಟಿ ಹಾಗೂ 2024-25ರಲ್ಲಿ ₹21.61 ಕೋಟಿ ಪರಿಹಾರ ನೀಡಲಾಗಿದೆ.