ಯಶವಂತಪುರ ವ್ಯಾಪಾರಸ್ಥರ ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರಕ್ಕೆ ವರ್ತಕರ ವಲಯ ವಿರೋಧ

| N/A | Published : Mar 21 2025, 09:29 AM IST

vegetable market

ಸಾರಾಂಶ

ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಗೂ ಆಲುಗಡ್ಡೆ ಮಾರಾಟವನ್ನು ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರ ಮಾಡುತ್ತಿರುವುದಕ್ಕೆ ವರ್ತಕರ ವಲಯ ತೀವ್ರ ವಿರೋಧಿಸಿದ್ದು, ಸ್ಥಳಾಂತರ ಪ್ರಕ್ರಿಯೆ ಸರಳವಾಗಿ ಸಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.

 ಮಯೂರ್ ಹೆಗಡೆ

 ಬೆಂಗಳೂರು : ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಗೂ ಆಲುಗಡ್ಡೆ ಮಾರಾಟವನ್ನು ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರ ಮಾಡುತ್ತಿರುವುದಕ್ಕೆ ವರ್ತಕರ ವಲಯ ತೀವ್ರ ವಿರೋಧಿಸಿದ್ದು, ಸ್ಥಳಾಂತರ ಪ್ರಕ್ರಿಯೆ ಸರಳವಾಗಿ ಸಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.

ಮೊನ್ನೆ ಸಚಿವ ಶಿವಾನಂದ ಪಾಟೀಲ್ ಅವರು ಸದನದಲ್ಲಿ ಮಾರುಕಟ್ಟೆ ಸ್ಥಳಾಂತರ ಕುರಿತ ಪ್ರಶ್ನೆಗೆ ಉತ್ತರಿಸುವ ಮೂಲಕ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ 6 ವರ್ಷದಿಂದ ಸ್ಥಳಾಂತರಕ್ಕೆ ಪ್ರಯತ್ನ ನಡೆದಿದ್ದರೂ ಸಾಧ್ಯವಾಗಿಲ್ಲ.

ಸಂಚಾರ ದಟ್ಟಣೆ, ನಿರ್ವಹಣೆ ಸವಾಲು ಸೇರಿ ಇತರೆ ಕಾರಣಕ್ಕಾಗಿ ಯಶವಂತಪುರದಿಂದ ಮಾರುಕಟ್ಟೆಯ ಈ ಉತ್ಪನ್ನಗಳ ವಹಿವಾಟನ್ನು ನೆಲಮಂಗಲ ಬಳಿಯ ದಾಸನಪುರದಲ್ಲಿನ 67 ಎಕರೆಯಲ್ಲಿರುವ ಉಪ ಮಾರುಕಟ್ಟೆಗೆ ಸ್ಥಳಾಂತರಿಸಲು ಎಪಿಎಂಸಿ ಮುಂದಾಗಿದೆ. ಕೋವಿಡ್‌ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಮಾರಾಟಗಾರರು ದಾಸನಪುರಕ್ಕೆ ಸ್ಥಳಾಂತರಗೊಂಡಿದ್ದಾರೆ. ಇನ್ನುಳಿದ 300-350 ವ್ಯಾಪಾರಸ್ಥರು ಯಶವಂತಪುರ ಎಪಿಎಂಸಿಯಲ್ಲೇ ಇದ್ದಾರೆ. ಇವರು ದಾಸನಪುರಕ್ಕೆ ಸ್ಥಳಾಂತರಗೊಳ್ಳಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇದೀಗ ಯಶವಂತಪುರದಿಂದ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸಿ ಕೋವಿಡ್‌ ಸಂದರ್ಭದಲ್ಲಿ ದಾಸನಪುರ ಮಾರುಕಟ್ಟೆಗೆ ತೆರಳಿದ್ದ ವ್ಯಾಪಾರಿಗಳಿಂದ ಮಳಿಗೆಗಳನ್ನು ವಾಪಸ್‌ ಪಡೆದು ಮರುಹಂಚಿಕೆ ಮಾಡಲು ಎಪಿಎಂಸಿ ಆಡಳಿತ ಮುಂದಾಗಿದೆ. ಆದರೆ, ಸ್ಥಳಾಂತರ ಹಾಗೂ ಮರುಹಂಚಿಕೆ ಜತೆಗೆ ಯಶವಂತಪುರದಲ್ಲಿ ಈ 4 ಪದಾರ್ಥಗಳನ್ನು ಮಾರಬಹುದಾದ ಉತ್ಪನ್ನಗಳ ಅಧಿಸೂಚಿತ ಪಟ್ಟಿಯಿಂದ ಹೊರಗಿಟ್ಟು ಅಧಿಸೂಚನೆ ಹೊರಡಿಸಿರುವ ವಿಚಾರಗಳೆಲ್ಲವೂ ಕೋರ್ಟ್‌ನಲ್ಲಿದ್ದು, ಇತ್ಯರ್ಥವಾಗಬೇಕಿದೆ. ಈ ನಡುವೆ ಸರ್ಕಾರ ಬಲವಂತದ ಕ್ರಮಕ್ಕೆ ಮುಂದಾಗುವುದು ಸರಿಯಲ್ಲ ಎಂದು ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಾಸನಪುರದಲ್ಲಿ ಸೌಲಭ್ಯವಿಲ್ಲ:

ಈರುಳ್ಳಿ, ಆಲುಗಡ್ಡೆ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಬಿ. ರವಿಶಂಕರ್‌ ಮಾತನಾಡಿ, ದಾಸನಪುರ ಮಾರುಕಟ್ಟೆಯಲ್ಲಿ ಮೂಲಸೌಲಭ್ಯವಿಲ್ಲ. ಅಲ್ಲಿನ ಮಳಿಗೆಗಳು ತೀರಾ ಚಿಕ್ಕದಾಗಿವೆ. ಸ್ಥಳಾಂತರಗೊಂಡ ವರ್ತಕರಿಗೆ ಯಶವಂತಪುರದಲ್ಲಿ ಇರುವಷ್ಟೇ ಅಳತೆಯ ಮಳಿಗೆಯನ್ನು ಕೊಡಬೇಕು ಎಂಬುದು ನಮ್ಮ ಒತ್ತಾಯ. ಕೋರ್ಟ್‌ ಕೂಡ ಅದನ್ನೇ ಹೇಳಿದೆ ಎಂದು ತಿಳಿಸಿದರು.

ಈ ಸಂಬಂಧ ಎಪಿಎಂಸಿ ಅಧಿಕಾರಿಗಳು ಕೋವಿಡ್‌ ವೇಳೆ ಸ್ಥಳಾಂತರಗೊಂಡ ವರ್ತಕರ 55 ತಿಂಗಳ ಬಾಡಿಗೆ ಒಪ್ಪಂದ ಮುಗಿದಿದ್ದು, ಅದನ್ನು ನವೀಕರಣ ಮಾಡುವ ಬದಲು ವಾಪಸ್‌ ಕಿತ್ತುಕೊಂಡು ನಮಗೆ ಮರು ಹಂಚಿಕೆ ಮಾಡಲು ಎಪಿಎಂಸಿ ಮುಂದಾಗಿದೆ. ಇದು ಸಾಧುವಲ್ಲ. ಈವರೆಗೆ ರಾಜ್ಯದ ಯಾವ ಮಾರುಕಟ್ಟೆಯಲ್ಲೂ ಎಲ್ಲಾ ವರ್ತಕರಿಂದ ಮಳಿಗೆಗಳನ್ನು ವಾಪಸ್‌ ಪಡೆದು ಮರು ಹಂಚಿಕೆ ಮಾಡಿದ ಉದಾಹರಣೆ ಇಲ್ಲ. ಅಲ್ಲದೆ, ಅಲ್ಲಿನ ವರ್ತಕರು ಕೂಡ ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದು, ಶೀಘ್ರವೇ ತೀರ್ಪು ಕೂಡ ಬರುವ ವಿಶ್ವಾಸವಿದೆ. ಹೀಗಿರುವಾಗ ಎಪಿಎಂಪಿ ವರ್ತಕರ ಸ್ಥಳಾಂತರ ಸುಲಭವಲ್ಲ’ ಎಂದರು.

ಯಶವಂತಪುರದಲ್ಲಿ ಈರುಳ್ಳಿ ಬೆಳ್ಳುಳ್ಳಿಯನ್ನು ಮಾರಬಹುದಾದ ಉತ್ಪನ್ನಗಳ ಅಧಿಸೂಚಿತ ಪಟ್ಟಿಯಿಂದ ಹೊರಗಿಡುವ ಮೊದಲು ಆಡಳಿತ ಮಂಡಳಿ ಇಲ್ಲಿನ ವರ್ತಕರಿಗೆ ದಾಸನಪುರದಲ್ಲಿ ಮಳಿಗೆಗಳ ಹಂಚಿಕೆ ಪ್ರಕ್ರಿಯೆ ನಡೆಸಬೇಕು. ಆದರೆ, ಅಲ್ಲಿ ಕಾನೂನಿನ ತೊಡಕಿದೆ. ಮಳಿಗೆ ಪಡೆದ ವರ್ತಕರು 55 ತಿಂಗಳ ಬಳಿಕ ಬಾಡಿಗೆ ಬದಲು ಸ್ವಂತ ಖರೀದಿಗೆ ಅರ್ಜಿ ಹಾಕಲು ಅವಕಾಶವಿದೆ. ಇದನ್ನು ಎಪಿಎಂಸಿ ಪರಿಗಣಿಸುತ್ತಿಲ್ಲ ಎಂದು ದಾಸನಪುರ ವರ್ತಕರು ಹೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಯಶವಂತಪುರ ಎಪಿಎಂಸಿ ಕಾರ್ಯದರ್ಶಿಯವರನ್ನು ಸಂಪರ್ಕಿಸಿದರೂ ಅವರು ಉತ್ತರಿಸಲಿಲ್ಲ.

ದಾಸನಪುರಕ್ಕೆ ವರ್ತಕರ ಸ್ಥಳಾಂತರ ಪ್ರಕರಣ ವಿಚಾರಣೆ ಇನ್ನೂ ಹೈಕೋರ್ಟ್‌ನಲ್ಲಿದೆ. ಏಕಾಏಕಿ ವ್ಯಾಪಾರಿಗಳ ಸ್ಥಳಾಂತರ ಮಾಡಲು ಬರಲ್ಲ. ದಾಸನಪುರ ಮಾರುಕಟ್ಟೆಗೆ ಸ್ಥಳಾಂತರವಾಗಲು ವರ್ತಕರು ಒಪ್ಪುತ್ತಿಲ್ಲ.

- ಬಿ. ರವಿಶಂಕರ್‌, ಕಾರ್ಯದರ್ಶಿ ಈರುಳ್ಳಿ, ಆಲುಗಡ್ಡೆ ವ್ಯಾಪಾರಸ್ಥರ ಸಂಘ

ಯಶವಂತಪುರ ಎಪಿಎಂಸಿ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ವ್ಯಾಪಾರಸ್ಥರನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂಬ ಶಂಕೆಯಿದೆ. ಸ್ಥಳಾಂತರಕ್ಕೆ ನಮ್ಮ ಸಹಮತಿ ಇಲ್ಲ.

- ದೀಪಕ್‌ ಶಾ, ಬೆಳ್ಳುಳ್ಳಿ ವ್ಯಾಪಾರಸ್ಥರ ಸಂಘ, ಕಾರ್ಯದರ್ಶಿ