ಸಾರಾಂಶ
ಹನಿಟ್ರ್ಯಾಪ್ ವಿಚಾರ ಈಗಾಗಲೇ ಸದನದಲ್ಲಿ ಚರ್ಚೆ ಆಗಿದೆ. ಸಿಎಂ, ಗೃಹ ಸಚಿವರು ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ದೂರು ಕೊಟ್ಟ ನಂತರ ತನಿಖೆ ನಡೆಸಲಾಗುತ್ತದೆ.
ಮಂಡ್ಯ : ಬಜೆಟ್ ಅಧಿವೇಶನ ನಡೆಯುವ ವೇಳೆ ಬಿಜೆಪಿಯವರು ಜನಪರವಾದ ವಿಚಾರವನ್ನು ಚರ್ಚೆ ಮಾಡಲಿಲ್ಲ. ಸರ್ಕಾರವನ್ನು ಟೀಕೆ ಮಾಡುವುದಕ್ಕೆ ಯಾವ ವಿಚಾರವೂ ಸಿಗಲಿಲ್ಲ. ತಪ್ಪುಗಳನ್ನು ಹುಡುಕಲು ಆಗಲಿಲ್ಲ. ಹದಿನೈದು ದಿನದ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹನಿಟ್ರ್ಯಾಪ್ ವಿಚಾರ ಎತ್ತುಕೊಂಡಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಬಹಳ ಪ್ರೀಪ್ಲ್ಯಾನ್ ಮಾಡಿ ಅವರ ವೈಫಲ್ಯವನ್ನು ಡೈವರ್ಟ್ ಮಾಡುತ್ತಿದ್ದಾರೆ. ಇತಿಹಾಸ ನೋಡಿದರೆ ಬಿಜೆಪಿ ಅವರ ಬಳಿಯೇ ಇಂತಹ ಸಂಗತಿಗಳು ಹೆಚ್ಚಾಗಿವೆ ಎಂದು ಜರಿದರು.
ಹನಿಟ್ರ್ಯಾಪ್ ವಿಚಾರ ಈಗಾಗಲೇ ಸದನದಲ್ಲಿ ಚರ್ಚೆ ಆಗಿದೆ. ಸಿಎಂ, ಗೃಹ ಸಚಿವರು ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ದೂರು ಕೊಟ್ಟ ನಂತರ ತನಿಖೆ ನಡೆಸಲಾಗುತ್ತದೆ. ತನಿಖೆ ನಂತರ ಸತ್ಯ ಬಹಿರಂಗವಾಗಲಿದೆ. ಅಲ್ಲಿಯವರೆಗೆ ಕಾಯುವ ತಾಳ್ಮೆ ಬಿಜೆಪಿ-ಜೆಡಿಎಸ್‌ನವರಿಗಿಲ್ಲ. ಹನಿಟ್ರ್ಯಾಪ್ ಹಿಂದೆ ಡಿಕೆಶಿ, ಅವರ ತಮ್ಮ ಇದ್ದಾರೆಂದು ಹೇಳುವುದು ಮಹಾನ್ ಅಪರಾಧ. ತನಿಖೆ ಆಗುವವರೆಗೂ ಸುಮ್ಮನೆ ಪ್ರಸ್ತಾಪ ಮಾಡಲು ಆಗುವುದಿಲ್ಲ. ರಾಜಣ್ಣ ಆಗಲಿ, ಅವರ ಪುತ್ರ ರಾಜೇಂದ್ರರ ಆಗಲಿ ಪ್ರಕರಣದಲ್ಲಿ ನಿರ್ದಿಷ್ಟವಾಗಿ ಯಾರ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ. ಇದು ಅನಾವಶ್ಯಕ ಚರ್ಚೆ. ಈ ವಿಚಾರಕ್ಕೆ ಬೇರೆ ಬೇರೆ ಅಯಾಮಕೊಡುವ ಅವಶ್ಯಕತೆ ಇಲ್ಲ ಎಂದರು.
ಹನಿಟ್ರ್ಯಾಪ್ ಆಗಲಿ, ಸಿಡಿ ಆಗಲಿ ಇದನ್ನು ಸರಿ ಎಂದು ಹೇಳುವುದಿಲ್ಲ. ಬೇರೆಯವರ ವೈಯಕ್ತಿಕ ಜೀವನದಲ್ಲಿ ನಾವು ಪ್ರವೇಶ ಮಾಡಬಾರದು. ಅದೇ ರೀತಿ ಸತ್ಯಾಂಶ ಹೊರಬರುವವರೆಗೂ ಮಾತನಾಡುವುದೂ ಸೂಕ್ತವಲ್ಲ. ಬಿಜೆಪಿಯವರೇ ಇದನ್ನು ಕ್ರಿಯೇಟ್ ಮಾಡಿದ್ದಾರೆ ಎಂದು ದೂರಿದರು.
ಡಿ.ಕೆ.ಶಿವಕುಮಾರ್ ಸ್ಪೀಡ್ ಜಾಸ್ತಿ. ಅದಕ್ಕಾಗಿಯೇ ಎಲ್ಲರೂ ಅವರನ್ನು ಟಾರ್ಗೇಟ್ ಮಾಡುತ್ತಾರೆ. ಅವರನ್ನು ಕೆಲವರು ಸಹಿಸುವುದಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರನ್ನೇ ಸಹಿಸದೆ ಮುಡಾ ವಿಚಾರವನ್ನು ಎಳೆದುತಂದಿದ್ದಾಗಿ ಹೇಳಿದರು.
ಕೇತಗಾನಹಳ್ಳಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಜಮೀನು ಒತ್ತುವರಿ ಬಗ್ಗೆ ಕೇಳಿದಾಗ, ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಅವರ ಜಮೀನಿನ ತೆರವು ಕಾರ್ಯ ನಡೆದಿದೆ. ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿದ್ದರೆ ಇಷ್ಟು ದಿನ ಏಕೆ ಕಾಯುತ್ತಿದ್ದೆವು. ಸಿದ್ದರಾಮಯ್ಯ ಅವರು ಏನೂ ಮಾಡದೇ ಇದ್ದರೂ ಮುಡಾ ವಿಚಾರದಲ್ಲಿ ಪಾದಯಾತ್ರೆ ನಡೆಸಿ ರಾಜೀನಾಮೆ ಕೇಳಿದರು. ನಾವು ಎಂದೂ ಕುಮಾರಸ್ವಾಮಿ ಅವರಿಂದ ರಾಜೀನಾಮೆ ಕೇಳಿಲ್ಲ. ಅವರ ವಿರುದ್ಧ ಲಘುವಾಗಿಯೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.