ಸಾರಾಂಶ
ಹಾವೇರಿ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಾರಂಭಿಸಲಾದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ಹಾವೇರಿ ಜಿಲ್ಲಾ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಮಾಲೀಕರ ಸಂಘದವರು, ಹಾವೇರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲಿ ಸ್ಥಗಿತಗೊಳಿಸುವುದರಿಂದ ಸಾಮಾನ್ಯ ಬಡ ಜನರಿಗೆ ಉತ್ತಮ ಗುಣಮಟ್ಟದ ಜನರಿಕ್ ಔಷಧಿಗಳನ್ನು ಕಡಿಮೆ ಹಾಗೂ ಕೈಗೆಟುಕುವ ದರಗಳಲ್ಲಿ ದೊರಕಿಸುವ ಕೇಂದ್ರ ಸರ್ಕಾರದ ಉದ್ದೇಶಕ್ಕೆ ಅಡ್ಡಿಪಡಿಸಿದಂತಾಗುತ್ತದೆ. ಆದ್ದರಿಂದ ಈ ವಿಷಯದ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಬೇಕೆಂದು ಕೋರಿದ್ದಾರೆ.
ವೃತ್ತಿ ನೈಪುಣ್ಯತೆಗೆ ಪೂರಕ ಕೌಶಲ್ಯ ಬೆಳೆಸಿಕೊಳ್ಳಿ
ರಾಣಿಬೆನ್ನೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅಂಕ ಗಳಿಕೆಯ ಜತೆ ವೃತ್ತಿ ನೈಪುಣ್ಯತೆಗೆ ಪೂರಕವಾಗುವಂತಹ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಣತಜ್ಞ ಚಂದ್ರಶೇಖರ ತಿಳಿಸಿದರು.ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಐದು ದಿನಗಳ ಕಾಲ ಆಯೋಜಿಸಿದ್ದ ವೃತ್ತಿ ನೈಪುಣ್ಯತೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ವಜ್ರೇಶ್ವರಿ ಲದ್ವಾ ಮಾತನಾಡಿ, ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಶಿಕ್ಷಕರು ಹೊಸ ಹೊಸ ವಿಷಯಗಳನ್ನು ಅರಿತು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ತುಳಜಪ್ಪ ಲದ್ವಾ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಡಾ. ಎಂ.ಎಂ. ಅನಂತರೆಡ್ಡ, ಡಾ. ಬಿ.ಆರ್. ಸಾವಕಾರ, ಮಲ್ಲಿಕಾರ್ಜುನ ಅಂಗಡಿ, ಅರುಣಾ ಕಬಾಡಿ, ಪರಶುರಾಮ ಕಬಾಡಿ, ಮುರುಗೇಶ ಮಹಾಂತಶೆಟ್ಟರ, ವಿಜಯಾನಂದ ಬೆಲ್ಲದ, ಸುಷ್ಮಾ ಲದ್ವಾ, ಪ್ರಾಚಾರ್ಯೆ ಶಿವಲೀಲಾ ಕುರುವತ್ತಿ, ಹಂಸಭಾವಿ ವಾಸುದೇವ ವಿದ್ಯಾಲಯದ ಪ್ರಾಚಾರ್ಯ ಚೇತನಕುಮಾರ ಬಿ., ಇಸ್ಮಾಯಿಲ್ ಜಬಿವುಲ್ಲಾ, ಮಾರ್ಷಲ್ ಗುಡಗೂರ, ವಿಮೋಚನಾ ಹಿರೇಮಠ, ರಜನಿ ಸಾಲಿ ಹಾಗೂ ಶಾಲೆಯ ಶಿಕ್ಷಕ ವೃಂದ ಇದ್ದರು.