ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ನಮ್ಮ ದೇಶದ ಸೇನೆ ಪಹಲ್ಗಾಂನಲ್ಲಿ ಭಾರತೀಯರ ಮೇಲೆ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ನಮ್ಮ ಸೇನೆ ನಡೆಸಿದ ಆಪರೇಷನ್ ಸಿಂದೂರನಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲು ದೇಶಾದ್ಯಂತ ರಾಷ್ಟ್ರ ಸುರಕ್ಷಾ ಸಮಿತಿ ವತಿಯಿಂದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ತಿಳಿಸಿದರು.ಪಟ್ಟಣದಲ್ಲಿ ಗುರುವಾರ ರಾಷ್ಟ್ರ ಸುರಕ್ಷಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಯಲ್ಲಿ ೨೬ ಮಂದಿ ಅಮಾಯಕ ಭಾರತೀಯರು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ೯ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ್ದು ಇದರಲ್ಲಿ ೧೦೦ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿದೆ. ಈ ಪ್ರತಿಕ್ರಿಯಾತ್ಮಕ ದಾಳಿಯಿಂದ ಇಡೀ ವಿಶ್ವಕ್ಕೆ ಉಗ್ರರರಿಗೆ ನೆಲೆ ನೀಡಿದರೆ ಯಾವ ಸ್ಥಿತಿಯಾಗುತ್ತದೆ ಎಂಬ ಉತ್ತರವನ್ನು ನಮ್ಮ ಸೈನಿಕರು ನೀಡಿದ್ದಾರೆ.
ಅಲ್ಲದೆ ಪಾಕಿಸ್ತಾನದಲ್ಲಿ ಉಗ್ರರು ಹತರಾದಾಗ ಅಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅವರ ಶವಸಂಸ್ಕಾರದಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ ಉಗ್ರ ಪೋಷಕ ರಾಷ್ಟ್ರ ಪಾಕಿಸ್ತಾನ ಎಂಬುದನ್ನು ಇಡೀ ಜಗತ್ತಿಗೆ ಭಾರತ ತೋರಿಸಿಕೊಟ್ಟಿದೆ. ಈಗ ನಡೆದಿರುವುದು ಯುದ್ಧವಲ್ಲಿ ಉಗ್ರಸಂಹಾರ ಇದನ್ನು ಸಮರೋಪದಿಯಲ್ಲಿ ಮಾಡಿರುವ ನಮ್ಮ ಹೆಮ್ಮೆಯ ಸೈನಿಕರು ಉಗ್ರ ಪೋಷಕರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ. ಭಯೋತ್ಪಾದನೆ ಮಾಡಿದರೆ ಯಾವ ಸ್ಥಿತಿಯಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರದಲ್ಲಿ ಪಕ್ಷಾತೀತವಾಗಿ, ಜಾತ್ಯತೀತ, ಧರ್ಮಾತೀತವಾಗಿ ರಾಷ್ಟ್ರ ಸುರಕ್ಷಾ ಸಮಿತಿಯ ವತಿಯಿಂದ ವೀರ ಸೈನಿಕರನ್ನು ಅಭಿನಂದಿಸಲು ತಿರಂಗಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.ಪಟ್ಟಣದ ಷಡಕ್ಷರಿ ಗದ್ದುಗೆಯಿಂದ ಪ್ರಮುಖ ಬೀದಿಗಳಲ್ಲಿ ಭಾರತೀಯ ಧ್ವಜಗಳನ್ನು ಹಿಡಿದು, ಭಾರತೀಯ ಸೇನೆಗೆ ಜೈಕಾರಗಳನ್ನು ಹಾಕಿ ಮೆರವಣಿಗೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಅನಿಲ್, ಅರುಣ್, ಕೆಂಪರಾಜು, ಮಾಂಬಳ್ಳಿ ರಾಮು, ಗೋಪಿ, ವೈ.ಕೆ.ಮೋಳೆ ಎಂ. ನಾಗರಾಜು, ಸ್ವಾಮಿ, ಗುರುಪ್ರಸಾದ್, ಮಹೇಶ್, ಕಾಳಿಪ್ರಸಾದ್ ಸೇರಿದಂತೆ ಅನೇಕರು ಇದ್ದರು.