ಬ್ರಹ್ಮಾವರ: ಹನೆಹಳ್ಳಿಯಲ್ಲಿ ಗುಂಡಿಕ್ಕಿ ಯುವಕನ ಕೊಲೆ

| Published : Mar 04 2024, 01:16 AM IST

ಸಾರಾಂಶ

ಮಣಿಪಾಲದಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ, ಶನಿವಾರ ರಾತ್ರಿ ಮನೆಗೆ ಬಂದಿದ್ದರು. ಸುಮಾರು 9.30ರ ಸುಮಾರಿಗೆ ಊಟ ಮಾಡುತ್ತಿರುವಾಗ ದುಷ್ಕರ್ಮಿಗಳು ಆಗಮಿಸಿ ಪಿಸ್ತೂಲಿನಿಂದ ಗುಂಡು ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬ್ರಹ್ಮಾವರಯುವಕನೊಬ್ಬನನ್ನು ಗುಂಡು ಹಾರಿಸಿ ಕೊಲೆ ಮಾಡಿದ ಕೃತ್ಯ ಇಲ್ಲಿನ ಬಾರ್ಕೂರು ಸಮೀಪದ ಹನೆಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಕೊಲೆಯಾದ ಯುವಕನ್ನು ಕೃಷ್ಣ (36) ಎಂದು ಗುರುತಿಸಲಾಗಿದೆ.ಮಣಿಪಾಲದಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ, ಶನಿವಾರ ರಾತ್ರಿ ಮನೆಗೆ ಬಂದಿದ್ದರು. ಸುಮಾರು 9.30ರ ಸುಮಾರಿಗೆ ಊಟ ಮಾಡುತ್ತಿರುವಾಗ ದುಷ್ಕರ್ಮಿಗಳು ಆಗಮಿಸಿ ಪಿಸ್ತೂಲಿನಿಂದ ಗುಂಡು ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.ನೆರೆಮನೆಯವರಿಗೆ ಶಬ್ದ ಕೇಳಿದ್ದು, ಅವರು ತೆಂಗಿನ ಕಾಯಿ ಬಿದ್ದ ಶಬ್ದ ಇದ್ದಿರಬಹುದು ಎಂದು ತಿಳಿದು ಸುಮ್ಮನಿದ್ದರು. ಮರುದಿನ ನೋಡಿದಾಗಲೇ ಕೃಷ್ಣನನ್ನು ಗುಂಡು ಹಾರಿಸಿ ಕೊಲೆ ಮಾಡಿರುವುದು ಗೊತ್ತಾಗಿದೆ.

ಒಟ್ಟು ನಾಲ್ಕು ಸುತ್ತು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ.

ಮಂಗಳೂರಿನ ವಿಧಿವಿಜ್ಞಾನ ತಜ್ಞರು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಶ್ವಾನದಳವನ್ನು ಕರೆಸಲಾಗಿದ್ದರೂ ಕೊಲೆಗಾರರ ಬಗ್ಗೆ ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ. ಸಾಮಾನ್ಯ ಕಟ್ಟಡ ಕಾರ್ಮಿಕನಾಗಿರುವ ಕೃಷ್ಣನ ಪತ್ನಿ ದೂರದ ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದು, ಇಲ್ಲಿ ಈತ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ. ತಾನಾಯಿತು ತನ್ನ ಕೆಲಸ ಆಯಿತು ಎಂಬಂತೆ ಯಾವುದೇ ವಿವಾದಕ್ಕೆ ಸಿಲುಕಿಲ್ಲದ ಕೃಷ್ಣನ ಕೊಲೆ ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.