ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ವ್ಯಸನಮುಕ್ತ ಸಮಾಜ ನಿರ್ಮಾಣ ಅನಿವಾರ್ಯ

| Published : Aug 02 2024, 12:50 AM IST

ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ವ್ಯಸನಮುಕ್ತ ಸಮಾಜ ನಿರ್ಮಾಣ ಅನಿವಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದುಶ್ಚಟ, ದುರಾಚಾರಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ

ಗದಗ: ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದು ಅನಿವಾರ್ಯ, ಯುವ ಸಮುದಾಯವೇ ದೇಶದ ಆಸ್ತಿಯಾಗಿದ್ದು, ಅವರನ್ನು ವ್ಯಸನಗಳಿಂದ ದೂರವಿಡುವ ವಾತಾವರಣ ನಿರ್ಮಿಸಬೇಕು ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಅವರು ಗುರುವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಜರುಗಿದ ಡಾ. ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.

ಡಾ. ಮಹಾಂತ ಶಿವಯೋಗಿಗಳ ಜನ್ಮದಿನವನ್ನು ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸುತ್ತೇವೆ, ವಿಶಿಷ್ಟ ಮತ್ತು ಶ್ರೇಷ್ಠ ವ್ಯಕ್ತಿಯಾದ ಶ್ರೀಗಳು ಸಮಾಜ ಹಾಗೂ ದೇಶ ಹಾಳು ಮಾಡುವ ದುರ್ವ್ಯಸನಗಳು, ದುಶ್ಚಟಗಳು ಹಾಗೂ ದುರಾಚಾರಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿದ್ದರು.

ಸಮಾಜ ನಿರ್ಮಾಣದಲ್ಲಿಯೂ ತಮ್ಮನ್ನು ಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದ ಮಹಾಂತ ಸ್ವಾಮಿಗಳು ಸಮಾಜ ಸುಧಾರಣೆಯ ಮೊದಲ ಹಾಗೂ ಅತಿಮುಖ್ಯ ಹೆಜ್ಜೆ ಮನಃಪರಿವರ್ತನೆ ಎಂಬುದನ್ನು ಅರಿತಿದ್ದರು. ಅಜ್ಞಾನ, ಅನಾರೋಗ್ಯ, ಅಪರಾಧ, ಅಸಮಾನತೆಯಂತಹ ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗಲು ಮೊದಲು ಮನಸ್ಸನ್ನು ಈ ಪಿಡುಗುಗಳಿಂದ ಮುಕ್ತಗೊಳಿಸಬೇಕು ಎಂದು ಶ್ರೀಗಳು ಹೇಳಿದ್ದರು ಎಂದರು.

ನಿರಂತರ ಅನ್ನ ದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್ ಸ್ಥಾಪನೆ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ, ನಿಸರ್ಗ ಚಿಕಿತ್ಸೆ-ಯೋಗ ಕೇಂದ್ರ ಸ್ಥಾಪಿಸಿದ ಜತೆಗೆ ಶಾಖಾ ಮಠಗಳಿಗೆ ಪ.ಜಾತಿ ಮತ್ತು ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ ಮಾಡಿದ್ದು, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು, ಮಠದ ನೂರಾರು ಎಕರೆ ಭೂಮಿಯನ್ನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿ ಬದುಕಲು ನೀಡಿದ್ದು ಮುಂತಾದ ಹಲವು ಸಮಾಜಮುಖಿ ಕಾರ್ಯ ಮಾಡಿದರು.

ಜಗತ್ತಿನಲ್ಲಿ ವಿಶೇಷವಾಗಿ ಯುವಜನಾಂಗ ಹಲವಾರು ಮಾದಕ ವಸ್ತುಗಳಿಗೆ ಬಲಿಯಾಗಿದ್ದು, ಭಾರತದಲ್ಲಿ ಸುಮಾರು 10 ಕೋಟಿ ಜನರು ಮಾದಕ ವ್ಯಸನಕ್ಕೆ ದಾಸರಾಗಿದ್ದು, ಅದರಲ್ಲಿ ಕಾಲೇಜು ವಿದ್ಯಾರ್ಥಿಗಳ ಸೇರಿದಂತೆ ಯುವಜನರ ಸಂಖ್ಯೆ ಹಚ್ಚಾಗಿರುವುದು ಆಂತಕಕಾರಿ ಮಾದಕ ವಸ್ತುಗಳ ಸೇವನೆಯಿಂದ ಮಾರಣಾಂತಿಕ ರೋಗಗಳಾದ ಕ್ಯಾನ್ಸರ್, ಲಿವರ್, ಹೃದಯ, ಕಿಡ್ನಿ ಸೇರಿದಂತೆ ವಿವಿಧ ಅಂಗಾಂಗಗಳು ವಿಫಲವಾಗುತ್ತವೆ ಎಂದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ವ್ಯಸನ ಮುಕ್ತ ಸಮಾಜ ನಿರ್ಮಿಸಲು ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಪನ್ಮೂಲ ವ್ಯಕ್ತಿ ಮತ್ತು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಅರವಿಂದ ಕರಿನಾಗಣ್ಣನವರ ಪಿಪಿಟಿ ಮೂಲಕ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮ ತಿಳಿಸಿ, ಚಿಕಿತ್ಸೆಗಿಂತ ತಡೆಗಟ್ಟವಿಕೆ ಉತ್ತಮವಾಗಿದ್ದು, ಒಂದು ಸಿಗರೇಟ್ ಸೇರುವುದರಿಂದ ಜೀವನದ ಅತ್ಯಮೂಲ್ಯ 11 ನಿಮಿಷಗಳನ್ನು ಕಳೆದುಕೊಳ್ಳುತ್ತೆ. ಸಿಗರೇಟ್ ನಲ್ಲಿ 6000 ಕ್ಕೂ ಹೆಚ್ಚು ಹಾನಿಕಾರಕ ರಾಸಾಯನಿಕಗಳಿರುತ್ತವೆ ಮತ್ತು ಅದರಲ್ಲಿ 60 ಕ್ಕೂ ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ದಾರಿ ಮಾಡಿ ಕೊಡುತ್ತವೆ, ವಿದ್ಯಾರ್ಥಿಗಳು ಕುತೂಹಲದಿಂದ ಮಾದಕ ವ್ಯಸನ ಪ್ರಾರಂಭಿಸಿ ಅದರಿಂದ ಹೊರಬರದಂತೆ ಅದಕ್ಕೆ ದಾಸರಾಗುತ್ತಾರೆ. ಒಳ್ಳೆಯ ಅಭ್ಯಾಸ ರೂಢಿ ಮಾಡಿಕೊಂಡು ಜೀವನದಲ್ಲಿ ಸಫಲವಾಗಬೇಕೆಂದು ಹಾಗೂ ಪಿಪಿಟಿ ಮೂಲಕ ಮಾದಕ ವ್ಯಸನದ ಕಾರಣಗಳು, ಆದರಿಂದ ಆಗುವ ಪರಿಣಾಮ ಸೇರಿದಂತೆ ವ್ಯಸನದಿಂದ ಹೇಗೆ ಮುಕ್ತರಾಗಬೇಕೆಂದು ವಿದ್ಯಾರ್ಥಿಗಳಿಗೆ ವಿವರಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಪಂ ಸಿಇಓ ಭರತ್ ಎಸ್, ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ವಾರ್ತಾಧಿಕಾರಿ ವಸಂತ ಮಡ್ಲೂರ,‌ ಶಿರಸ್ತೇದಾರ ಎಸ್.ಎಂ‌.ಹಿರೇಮಠ, ವಿದ್ಯಾರ್ಥಿಗಳು ಹಾಜರಿದ್ದರು. ಎಸ್.ಎಸ್. ಗೌಡರ ನಿರೂಪಿಸಿದರು.