ಸಾರಾಂಶ
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮನೆ-ಮನೆ ಸಮೀಕ್ಷೆ ಸೋಮವಾರ ಅಧಿಕೃತವಾಗಿ ಶುರು
ಬೆಂಗಳೂರು : ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮನೆ-ಮನೆ ಸಮೀಕ್ಷೆ ಸೋಮವಾರ ಅಧಿಕೃತವಾಗಿ ಶುರುವಾಗಿದ್ದು, ಪರಿಶಿಷ್ಟ ಜಾತಿಯವರ ಉಪಜಾತಿ/ಮುಖ್ಯಜಾತಿ, ಆರ್ಥಿಕತೆ, ಔದ್ಯೋಗಿಕ, ರಾಜಕೀಯ ಪ್ರಾತಿನಿಧ್ಯ ಹಾಗೂ ಸಾಮಾಜಿಕ ತಾರತಮ್ಯದ ಬಗ್ಗೆ ಸಮಗ್ರ ದತ್ತಾಂಶ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ.
ಈ ವೇಳೆ ಕೆಲ ಕಡೆ ಗಣತಿದಾರರಿಗೆ ಸಣ್ಣಪುಟ್ಟ ಗೊಂದಲಗಳು ಉಂಟಾಗಿದ್ದವು ಹಾಗೂ ಗಣತಿಗೆ ಒಳಗಾಗುತ್ತಿದ್ದವರಿಗೆ ಮಾಹಿತಿ ಕೊರತೆಯಿಂದ ಸ್ವಲ್ಪಮಟ್ಟಿಗೆ ಸಮಸ್ಯೆಯಾಗಿತ್ತು. ಮಾಹಿತಿದಾರರ ಫೋಟೋ ತೆಗೆದು ಅಪ್ಲೋಡ್ ಮಾಡುವುದು ಕಡ್ಡಾಯ. ಇದಕ್ಕೆ ಕೆಲವರು ಅಸಹಕಾರ ತೋರುತ್ತಿದ್ದು, ಅಂತಹವರ ಬಳಿ ಬಿಪಿಎಲ್, ಆಧಾರ್ ಕಾರ್ಡ್ ಅಥವಾ ಜಾತಿ ಪ್ರಮಾಣಪತ್ರ ಪಡೆದು ಮುಂದುವರೆಯಲು ಅವಕಾಶ ಕಲ್ಪಿಸಲಾಗಿದೆ.
ಮೊದಲ ದಿನ ಯಶಸ್ವಿ ಸಮೀಕ್ಷೆ:
ಸಮೀಕ್ಷೆ ವೇಳೆ ಯಾವುದೇ ತಾಂತ್ರಿಕ ಹಾಗೂ ಗಂಭೀರ ಸಮಸ್ಯೆಯಾಗಿಲ್ಲ. ಮೊದಲ ದಿನದ ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಿಗದಿತ ಸಮಯದಲ್ಲಿ ಸಮೀಕ್ಷೆ ಮುಗಿಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಾತಿ ಸಮೀಕ್ಷೆ ವೇಳೆ ಪುಸ್ತಕದಲ್ಲಿ ನಮೂದಿಸಿರುವ 101 ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸಂಖ್ಯೆ 15ರಲ್ಲಿ ‘ಬಲಗೈ’ ಎಂಬ ಜಾತಿ ಹೆಸರು ನಮೂದು ಮಾಡಲಾಗಿದೆ. ಆದರೆ ‘ಎಡಗೈ’ ಎಂಬ ಜಾತಿಯು ಪಟ್ಟಿಯಲ್ಲಿ ಇಲ್ಲ. ಈ ಬಗ್ಗೆ ಗೊಂದಲ ಉಂಟಾಗಿದ್ದು, ಎಡಗೈ ಎಂಬುದು ಕೇಂದ್ರ ಸರ್ಕಾರದ ಅಧಿಸೂಚಿತ ಜಾತಿ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಎಡಗೈ ಸಮುದಾಯಕ್ಕೆ ಸೇರುವವರು 101 ಪರಿಶಿಷ್ಟ ಜಾತಿಗಳ ಪೈಕಿ ತಮ್ಮ ಉಪ ಜಾತಿಯನ್ನು ಮಾತ್ರ ನಮೂದಿಸಬೇಕು ಎಂದು ತಿಳಿಸಿ ಗೊಂದಲ ಬಗೆಹರಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಇನ್ನು ಅನ್ಯ ರಾಜ್ಯದ ಪರಿಶಿಷ್ಟ ಜಾತಿಯವರು ಇಲ್ಲಿ ನೆಲೆಸಿದ್ದರೂ ಅವರನ್ನು ಸಮೀಕ್ಷೆಗೆ ಪರಿಗಣಿಸಬಾರದು. ರಾಜ್ಯದ ವಿಳಾಸದ ಆಧಾರ್ ಕಾರ್ಡ್ ಇದ್ದರೆ ಮಾತ್ರ ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಮನೆ-ಮನೆ ಸಮೀಕ್ಷೆ ವೇಳೆ ರಾಜಕೀಯ ಪ್ರಾತಿನಿಧ್ಯ, ಆರ್ಥಿಕತೆ ಹಾಗೂ ಔದ್ಯೋಗಿಕ ಪ್ರಾತಿನಿಧ್ಯತೆ ನಿಗದಿ, ಸಾಮಾಜಿಕ ತಾರತಮ್ಯ ಎಲ್ಲದರ ಬಗ್ಗೆಯೂ ಪ್ರತ್ಯೇಕ ಪ್ರಶ್ನೆ ಕೇಳಿ ಮಾಹಿತಿ ದಾಖಲಿಸಿಕೊಳ್ಳಲಾಗುತ್ತಿದೆ.
ರಾಜಕೀಯ ಪ್ರಾತಿನಿಧ್ಯ ಅರಿಯಲು ಮನೆಯ ಸದಸ್ಯರಲ್ಲಿ ಯಾರಾದರೂ ಹಾಲಿ ಅಥವಾ ಮಾಜಿ ಜನಪ್ರತಿನಿಧಿ ಇದ್ದಾರೆಯೇ ಇದ್ದರೆ ವಿಧಾನಸಭೆ, ಲೋಕಸಭೆ, ಜಿಪಂ ಸೇರಿ ಯಾವ ಜನಪ್ರತಿನಿಧಿ ಎಂಬ ಬಗ್ಗೆ ವಿವರ ಸಂಗ್ರಹಿಸಲಾಗುತ್ತಿದೆ.
ಸಾಮಾಜಿಕ ತಾರತಮ್ಯ ನಿರ್ಧರಿಸುವುದು ಹೇಗೆ?
ಸ್ಪೃಶ್ಯ ಜಾತಿಯೇ ಅಥವಾ ಅಸ್ಪೃಶ್ಯ ಜಾತಿಯೇ ಎಂಬುದರ ಬಗ್ಗೆ ಅರಿಯಲು ಸಾಮಾಜಿಕ ತಾರತಮ್ಯ ಅನುಭವಿಸುತ್ತಿರುವ ಕುರಿತು ವಿವರಣೆ ನೀಡಲು ಸಮೀಕ್ಷೆ ಕಲಂನಲ್ಲಿ ಆಯ್ಕೆ ನೀಡಲಾಗಿದೆ.ಆಹಾರ ಸೇವಿಸುವುದಕ್ಕೆ ನಿಷೇಧ, ಹಳ್ಳಿಗಳ ಟೀ ಸ್ಟಾಲ್‌ಗಳಲ್ಲಿ ಪ್ರತ್ಯೇಕ ಲೋಟ ನೀಡುವುದು. ಹಳ್ಳಿಗಳಲ್ಲಿ ನಡೆಯುವ ಹಬ್ಬಗಳಲ್ಲಿ ಪ್ರತ್ಯೇಕ ಆಸನದಲ್ಲಿ ಹಾಗೂ ಪ್ರತ್ಯೇಕವಾಗಿ ಆಹಾರ ಸೇವನೆಗೆ ಕೂರಿಸುವುದು. ಸಾರ್ವಜನಿಕ ಪೂಜಾಸ್ಥಳಗಳಲ್ಲಿ ಪ್ರವೇಶಕ್ಕೆ ನಿಷೇಧ. ಮೇಲ್ವರ್ಗದವರ ಎದುರು ಚಪ್ಪಲಿ ಧರಿಸಬಾರದು ಅಥವಾ ಛತ್ರಿ ಬಳಸಬಾರದು ಎಂಬ ನಿರ್ಬಂಧ. ಸಾರ್ವಜನಿಕ ರಸ್ತೆಗಳಲ್ಲಿ ಓಡಾಡಬಾರದು. ಸ್ಮಶಾನಗಳಲ್ಲಿ ಸಾರ್ವಜನಿಕ ಕೊಳ, ಬಾವಿ, ದೇವಾಲಯಗಳ ಬಳಕೆಗೆ ನಿರ್ಬಂಧ ಸೇರಿ 14 ರೀತಿಯ ಆಯ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಉದ್ಯೋಗಿ ಆಗಿದ್ದರೆ ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ, ಕೂಲಿ ಹೀಗೆ ಉದ್ಯೋಗದ ರೀತಿ ಜತೆಗೆ ಉದ್ಯೋಗ ದೊರೆತಿಲ್ಲ ಎಂಬ ಆಯ್ಕೆಯನ್ನೂ ನೀಡಲಾಗಿದೆ. ಆರ್ಥಿಕತೆ ಅರಿಯಲು ಚರಾಸ್ತಿಗಳ ಪೈಕಿ ದ್ವಿಚಕ್ರವಾಹನ, ಫ್ರಿಡ್ಜ್, ಕಾರು, ವಾಶಿಂಗ್ ಮೆಷಿನ್, ಎತ್ತಿನಗಾಡಿ, ಕಟಾವು ಯಂತ್ರ, ಅಡಕೆ ಯಂತ್ರ ಹೀಗೆ 18 ರೀತಿ ಚರಾಸ್ತಿ ಆಯ್ಕೆ, ವಾಸವಿರುವ ಮನೆ ಇರುವ ಪ್ರದೇಶ, ಮನೆ ಮಾಲೀಕರೇ ಅಥವಾ ಬಾಡಿಗೆದಾರರ ಎಂಬ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ.
ತಂದೆಯ ಜಾತಿಯೇ ಮಕ್ಕಳದ್ದು:
ಅನ್ಯ ಜಾತಿ ವಿವಾಹದ ವೇಳೆ ಪತಿ ಅನ್ಯಜಾತಿಯವರಾಗಿದ್ದು ಪತ್ನಿ ಪರಿಶಿಷ್ಟ ಜಾತಿಯವರಾಗಿದ್ದರೆ ಅವರ ಮಕ್ಕಳನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸಬಾರದು. ಪತ್ನಿ ತನ್ನ ಜಾತಿಯನ್ನೇ ನೀಡಬೇಕೆಂದು ಒತ್ತಾಯಿಸಿದರೂ ಕಾನೂನು ಪ್ರಕಾರ ತಂದೆಯ ಜಾತಿಯೇ ಮಕ್ಕಳದ್ದು. ಹೀಗಾಗಿ ಅದಕ್ಕೆ ಅವಕಾಶ ನೀಡಬಾರದು ಎಂದು ಗಣತಿದಾರರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಇನ್ನು ಅಂತರ್ ಜಾತಿ ವಿವಾಹವಾದ ಪಕ್ಷದಲ್ಲಿ ಪರಿಶಿಷ್ಟ ಜಾತಿಯ ಹೆಣ್ಣು ಬೇರೆ ಜಾತಿಯ ಕುಟುಂಬಕ್ಕೆ ಸೇರುತ್ತದೆ. ಆ ಕುಟುಂಬ ಪರಿಶಿಷ್ಟ ಜಾತಿಗೆ ಸೇರಿರುವುದಿಲ್ಲ. ಇಂತಹ ಸಮಯದಲ್ಲಿ ಶಿಬಿರದಲ್ಲಿ ಹೋಗಿ ಆ ಹೆಣ್ಣು ಪರಿಶಿಷ್ಟ ಜಾತಿ ಎಂದು ಪ್ರತ್ಯೇಕವಾಗಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ.
ಒಂದು ಕುಟುಂಬದಲ್ಲಿ 10 ಮಂದಿ ಸದಸ್ಯರಿದ್ದು, 9 ಮಂದಿ ಪರಿಶಿಷ್ಟ ಜಾತಿ ಎಂದು ನಮೂದಿಸುತ್ತಾರೆ. ಹತ್ತನೇ ವ್ಯಕ್ತಿ ಒಬ್ಬ ಮಾತ್ರ ತನಗೆ ಇಷ್ಟ ಇಲ್ಲದೆ ಜಾತಿ ಗೊತ್ತಿಲ್ಲ ಎಂದರೆ ‘ಡೋಂಟ್ ನೋ’ ಆಯ್ಕೆ ಕೊಡಬಹುದು ಎಂದು ಹೇಳಲಾಗಿದೆ. ಇದರಿಂದ ಅನಗತ್ಯ ವಾಗ್ವಾದ, ಗೊಂದಲಗಳು ಉಂಟಾಗದಂತೆ ಎಚ್ಚರವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗಣತಿದಾರರು ಕೇವಲ ಪರಿಶಿಷ್ಟ ಜಾತಿಯವರ ಮನೆಗೆ ಮಾತ್ರವಲ್ಲ ಪ್ರತಿ ಮನೆಗೂ ಭೇಟಿ ನೀಡುತ್ತಾರೆ. ಪರಿಶಿಷ್ಟ ಜಾತಿಯವರ ಮನೆಯಿಂದ ಎಲ್ಲಾ ರೀತಿಯ ದತ್ತಾಂಶ ಸಂಗ್ರಹಿಸುತ್ತಾರೆ. ಪರಿಶಿಷ್ಟ ಜಾತಿ ಅಲ್ಲದಿದ್ದರೆ ಸದಸ್ಯರ ಸಂಖ್ಯೆ ಮಾತ್ರ ನಮೂದಿಸಿ ವಾಪಸಾಗುತ್ತಾರೆ. ಮೊದಲ ದಿನ ಸಮೀಕ್ಷೆ ಯಶಸ್ವಿಯಾಗಿ ನಡೆದಿದೆ.
- ಡಾ.ಕೆ. ರಾಕೇಶ್ ಕುಮಾರ್, ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ
ಸಮೀಕ್ಷೆ ಅಂಕಿ-ಅಂಶ ಬಹಿರಂಗ ಇಲ್ಲ
ಮೊದಲ ದಿನ ಸಣ್ಣ ಪುಟ್ಟ ಗೊಂದಲ ಹೊರತುಪಡಿಸಿ ಯಾವುದೇ ತಾಂತ್ರಿಕ ಅಥವಾ ಗಂಭೀರ ಅಡಚಣೆ ಇಲ್ಲದೆ ಯಶಸ್ವಿಯಾಗಿ ಸಮೀಕ್ಷೆ ನಡೆದಿದೆ. ಸಂಗ್ರಹವಾಗಿರುವ ಅಂಕಿ-ಸಂಖ್ಯೆ ಹಾಗೂ ದತ್ತಾಂಶವನ್ನು ಬಹಿರಂಗಗೊಳಿಸದಂತೆ ಹಾಗೂ ತನ್ಮೂಲಕ ಯಾವ ಸಮುದಾಯಕ್ಕೂ ಹತಾಶೆ ಉಂಟು ಮಾಡದಂತೆ ಎಚ್ಚರ ವಹಿಸುತ್ತಿದ್ದೇವೆ. ನಿಗದಿತ ಸಮಯದಲ್ಲಿ ನಾವೇ ಶೇಕಡಾವಾರು ಸಮೀಕ್ಷೆ ವಿವರ ಬಹಿರಂಗಪಡಿಸುತ್ತೇವೆ.
- ಎಚ್.ಎನ್. ನಾಗಮೋಹನ್ ದಾಸ್, ನಿ. ನ್ಯಾಯಮೂರ್ತಿ