ಸಮ್ಮೋಹಕ ಜೋಗ ಜಲನಿಧಿ, ಇದು ದೈವ ಸನ್ನಿಧಿ

| Published : Jul 15 2024, 01:47 AM IST

ಸಮ್ಮೋಹಕ ಜೋಗ ಜಲನಿಧಿ, ಇದು ದೈವ ಸನ್ನಿಧಿ
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿ ಕಣಿವೆ ಪ್ರದೇಶದಲ್ಲಿ ಮುಂಗಾರು ಮಳೆಯ ಅಬ್ಬರಕ್ಕೆ ವಿಶ್ವ ವಿಖ್ಯಾತ ಜೋಗ ಜಲಪಾತದ ಜಲಧಾರೆ ಹೆಚ್ಚಾಗಿದ್ದು, ಪ್ರಕೃತಿ ದತ್ತವಾದ ನೈಜ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡು ಜೋಗಕ್ಕೆ ಲಗ್ಗೆಯಿಡುತ್ತಿದೆ.

ಕನ್ನಡಪ್ರಭ ವಾರ್ತೆ ತಾಳಗುಪ್ಪ

ಶರಾವತಿ ಜಲಾಯನ ಪ್ರದೇಶದಲ್ಲಿ ಪುನರ್ವಸು ಮಳೆ ಅಬ್ಬರಿಸುತ್ತಿದ್ದು , ಜೋಗ ಜಲಪಾತ ರಮಣೀಯ ದೃಶ್ಯ ವೈಭವವನ್ನೇ ಸೃಷ್ಠಿಸಿದೆ.

ಶರಾವತಿ ಕಣಿವೆ ಪ್ರದೇಶದಲ್ಲಿ ಮುಂಗಾರು ಮಳೆಯ ಅಬ್ಬರಕ್ಕೆ ವಿಶ್ವ ವಿಖ್ಯಾತ ಜೋಗ ಜಲಪಾತದ ಜಲಧಾರೆ ಹೆಚ್ಚಾಗಿದ್ದು, ಪ್ರಕೃತಿ ದತ್ತವಾದ ನೈಜ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡು ಜೋಗಕ್ಕೆ ಲಗ್ಗೆಯಿಡುತ್ತಿದೆ.

ಜಲಪಾತ ಪ್ರದೇಶದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅನನುಕೂಲತೆಗಳ ನಡುವೆಯೂ ಜಲಸಿರಿಯ ವೈಭವ ವೀಕ್ಷಣೆಗೆ ಜನ ಸಾಗರ ಹೆಚ್ಚುತ್ತಿದೆ. ವಾರಾಂತ್ಯದ ರಜೆಯ ಕಾರಣ, ಸುರಿಯುವ ಮಳೆಯ ನಡುವೆಯೇ ಭಾನುವಾರ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಬಂದಿದ್ದರು.

ಜೋಗ ಜಲಪಾತ ಮತ್ತೆ ಧುಮ್ಮಿಕ್ಕುತ್ತಿದೆ. ಕಳೆದ ವರ್ಷ ಮಳೆಯಿಲ್ಲದೆ ಬರಡಾಗಿ ನಿಂತಿದ್ದ ಜೋಗದ ಗುಂಡಿ ಈ ವರ್ಷ ತನ್ನ ವೈಭವ ಮರಳಿ ಪಡೆದಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಜೂನ್ ಮತ್ತು ಜುಲೈ ತಿಂಗಳ ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಗರ ಸುತ್ತಮುತ್ತ ಹಿನ್ನೀರು ಪ್ರದೇಶದಲ್ಲಿ ಜೋರು ಮಳೆಯಾಗುತ್ತಿದ್ದು, ಶರಾವತಿ ನದಿ ಒಳ ಹರಿವು ಹೆಚ್ಚಾಗಿದ್ದು, ಜೋಗದ ನಯನ ಮನೋಹರ ದೃಶ್ಯಕ್ಕೆ ಸಾಕ್ಷಿಯಾಗಿದೆ. 831 ಅಡಿಗಳ ಮೇಲಿಂದ ಧುಮ್ಮಿಕ್ಕುವ ಜೋಗ ಜಲಪಾತ ನೋಡಲು ಪ್ರವಾಸಿ ಮುಗಿಬೀಳುತ್ತಿದ್ದಾರೆ.

ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ಒಂದು ವಾರದಲ್ಲಿ ಅಂದಾಜು 30 ಸಾವಿರಕ್ಕೂ ಅಧಿಕ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ. ಶನಿವಾರ ಮತ್ತು ಭಾನುವಾರ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜೋಗವನ್ನು ಕಣ್ತುಂಬಿಕೊಳ್ಳಲು ರಾಜ್ಯವಲ್ಲದೇ ಬೇರೆ ರಾಜ್ಯ ಮತ್ತು ದೇಶಗಳಿಂದಲೂ ಬರುತ್ತಿದ್ದಾರೆ.

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಈ ವರ್ಷ ಸಾಕಷ್ಟು ಮಳೆಯಾಗಿದ್ದು, ಶರಾವತಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ.

ದೇಶ ವಿದೇಶಗಳ ಪ್ರವಾಸಿಗರು ನಾಲ್ಕು ಜಲಧಾರೆಯ ಜಲ ವೈಭವವನ್ನು ಕಣ್ತುಂಬಿಕೊಂಡು ಮಂದಸ್ಮಿತರಾಗುತ್ತಿದ್ದಾರೆ. ಮೈಸೂರು ಜಲಪಾತದ ಎಡದಂಡೆಯ ಮೇಲುಗಡೆ ನಿಂತು ಜಲಪಾತ ಕಂಡರೂ ತೃಪ್ತರಾಗದ ಹಲವು ಪ್ರವಾಸಿಗರು ಬ್ರಿಟೀಷ್ ಬಂಗಲೆಗೆ ತೆರಳಿ, ರಾಜಾ ಫಾಲ್ಸಿನ ರಭಸದ ಘರ್ಜನೆಯನ್ನು ಕೇಳಿಸಿ ಕೊಳ್ಳುತ್ತಿದ್ದಾರೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಈ ವರ್ಷ ಜುಲೈ ತಿಂಗಳ ಅಂತ್ಯದಲ್ಲಿ ಜಲಪಾತದ ವೈಭವ ಮತ್ತಷ್ಟು ಮರುಕಳಿಸುವ ಸಾಧ್ಯತೆ ಇದೆ.

ಪ್ರವಾಸಿಗರಿಗೆ ಮಲೆನಾಡ ಆತಿಥ್ಯ:

ಜಲಪಾತದ ದಾರಿಯಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು 300ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರಿಂದ ಬೇಯಿಸಿದ ಜೋಳ, ಮಸಾಲೆ ಮಂಡಕ್ಕಿ ಮೊದಲಾದ ವಿವಿಧ ಖಾದ್ಯ, ಬಿಸಿ ಬಿಸಿ ಕಾಫಿ ,ಟೀ, ಪಾನೀಯ, ಚೂರು ಮಾಡಿದ ಹಣ್ಣು ಹಂಪಲಗಳ ಸವಿ ರುಚಿಯನ್ನು ಪ್ರವಾಸಿಗರು ಸವಿಯುತ್ತಿದ್ದಾರೆ.

4000 ವಾಹನಗಳು ಜಲಪಾತದ ಪ್ರಾಂಗಣಕ್ಕೆ ಬಂದಿದೆ, ಟ್ರಾಪಿಕ್ ಸಮಸ್ಯೆಯಾಗದಂತೆ, ನೂಕು ನುಗ್ಗಲಾಗದಂತೆ, ಕಾರ್ಗಲ್ ಪಿಎಸ್‍ಐ ಹೊಳೆಬಸಪ್ಪ ಹೋಳಿ ನಿರ್ದೇಶನದಲ್ಲಿ ಪೋಲಿಸ್ ಸಿಬ್ಬಂದಿ ಹಾಗೂ ಜೋಗ್ ನಿರ್ವಹಣಾ ಪ್ರಾಧಿಕಾರದ ಭದ್ರತಾ ಅಧಿಕಾರಿ ಬಾಸ್ಕರ್ ನೇತೃತ್ವದಲ್ಲಿ ಭದ್ರತಾ ಸಿಬ್ಬಂದಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ.ರೆಡ್‌ ಅಲರ್ಟ್‌ ಘೋಷಣೆ: ಕಳೆದ ನಾಲ್ಕೈದು ದಿನಗಳಿಂದ ಕಡಿಮೆಯಾಗಿದ್ದ ಮಳೆ ಮತ್ತೆ ಬಿರುಸು ಪಡೆದುಕೊಳ್ಳುತ್ತಿದೆ. ಇನ್ನು ನಾಲ್ಕು ದಿನ ಭಾರಿ ಮಳೆಯ ಅಲರ್ಟ್‌ ಪ್ರಕಟಿಸಲಾಗಿದೆ. ಇನ್ನು, ಕಳೆದ 24 ಗಂಟೆಯಲ್ಲಿ ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ಮಳೆ ಅಬ್ಬರಿಸಿದೆ.

ಶನಿವಾರ ಬೆಳಗ್ಗೆ 8.30 ರಿಂದ ಭಾನುವಾರ ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಭದ್ರಾವತಿಯಲ್ಲಿ 8.4 ಮಿ.ಮೀ, ಹೊಸನಗರದಲ್ಲಿ 69.4 ಮಿ.ಮೀ, ಸಾಗರದಲ್ಲಿ 71.9 ಮಿ.ಮೀ, ಶಿಕಾರಿಪುರದಲ್ಲಿ 14.2 ಮಿ.ಮೀ, ಶಿವಮೊಗ್ಗದಲ್ಲಿ 14.6, ಸೊರಬದಲ್ಲಿ 23.3 ಮಿ.ಮೀ, ತೀರ್ಥಹಳ್ಳಿಯಲ್ಲಿ 56.7 ಮಿ.ಮೀ ಮಳೆಯಾಗಿದೆ.

ಜಿಲ್ಲೆಯಲ್ಲಿ ಇನ್ನು ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜು.15ರಂದು ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಜು.16 ರಿಂದ 18ರವರೆಗೆ ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಪ್ರಕಟಿಸಲಾಗಿದೆ. ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ.

ಜಲಾಶಯಗಳ ಒಳ ಹರಿವು ಹೆಚ್ಚಳ:

ಜಿಲ್ಲೆಯಲ್ಲಿ ಜೋರು ಮಳೆಯಾಗುತ್ತಿರುವ ಕಾರಣ ಜಲಾಶಯಗಳ ಒಳಹರಿವು ಹೆಚ್ಚಾಗುತ್ತಿವೆ. ತೀರ್ಥಹಳ್ಳಿ ಸೇರಿದಂತೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದ್ದರಿಂದ ಗಾಜನೂರಿನ ತುಂಗಾ ಜಲಾಶಯದ ಒಳ ಹರಿವು ಏರಿಕೆಯಾಗಿದೆ. ಈಗಾಗಲೆ ಜಲಾಶಯ ಭರ್ತಿ ಆಗಿರುವ ಹಿನ್ನೆಲೆ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ.

ಇನ್ನೂ ಭದ್ರಾ ಜಲನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದು, ಭದ್ರಾ ಜಲಾಶಯಕ್ಕೆ ಭಾನುವಾರ 14,570 ಕ್ಯುಸೆಕ್‌ ನೀರು ಹರಿದುಬಂದಿದೆ. ಶನಿವಾರ 4870 ಕ್ಯುಸೆಕ್‌ ನರು ಹರಿದು ಬಂದಿತ್ತು. ಒಟ್ಟು 186 ಅಡಿ ಗರಿಷ್ಟ ಮಟ್ಟ ಇರುವ ಜಲಾಶಯದ ಮಟ್ಟ ಈಗ 139 ಅಡಿಗೆ ತಲುಪಿದೆ.

ಇನ್ನು ಲಿಂಗನಮಕ್ಕಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದು, ಭಾನುವಾರ ಒಂದೇ ದಿನ 2 ಅಡಿಗೂ ಹೆಚ್ಚು ನೀರು ಬಂದಿದೆ.ರೊಟ್ಟು 1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದ ಮಟ್ಟ ಶನಿವಾರ 1773 ಅಡಿ ಇದ್ದರೆ, ಭಾನುವಾರ 1775.70 ಅಡಿಗೆ ತಲುಪಿದೆ. 36197 ಕ್ಯುಸೆಕ್‌ ಒಳ ಹರಿವು ಇತ್ತು.