ಸಾರಾಂಶ
ಶೈಕ್ಷಣಿಕ ಕಾರ್ಯಾಗಾರದಲ್ಲಿ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್
ಕನ್ನಡಪ್ರಭ ವಾರ್ತೆ ಕೊಪ್ಪಳಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಸಾಮರ್ಥ್ಯವನ್ನು ಕೊಲ್ಲಲಾಗುತ್ತದೆ. ಅವರಿಗೆ 600 ಪುಸ್ತಕ ಓದುವ ಸಾಮರ್ಥ್ಯವಿದ್ದರೂ ಕೇವಲ 6 ಪುಸ್ತಕಗಳನ್ನೇ ವರ್ಷ ಪೂರ್ತಿ ಓದಿಸಿ, ಅವರ ಪ್ರತಿಭೆಯನ್ನು ಕೊಲ್ಲಲಾಗುತ್ತಿದೆ ಎಂದು ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಸಂಪನ್ಮೂಲ ವ್ಯಕ್ತಿ ಗೋಪಾಡ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಬಿಎನ್‌ಆರ್‌ಕೆ ಪಪೂ ಕಾಲೇಜಿನಲ್ಲಿ ವಿಶೇಷ ಶಿಕ್ಷಕರಿಗೆ ಮೆಮೋರಿ ಡೆವಲಪ್‌ಮೆಂಟ್ ಶೈಕ್ಷಣಿಕ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದಕ್ಕೆ ಪರಿಹಾರ ದೊರೆಯಬೇಕಾಗಿದೆ ಎಂದರು.ದೇಶದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿಯೇ ತುಂಬಾ ವ್ಯತ್ಯಾಸವಿದೆ. ಎಂದೂ ಕಲಿಯದ ಶಿಕ್ಷಕರ ಜತೆ ಮಕ್ಕಳು ಕುಳಿತು ಕಲಿಯಬೇಕಾದ ಪರಿಸ್ಥಿತಿ ಬಂದಿದೆ. ಶಿಕ್ಷಕರು ಕಲಿಯುವುದು ನಿಲ್ಲಿಸಿ ತುಂಬಾ ವರ್ಷಗಳಾಗಿವೆ. ಮಕ್ಕಳು ಕಲಿಯುವವರ ಜತೆ ಕುಳಿತುಕೊಳ್ಳಬೇಕಿದೆ. ಮಕ್ಕಳ ಕಲಿಕೆಯಲ್ಲಿ ಬದಲಾವಣೆ ತರಬೇಕಿದೆ. ಈ ದೇಶದ ಆರ್ಥಿಕ ನೀತಿ ನಿಂತಿರುವುದು ಅಪ್ಪ ಮತ್ತು ಮಕ್ಕಳ ಪ್ರೀತಿಯ ಮೇಲೆ, ಮಕ್ಕಳು ಕಲಿಕೆಗಾಗಿ ಅತಿಯಾಗಿ ಹೊಡೆಯುವುದು, ಬಡಿಯುವುದು ನಿಲ್ಲಬೇಕಿದೆ. ಒತ್ತಡ ಮಾಡಿ ಕಲಿಸಿದರೆ ಮಗು ತುಂಬಾ ಕಡಿಮೆ ಕಲಿಯುತ್ತದೆ. ಇಂದು ದೇಶದಲ್ಲಿ ೧೦ನೇ ತರಗತಿಯಲ್ಲಿ ಆರು ಪುಸ್ತಕ ಅಭ್ಯಾಸ ಮಾಡಲು ಮಕ್ಕಳಿಗೆ ಒಂದು ವರ್ಷ ಬೇಕಾದ ಪರಿಸ್ಥಿತಿಯಿದೆ. ಒಂದೆರಡು ತಿಂಗಳಲ್ಲಿ ನೂರಾರು ಪುಸ್ತಕಗಳ ಕಲಿಯಲು ಅವಕಾಶಗಳಿವೆ. ಆ ರೀತಿ ನಾವು ಮಕ್ಕಳನ್ನು ತಯಾರು ಮಾಡಬೇಕಿದೆ. ಆದರೆ ಇದೆಲ್ಲವನ್ನು ಬಿಟ್ಟು ಮಕ್ಕಳಿಗೆ ಅತಿಯಾದ ಒತ್ತಡ ಹೇರುವ ಕೆಲಸ ಎಲ್ಲೆಡೆಯೂ ನಡೆದಿವೆ ಎಂದರು.
ಸ್ವರೂಪ ಕೇಂದ್ರದಲ್ಲಿ ಒಂದೆರಡು ತಿಂಗಳಲ್ಲಿ ಒಬ್ಬ ಮಗು ೧೦ ಭಾಷೆ ಕಲಿತ್ತದೆ, ೧೦ ಭಾಷೆಯಲ್ಲಿ ಪತ್ರ ಬರೆಯುತ್ತಾರೆ. ಇದು ಎಲ್ಲ ಮಕ್ಕಳಿಗೂ ಸಾಧ್ಯವಿದೆ. ಆದರೆ ವ್ಯವಸ್ಥೆಯಲ್ಲಿ ಮಗು ಸಿಕ್ಕಿಕೊಂಡಿದೆ. ಮಗು ತಪ್ಪು ಮಾಡಿಲ್ಲ. ಆದರೆ ಮಕ್ಕಳ ಕಲಿಕೆಗೆ ಬಿಡುತ್ತಿಲ್ಲ. ದೇಶದಲ್ಲಿ ಸರ್ಟಿಫಿಕೆಟ್ ವಿಶ್ವ ವಿದ್ಯಾಲಯಗಳು ಅವರನ್ನು ಕಟ್ಟಿ ಹಾಕಿವೆ. ಭಾರತ ಸಾವಿರಾರು ವಿಶ್ವ ವಿದ್ಯಾಲಯಗಳನ್ನು ಹೊಂದಿದೆ. ಆದರೆ ಜಗತ್ತಿನ ೨೦೦ ಬೆಸ್ಟ್ ವಿಶ್ವ ವಿದ್ಯಾಲಯಗಳಲ್ಲಿ ಭಾರತದ ಒಂದೇ ಒಂದು ವಿಶ್ವ ವಿದ್ಯಾಲಯದ ಹೆಸರಿಲ್ಲ. ಜಗತ್ತಿನ ೪೦೦ ವಿವಿಯಲ್ಲಿ ಭಾರತದಲ್ಲಿನ ಬೆಂಗಳೂರಿನ ಒಂದೇ ಒಂದು ವಿವಿ ಸ್ಥಾನ ಪಡೆದಿದೆ ಎಂದರೆ ಎಂಥಾ ದುರಂತದ ಸಂಗತಿ ಎಂದರು.ದೇಶದಲ್ಲಿ ಮಕ್ಕಳ ಕಲಿಕೆಯಲ್ಲಿ ಅಂಕಗಳ ಮೇಲೆ ನಿರ್ಧಾರ ಮಾಡಲಾಗುತ್ತಿದೆ. ಪಾಸ್ ಫೇಲ್ ಎನ್ನುವ ಹಣೆಪಟ್ಟಿ ಕಟ್ಟಲಾಗುತ್ತಿದೆ. ಇದು ಕೊನೆಯಾಗಬೇಕಿದೆ. ಜ್ಞಾನ ಸಮಾನತೆಗಾಗಿ ಮಕ್ಕಳಿಗೆ ಜ್ಞಾನ ಕಲಿಕೆಯ ಅವಶ್ಯಕತೆಯದೆ. ಪಾಲಕರ ಹಾಗೂ ಮಕ್ಕಳ ಕಲಿಕೆಯ ಸಮಯವನ್ನು ಸುಮ್ಮನೆ ಹಾಳುಮಾಡಬೇಡಿ ಎಂದು ಮನವಿ ಮಾಡಿದರು.
ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಬಿ.ಈ. ಅವಟೆ ಪ್ರಾಸ್ತಾವಿಕ ಮಾತನಾಡಿ, ಪ್ರಸ್ತುತ ದಿನದಲ್ಲಿ ಮಕ್ಕಳನ್ನು ಪಠ್ಯಪುಸ್ತಕದಂತೆ ಮಾಡುತ್ತಿದ್ದೇವೆ. ಅವರಿಗೆ ಬರಿ ಓದು ಓದು ಎನ್ನುವಂತಹ ಮನೋಭಾವ ನಮ್ಮ ಪಾಲಕರಲ್ಲಿ ಬೆಳೆದಿದೆ. ಇದರಿಂದಾಗಿ ಮಕ್ಕಳಲ್ಲಿ ಸೃಜನಶೀಲತೆಯೇ ಕಡಿಮೆಯಾಗುತ್ತಿದೆ. ಮಕ್ಕಳ ಸೃಜನಶೀಲತೆ ಹೊರ ತೆಗೆಯಲು ಇಂಥ ಕಾರ್ಯಾಗಾರ ಅವಶ್ಯಕತೆಯಿದೆ ಎಂದರು.ಬಿಎನ್‌ಆರ್‌ಕೆ ಆಡಳಿತಾಧಿಕಾರಿ ವೆಂಕಟರಡ್ಡಿ ಕೊಳ್ಳಿ, ಸಂಸ್ಥೆಯ ಪ್ರಾಚಾರ್ಯ ರುದ್ರಸ್ವಾಮಿ ಜೆ., ಚಿತ್ರಕಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ.ಜಿ. ಆವಟಿ, ಜಿಲ್ಲಾಧ್ಯಕ್ಷ ನಾಗರಾಜ ಸುನಗಾ, ಉಪ ಪ್ರಾಚಾರ್ಯೆ ಶಿಲ್ಪಾ ಕುಕನೂರು, ಸಂಪನ್ಮೂಲ ವ್ಯಕ್ತಿ ಸುಮಂಗಲಾ ಉಪಸ್ಥಿತರಿದ್ದರು.