ಸಾರಾಂಶ
ಚಿಂತಾಮಣಿ : ವಿಧಾನ ಷರಿಷತ್ತನ್ನು ಚಿಂತಕರ ಛಾವಡಿಯೆಂದು ಬಣ್ಣಿಸಲಾಗುತ್ತದೆ. ಇದು ಮೇಲ್ಮನೆಯಾಗಿದ್ದು ಇಲ್ಲಿ ಆಯ್ಕೆಯಾಗುವ ಸದಸ್ಯರು ವಿಚಾರವಂತರು, ಜ್ಞಾನವಂತರು, ಮುತ್ಸದ್ಧಿಯಾಗಿರಬೇಕು. ಅಂತಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದರು.
ನಗರದ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ ಎ ನಾರಾಯಣಸ್ವಾಮಿ ಮತಯಾಚಿಸಿ ಮಾಡನಾಡಿದ ಅವರು, ಬಿಜೆಪಿಯ ಡಾ.ನಾರಾಯಣಸ್ವಾಮಿ ಅಂತಹ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಮೇಲ್ಮನೆಯಲ್ಲಿ ಶಾಸನ ಸಭೆಯಿಂದ ಬರುವ ಮಸೂದೆಗಳಿಗೆ ಎಲ್ಲಾ ವರ್ಗಗಳ ಜನರಿಗೆ ಒಳಿತನ್ನು ಉಂಟು ಮಾಡುತ್ತವೆಯೇ ಅಥವಾ ಇಲ್ಲವೆ ಎಂಬುದನ್ನು ಅರಿತು ಮೇಲ್ಮನೆ ಸದಸ್ಯರು ತೀರ್ಮಾನಿಸುತ್ತಾರೆ ಎಂದರು.
ನಾರಾಯಣಸ್ವಾಮಿ ಬೆಂಬಲಿಸಿ
ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ೧೫ ವರ್ಷಗಳಿಂದ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಶಿಕ್ಷಕರ ಪ್ರತಿಯೊಂದು ಸಮಸ್ಯೆಗಳ ನರನಾಡಿಯನ್ನು ಅರಿತಿದ್ದಾರೆ. ಇಂತಹ ವ್ಯಕ್ತಿಯನ್ನು ಮೇಲ್ಮನೆಗೆ ಆಯ್ಕೆ ಮಾಡುವುದರಿಂದ ಅಲ್ಲಿ ನಿಮ್ಮ ಪರವಾಗಿ ಪ್ರಶ್ನೆಯನ್ನು ಮಾಡುವುದರ ಮೂಲಕ ನಿಮಗೆ ನ್ಯಾಯವನ್ನು ಒದಗಿಸುವಂತಹ ವ್ಯಕ್ತಿಯಾಗಿದ್ದಾರೆಂದರು.
ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾರಾಯಣಸ್ವಾಮಿ ಶಿಕ್ಷಕ ಕ್ಷೇತ್ರ ಪ್ರತಿಯೊಂದು ಸಮಸ್ಯೆಗಳನ್ನು ಬಗೆಹರಿಸಲು ನಿರಂತರ ಪ್ರಯತ್ನಪಟ್ಟಿದ್ದರು. ಕಾಂಗ್ರೇಸ್ ತನ್ನ ಹಣ ಬಲ ಅಧಿಕಾರ ಬಲದಿಂದ ಈ ಕ್ಷೇತ್ರಗಳ ಗೌರವವನ್ನು ಹಾಳು ಮಾಡುತ್ತಿದೆ. ಆಡಳಿತ ಪಕ್ಷ ಜನ ವಿರೋಧಿ ಕಾನೂನುಗಳನ್ನು ವಿಧಾನಸಭೆಯಲ್ಲಿ ಜಾರಿಗೊಳಿಸಿದರೂ ಮೇಲ್ಮನೆಯಲ್ಲಿ ಅಂತಹ ಮಸೂದೆಗಳನ್ನು ಅವುಗಳನ್ನು ತಡೆಹಿಡಿಯಲು ಇಂತಹ ಸಜ್ಜನ, ಜ್ಞಾನವಂತ, ಮುತ್ಸದ್ದಿ, ವಿಚಾರವಂತ ನಾಯಕರ ಅವಶ್ಯಕತೆಯಿದೆ. ಇಂತಹ ನಾಯಕ ವೈ.ಎ.ನಾರಾಯಣಸ್ವಾಮಿ. ಆದ್ದರಿಂದ ಅವರನ್ನು ಬೆಂಬಲಿಸಿ ಆಯ್ಕೆ ಮಾಡುವಂತೆ ಶಿಕ್ಷಕ ಸಮುದಾಯಕ್ಕೆ ಮನವಿ ಮಾಡಿದರು.
ಕಷ್ಟಕ್ಕೆ ಸ್ಪಂದಿಸುವ ಭರವಸೆ
ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ತಾವು ಇದೇ ಊರಿನವನಾಗಿದ್ದು ಸದಾ ನಿಮ್ಮ ಕೈಗೆ ಸಿಗುವಂತಹ ವ್ಯಕ್ತಿ. ನಿಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗಿಯಾಗಲು ಮತ್ತೊಮ್ಮೆ ನನಗೆ ನಿಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಗೆಲ್ಲಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಬಿಜೆಪಿ ಮುಖಂಡ ದೇವನಹಳ್ಳಿ ವೇಣುಗೋಪಾಲ್, ಶಿಡ್ಲಘಟ್ಟ ಮಾಜಿ ಶಾಸಕ ರಾಜಣ್ಣ, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.