ಡಿಕೆಶಿ ಹೇಳಿಕೆ ತಿರುಚಿ ಅಲ್ಲೋಲ ಕಲ್ಲೋಲ ಸೃಷ್ಟಿ

| Published : Mar 26 2025, 01:32 AM IST

ಸಾರಾಂಶ

ಕೇಂದ್ರದ ಟಾಪ್ 10 ಮಂತ್ರಿಗಳಲ್ಲಿ ಒಬ್ಬರು ಹಿಂದುಳಿದ ವರ್ಗ, ದಲಿತರಿಲ್ಲ. 27 ಒಬಿಸಿ, ಎಸ್ಸಿ, ಎಸ್ಟಿ ಸಂಸದರಿಗೆ ಸಚಿವ ಸ್ಥಾನ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಿಜೆಪಿ ನಾಯಕರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ತಿರುಚಿ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಂವಿಧಾನ ರಚನಾ ಸಮಿತಿಗೆ ಡಾ. ಅಂಬೇಡ್ಕರ್ ಅಧ್ಯಕ್ಷರಾದಾಗ ವಿರೋಧಿಸಿದವರು ಯಾರು? ದೇಶಕ್ಕೆ ಸಂವಿಧಾನ ಸಮರ್ಪಿಸಿದಾಗ ವಿರೋಧಿಸಿದವರು ಯಾರು? ಸಂವಿಧಾನ ಬದಲಿಸಲು ನಾವು ಬಂದಿರುವುದು ಹೇಳಿದ್ದು ಬಿಜೆಪಿ ಸಂಸದರಾಗಿದ್ದ ಅನಂತಕುಮಾರ್ ಹೆಗಡೆ. ಪಾರ್ಲಿಮೆಂಟಿನಲ್ಲಿ ಅಂಬೇಡ್ಕರ್ ಮೇಲಿನ ಅಸಹನೆ ಹೊರಹಾಕಿದ್ದು ಗೃಹ ಮಂತ್ರಿ ಅಮಿತ್ ಶಾ ಎಂದು ಅವರು ವಾಗ್ದಾಳಿ ನಡೆಸಿದರು.

ಡಿ.ಕೆ. ಶಿವಕುಮಾರ್ ಅವರು ಸಂವಿಧಾನದ ಪರಿಮಿತಿಯಲ್ಲಿ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಸಂವಿಧಾನದಲ್ಲಿ ಎದುರಾಗುವ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಸಂವಿಧಾನ ತಿದ್ದುಪಡಿ ಮಾಡಬಹುದು. ಬದಲಿಸಲು ಅವಕಾಶ ಇಲ್ಲ ಎಂದರು.

ಕೇಂದ್ರದ ಟಾಪ್ 10 ಮಂತ್ರಿಗಳಲ್ಲಿ ಒಬ್ಬರು ಹಿಂದುಳಿದ ವರ್ಗ, ದಲಿತರಿಲ್ಲ. 27 ಒಬಿಸಿ, ಎಸ್ಸಿ, ಎಸ್ಟಿ ಸಂಸದರಿಗೆ ಸಚಿವ ಸ್ಥಾನ ನೀಡಲಾಗಿದೆ. ಇವರು ಕ್ಯಾಬಿನೆಟ್ ಸಚಿವರಲ್ಲ. ರಾಜ್ಯ ಸಚಿವರಾಗಿದ್ದಾರೆ. ಪ್ರಧಾನಿ ಕಚೇರಿಯ 112 ಐಎಎಸ್ ಅಧಿಕಾರಿಗಳು ಒಂದೇ ಸಮುದಾಯದವರಿದ್ದಾರೆ. ಇದಕ್ಕೆ ಉತ್ತರ ಕೊಡುವಂತೆ ಅವರು ಸವಾಲು ಹಾಕಿದರು.

ಅಲ್ಪಸಂಖ್ಯಾತರಿಗೆ ಶೇ.4 ಕೊಡಲು ತೀರ್ಮಾನಿಸಲಾಗಿದೆ. ಧರ್ಮದ ಆಧಾರದಲ್ಲಿ ಮೀಸಲು ಕೊಡುತ್ತಿಲ್ಲ. ಬಿಜೆಪಿಯವರು ಇದರ ವಿರುದ್ಧ ಕೋರ್ಟ್‌ ಗೆ ಹೋಗುವುದಾಗಿ ಹೇಳಿದ್ದಾರೆ. ಬಳಿಕ ತೀರ್ಮಾನ ಮಾಡಲಾಗುತ್ತದೆ ಎಂದರು.

ಆರ್. ಅಶೋಕ ಆರೋಗ್ಯ ಪರೀಕ್ಷಿಸಿಕೊಳ್ಳಲಿ

ವಿಪಕ್ಷ ನಾಯಕ ಆರ್.ಅಶೋಕ್ ಅವರು ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಲಿ. ಅಶೋಕ್ ಅವರ ದೇಹದಲ್ಲಿ ಬದಲಾವಣೆ ಕಾಣುತ್ತಿದ್ದು, ಆರೋಗ್ಯ ಪರೀಕ್ಷಿಸಿಕೊಂಡರೆ ಒಳ್ಳೆಯದು. ಶಾಸಕ ಮುನಿರತ್ನ ಬಳಿ ಹನಿಟ್ರ್ಯಾಪ್, ಸಿಡಿ ಕಂಪನಿ ಇದೆ. ಮಹಿಳೆಯರ ಮೂಲಕ ಎಚ್‌ಐವಿ ಇಂಜೆಕ್ಷನ್ ಹಾಕಲಾಗಿದೆ ಎಂದು ಹೇಳುತ್ತಾರೆ. ಹೀಗಾಗಿ, ಅಶೋಕ್ ಅವರು ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು ಎಂದು ಅವರು ಕುಟುಕಿದರು.

ಬಾಂಬೆ ಬಾಯ್ಸ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಯಾಕೇ ಕೋರ್ಟ್‌ ನಿಂದ ಸ್ಟೇ ತಂದಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಎನ್. ಭಾಸ್ಕರ್, ಕೆ. ಮಹೇಶ್, ಗಿರೀಶ್ ಇದ್ದರು.