ಬಜೆಟ್ ಗಾತ್ರ ಹೆಚ್ಚಿಸಿಕೊಳ್ಳಲು ನಗರಸಭೆ ಕಸರತ್ತು

| Published : Sep 24 2024, 01:46 AM IST

ಬಜೆಟ್ ಗಾತ್ರ ಹೆಚ್ಚಿಸಿಕೊಳ್ಳಲು ನಗರಸಭೆ ಕಸರತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕೇಂದ್ರವಾದ ಮೇಲೆ ಕೊಪ್ಪಳ ನಗರ ದಿನೇ ದಿನೇ ಬೆಳೆಯುತ್ತಿದ್ದರೂ ನಗರಸಭೆಯ ಬಜೆಟ್ ಗಾತ್ರ ಮಾತ್ರ ಹೆಚ್ಚಳವಾಗುತ್ತಲೇ ಇಲ್ಲ. ಹೀಗಾಗಿ ಈಗ ಸೋರಿಕೆಯಾಗುತ್ತಿರುವ ತೆರಿಗೆ ತಡೆದು, ಬಜೆಟ್ ಗಾತ್ರ ಹೆಚ್ಚಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ.

ಸೋರಿಕೆಯಾಗುತ್ತಿರುವ ತೆರಿಗೆ ವಸೂಲಿಗೆ ಕ್ರಮ

ಫುಟ್‌ಪಾತ್ ಗಳಲ್ಲಿರುವ ಅಂಗಡಿಗಳ ಲೆಕ್ಕಾಚಾರ

₹3 ಕೋಟಿಯಿಂದ ₹15 ಕೋಟಿಗೆ ಹೆಚ್ಚಿಸಿಕೊಳ್ಳಲು ಚಿಂತನೆ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲಾ ಕೇಂದ್ರವಾದ ಮೇಲೆ ಕೊಪ್ಪಳ ನಗರ ದಿನೇ ದಿನೇ ಬೆಳೆಯುತ್ತಿದ್ದರೂ ನಗರಸಭೆಯ ಬಜೆಟ್ ಗಾತ್ರ ಮಾತ್ರ ಹೆಚ್ಚಳವಾಗುತ್ತಲೇ ಇಲ್ಲ. ನಿರ್ವಹಣೆಗಾಗಿ ಮಾಡುವ ವೆಚ್ಚ ಹೆಚ್ಚಾದರೂ ಬರುವ ಆದಾಯ ಮಾತ್ರ ಅಷ್ಟೇ ಇದೆ. ಹೀಗಾಗಿ ಈಗ ಸೋರಿಕೆಯಾಗುತ್ತಿರುವ ತೆರಿಗೆ ತಡೆದು, ಬಜೆಟ್ ಗಾತ್ರ ಹೆಚ್ಚಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ.

ನಗರದಲ್ಲಿರುವ ಬಹುತೇಕ ವಾಣಿಜ್ಯ ಮಳಿಗೆಗಳಿಂದ ತೆರಿಗೆಯೇ ಬರುತ್ತಿಲ್ಲ. ಇರುವ ಅಂಗಡಿಗಳ ಮಾಹಿತಿ ಇಲ್ಲ. ಹೀಗಾಗಿ, ಇದು ದೊಡ್ಡ ಸೋರಿಕೆಗೆ ಕಾರಣವಾಗಿದೆ.

ಇದನ್ನು ಈಗಾಗಲೇ ಪತ್ತೆ ಮಾಡುವ ಕಾರ್ಯ ಭರದಿಂದ ನಡೆಯುತ್ತಿದ್ದು, ಜೊತೆಗೆ ನೋಟಿಸ್ ಸಹ ನೀಡಲಾಗುತ್ತಿದೆ.

ಎಷ್ಟು ವರ್ಷಗಳಿಂದ ನೀವು ಅಂಗಡಿ ನಡೆಸುತ್ತಿದ್ದೀರಿ, ಇದುವರೆಗೂ ಯಾಕೆ ನಗರಸಭೆ ತೆರಿಗೆ ಪಾವತಿ ಮಾಡುತ್ತಿಲ್ಲ ಎನ್ನುವುದು ಸೇರಿದಂತೆ ಹಲವಾರು ಪ್ರಶ್ನೆಗಳೊಂದಿಗೆ ತೆರಿಗೆ ವಸೂಲಿಗೆ ನಗರಸಭೆ ಕಠಿಣ ಕ್ರಮಕ್ಕೆ ಮುಂದಾಗಿದೆ.ಮಹಡಿ ಮನೆಗಳ ಮೇಲೆ ಕಣ್ಣು:

ನಗರದಲ್ಲಿ 1, 2, 3 ಅಂತಸ್ತಿನ ಮನೆಗಳು ಇದ್ದರೂ ಸಹ ತೆರಿಗೆಯನ್ನು ನೆಲಮಹಡಿ ಮನೆಗೆ ಮಾತ್ರ ಪಾವತಿ ಮಾಡಲಾಗುತ್ತದೆ. ಬಹುತೇಕರು ತಮ್ಮ ಮಹಡಿ ಮನೆಯ ಮಾಹಿತಿಯನ್ನೇ ನಗರಸಭೆಗೆ ನೀಡಿಲ್ಲ,

ನಗರಸಭೆ ಪ್ರಾಥಮಿಕ ಮಾಹಿತಿಯ ಪ್ರಕಾರ ಶೇ. 10ರಷ್ಟು ಮಹಡಿ ಮನೆಗಳ ಮಾಹಿತಿಯನ್ನು ನಗರಸಭೆಗೆ ನೀಡಿಲ್ಲ. ಕಟ್ಟಡ ಪರವಾನಿಗೆ ಪಡೆದಿಲ್ಲ.

ಇದೆಲ್ಲವನ್ನು ನೂತನ ಅಧ್ಯಕ್ಷ ಅಮ್ಜಾದ್ ಪಟೇಲ್ ಪಕ್ಕಾ ಲೆಕ್ಕಾ ಮಾಡುತ್ತಿದ್ದಾರೆ. ಮಹಡಿ ಮನೆಯ ಲೆಕ್ಕಾಚಾರದಲ್ಲಿಯೇ ನಗರಸಭೆಗೆ ಕೋಟಿ ಕೋಟಿ ಆದಾಯ ಬರುತ್ತದೆ. ಅಷ್ಟೇ ಅಲ್ಲ, ಪರವಾನಿಗೆ ಇಲ್ಲದೆ ನಿರ್ಮಾಣ ಮಾಡಿರುವುದರಿಂದ ಒಂದು ಬಾರಿ ವಿಶೇಷ ಅನುಮತಿ ನೀಡಿ, ತೆರಿಗೆ ವ್ಯಾಪ್ತಿಗೆ ತರಲು ಚಿಂತನೆ ನಡೆಸಿದ್ದಾರೆ.ಸರ್ಕಾರಿ ಕಟ್ಟಡಗಳ ಮೇಲೆ ನಿಗಾ:

ಸರ್ಕಾರಿ ಕಟ್ಟಡಗಳು ಸಹ ನಗರಸಭೆ ತೆರಿಗೆ ಪಾವತಿ ಮಾಡಬೇಕು. ಆದರೆ, ಬಹುತೇಕ ಸರ್ಕಾರಿ ಕಟ್ಟಡಗಳಲ್ಲಿ ಕಚೇರಿಗಳು ಇದ್ದರೂ ಸಹ ನಗರಸಭೆಯ ತೆರಿಗೆ ಪಾವತಿಯೇ ಮಾಡುತ್ತಿಲ್ಲ. ಹೀಗೆ, ಹತ್ತಾರು ಕಡೆ ಸೋರಿಕೆಯನ್ನು ಪತ್ತೆ ಮಾಡಿದರೆ ಕೊಪ್ಪಳ ನಗರಸಭೆಯ ಬಜೆಟ್ ಗಾತ್ರ ₹3 ಕೋಟಿಯಿಂದ ಹದಿನೈದು ಕೋಟಿಗೆ ತಲುಪುತ್ತದೆ.ನಲ್ಲಿ ಬಿಲ್ಲು:

ಪ್ರತಿ ಮನೆಗೂ ನಲ್ಲಿ ಇದ್ದರೂ ನಲ್ಲಿ ಬಿಲ್ಲು ಮಾತ್ರ ಬಹುತೇಕರು ಪಾವತಿ ಮಾಡುವುದೇ ಇಲ್ಲ. ಎರಡು ಮೂರು ಮನೆಗಳು ಇದ್ದರೂ ನಲ್ಲಿ ಬಿಲ್ಲು ಮಾತ್ರ ಒಂದೇ ಪಾವತಿ ಮಾಡುತ್ತಾರೆ. ಇಂಥ ಸೋರಿಕೆ ಸಹ ಪತ್ತೆ ಮಾಡಲಾಗುತ್ತಿದೆ. ಇದೆಲ್ಲವನ್ನು ಲೆಕ್ಕ ಹಾಕಿದರೆ ಕೊಪ್ಪಳ ನಗರಸಭೆಯ ಆದಾಯ ಏರಿಕೆಯಾಗಲಿದೆ.

ಇದೆಲ್ಲಕ್ಕಿಂತ ಮಿಗಿಲಾಗಿ ಫುಟ್‌ಪಾತ್ ಮೇಲೆ ಸೇರಿದಂತೆ ಹಲವು ಸರ್ಕಾರಿ ಜಾಗೆಯಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ಭರ್ಜರಿ ವ್ಯಾಪಾರ ಮಾಡುತ್ತಿದ್ದರೂ ತೆರಿಗೆ ಪಾವತಿ ಮಾಡುತ್ತಿಲ್ಲ. ಇವೆಲ್ಲವನ್ನು ಸಹ ಗುರುತಿಸುವ ಕಾರ್ಯ ನಡೆದಿದೆ.

ನಗರಸಭೆ ಆದಾಯ ಬಹುವರ್ಷಗಳಿಂದ ಏರಿಕೆಯಾಗುತ್ತಲೇ ಇಲ್ಲ. ಬಹುತೇಕ ಸೋರಿಕೆಯಾಗುತ್ತಿದ್ದು, ಅದನ್ನು ತಡೆಗಟ್ಟಿ ನಗರಸಭೆ ಬಜೆಟ್‌ ಗಾತ್ರವನ್ನು ₹15 ಕೋಟಿಗೆ ಏರಿಕೆ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಅಮ್ಜಾದ್ ಪಟೇಲ್ ತಿಳಿಸಿದ್ದಾರೆ.