ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಜಿಲ್ಲಾ ಯುವ ಕಾಂಗ್ರೆಸ್ ನಲ್ಲೂ ಎರಡು ಗುಂಪುಗಳಿದ್ದು, ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿದ ಘಟನೆ ಭಾನುವಾರ ರಾತ್ರಿ ನಗರದ ಸರ್ವಜ್ಞ ಸಮೀಪದಲ್ಲಿ ಆಯೋಜಿಸಿದ್ದ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನಡೆದಿದೆ.ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಮಾಡಿರುವ ಮತಗಳವು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಇವಿಎಂ ವಂಚನೆಯ ಆರೋಪದಡಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ನಗರಕ್ಕೆ ಆಹ್ವಾನಿಸಲಾಗಿತ್ತು.
ಈ ವೇಳೆ ಕಾರ್ಯಕ್ರಮದ ಪ್ರಚಾರಕ್ಕೆ ಅಳವಡಿಸಿರುವ ಬ್ಯಾನರ್, ಫ್ಲೆಕ್ಸ್ ಗಳ ವಿಚಾರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಫಿದ್ ಬೆಂಬಲಿಗರು ಹಾಗೂ ಮಾಲೂರಿನ ಶಾಸಕ ಕೆ.ವೈ.ನಂಜೇಗೌಡರ ಪುತ್ರ ಸುನಿಲ್‌ಗೌಡ ಬೆಂಬಲಿಗರ ನಡುವೆ ಜಟಾಪಟಿ ಉಂಟಾಯಿತು.ನಗರದ ಬಂಗಾರಪೇಟೆ ರಸ್ತೆಯಲ್ಲಿ ಬೈರೇಗೌಡ ನಗರದಿಂದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್‌ರನ್ನು ಕರೆತರಲು ಸುನೀಲ್‌ಗೌಡ ಮತ್ತು ಅವರ ಬೆಂಬಲಿಗರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಇದಕ್ಕೂ ಮುನ್ನ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಫಿದ್ ಮತ್ತು ಅವರ ಬೆಂಬಲಿಗರು ಇಟಿಸಿಎಂ ವೃತ್ತದಿಂದ ರಾಜ್ಯಾಧ್ಯಕ್ಷರನ್ನು ಕರೆತರಲು ಸಮಿತಿಯ ನಿರ್ಣಯದಂತೆ ಪೊಲೀಸರ ಅನುಮತಿ ಪಡೆದಿದ್ದರು.
ಆದರೆ ಏಕಾಏಕಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ನಂಜೇಗೌಡರ ಪುತ್ರ ಸುನೀಲ್‌ಗೌಡ ಇಟಿಸಿಎಂ ವೃತ್ತದಿಂದ ಸರ್ವಜ್ಞ ಉದ್ಯಾನದವರೆಗೆ ಇದ್ದ ಮೆರವಣಿಗೆ ಮಾರ್ಗವನ್ನು ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರ ಗಮನಕ್ಕೆ ತರದೆ ಇಟಿಸಿಎಂ ವೃತ್ತದಿಂದ ಬೈರೇಗೌಡ ನಗರದವರೆಗೆ ವಿಸ್ತರಿಸಿದರು.ಇದುವೇ ಅಫಿದ್ ಮತ್ತು ಸುನೀಲ್ ನಂಜೇಗೌಡ ನಡುವೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿತ್ತು, ಅಲ್ಲದೆ ಫ್ಲೆಕ್ಸ್ ಗಳಲ್ಲಿ ಸುನಿಲ್ ನಂಜೇಗೌಡರ ಕಡೆಯವರು ಮತ್ತು ಅಫಿದ್ ಕಡೆಯವರು ಭಾವಚಿತ್ರಗಳ ವಿಚಾರವಾಗಿ ಹಾಗೂ ಪ್ಲೆಕ್ಸ್ ಗಳನ್ನು ಹಾಕಿಸಿರುವ ಸ್ಥಳಗಳ ಬಗ್ಗೆಯೂ ಮನಸ್ತಾಪಗಳು ಭುಗಿಲೆದ್ದು, ಎರಡುಗಳ ಗುಂಪುಗಳು ಎದುರು ಬದುರಾದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಪೊಲೀಸರ ಮಧ್ಯ ಪ್ರವೇಶದಿಂದ ಘರ್ಷಣೆಯೊಂದು ತಪ್ಪಿದಂತಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಫಿದ್ ಮಾತನಾಡಿ, ತಾನು ಶಾಸಕರ ಮಗ ಎಂಬ ಅಹಂನಿಂದ ಶಿಷ್ಟಾಚಾರ ಉಲ್ಲಂಘಿಸಿದ್ದಲ್ಲದೇ ತಾನು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮೇಲೆ ದಬ್ಬಾಳಿಕೆ ಮಾಡಲು ಮುಂದಾಗಿರುವುದು ಸಮಂಜಸವಲ್ಲ. ನಿರ್ಣಯಗಳನ್ನು ಏಕಾಏಕಿ ಉಲ್ಲಂಘಿಸುವ ಮೂಲಕ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಕನಿಷ್ಠ ಜಿಲ್ಲಾ ಸಮಿತಿಯ ಗಮನಕ್ಕೆ ತಾರದೆ ಏಕಾಏಕಿ ಮೆರವಣಿಗೆ ಕಾರ್ಯಕ್ರಮದಲ್ಲಿ ಗೊಂದಲ ಮಾಡಿದ್ದಾರೆ. ನಾವು ಈಗಾಗಲೇ ಪೂರ್ವ ಭಾವಿ ಸಿದ್ಧತೆಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಆದರೆ ಅವರು ತಮ್ಮ ತಂದೆ ಶಾಸಕ ನಂಜೇಗೌಡರಿಂದ ಒತ್ತಡ ಹೇರಿ ಅನಧೀಕೃತವಾಗಿ ಮೆರವಣಿಗೆ ಮಾರ್ಗ ಬದಲಾಯಿಸಿರುವುದು ಎಲ್ಲರಿಗೂ ಬೇಸರ ಉಂಟಾಗಿದೆ ಎಂದು ದೂರಿದರು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನೀಲ್ ಗೌಡ ಈ ಆರೋಪಗಳಿಗೆ ಪ್ರತಿಕ್ರಿಯಿಸಿ, ತಾನು ರಾಜ್ಯ ಪದಾಧಿಕಾರಿಯಾಗಿದ್ದು, ನಾನು ಇದೇ ಜಿಲ್ಲೆಯವನಾಗಿದ್ದು, ನನಗೆ ನಮ್ಮ ಜಿಲ್ಲೆಯಲ್ಲಿ ಮೆರವಣಿಗೆ ನಡೆಸಲು ಹಕ್ಕು ಇಲ್ಲವೇ? ನಮ್ಮ ಪಕ್ಷದ ಕಾರ್ಯಕ್ರಮ ಅದ್ಧೂರಿಯಾಗಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಯುವ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿರುವೆ. ರಾಜ್ಯಾಧ್ಯಕ್ಷರಿಗೆ ಜಿಲ್ಲಾ ಯುವ ಕಾಂಗ್ರೆಸ್ ಶಕ್ತಿ ಪ್ರದರ್ಶನ ತೋರಿಸಬೇಕೆಂಬ ದೆಸೆಯಲ್ಲಿ ನಾನು ಅವರಿಗೆ ತೊಂದರೆ ನೀಡದೆ ಅವರು ನಿಗಧಿಪಡಿಸಿದ್ದ ಇಟಿಸಿಎಂ ವೃತ್ತದಿಂದ ಸ್ವಲ್ಪವೇ ದೂರದಲ್ಲಿನ ಬೈರೇಗೌಡರ ನಗರದವರೆಗೂ ಅದ್ಧೂರಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದೆ. ಹೊರತಾಗಿ ಇದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.ಕೆಲವರು ವಿನಾಕಾರಣ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಈ ಕುರಿತು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಸ್ಪಷ್ಟನೆ ನೀಡಲಿದ್ದಾರೆ, ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ, ನಾವೆಲ್ಲಾ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್‌ಗಾಂಧಿ ಕೈಬಲಪಡಿಸುವ ಕೆಲಸ ಮಾಡುತ್ತೇವೆ ಎಂದರು.
ಆದರೂ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಫಿದ್ ಬೆಂಬಲಿಗರು ತಮಗೆ ವಿರೋಧ ವ್ಯಕ್ತಪಡಿಸಿದರೆಂಬ ಬೇಸರಕ್ಕೆ ವೇದಿಕೆ ಕಾರ್ಯಕ್ರಮಕ್ಕೆ ಹೋಗದೆ ಪ್ರತ್ಯೇಕವಾಗಿ ಕೋಲಾರದಲ್ಲಿಯೇ ಅಥವಾ ಮಾಲೂರಿನಲ್ಲಿ ಕಾರ್ಯಕ್ರಮ ಆಯೋಜಿಸೋಣ ಎಂದು ಸುನೀಲ್ ಗೌಡರ ಮೇಲೆ ಒತ್ತಡ ಹೇರಿದ ಮಾಲೂರಿನ ಬೆಂಬಲಿಗರು ಅವರನ್ನು ವಾಪಸ್ ಕರೆದುಕೊಂಡು ಹೋದರು.