ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಸೇರಿ ಇನ್ನಿತರ ರಾಜಸ್ವ ಸಂಗ್ರಹದಲ್ಲಿ ಏರಿಕೆ ಕಂಡಿದ್ದು, ಆದರೂ ತೆರಿಗೆ ಸೋರಿಕೆ ಪತ್ತೆ ಹಚ್ಚಿ ಅದಕ್ಕೆ ಪರಿಹಾರ ಕಂಡುಕೊಂಡು 2024-25ರ ಅಂತ್ಯದೊಳಗೆ ತೆರಿಗೆ ಸಂಗ್ರಹ ಗುರಿ ತಲುಪುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಮುದ್ರಾಂಕ ಮತ್ತು ನೋಂದಣಿ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ತೆರಿಗೆ ಸಂಗ್ರಹದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆದಾಯ ಸಂಗ್ರಹಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ತಿಳಿಸಿದರು.
2024-25ನೇ ಸಾಲಿನಲ್ಲಿ ಒಟ್ಟು 84,475 ಕೋಟಿ ರು. ವಾಣಿಜ್ಯ ತೆರಿಗೆ ಸಂಗ್ರಹದ ಗುರಿಯಿದ್ದು, ನವೆಂಬರ್ ತಿಂಗಳ ಅಂತ್ಯದವರೆಗೆ 53,103 ಕೋಟಿ ರು. ವಾಣಿಜ್ಯ ತೆರಿಗೆ ಸಂಗ್ರಹಿಸಲಾಗಿದೆ. ಆದರೆ, ಮಲೆನಾಡು ಮತ್ತು ಮೈಸೂರು ವಿಭಾಗದಲ್ಲಿ ತೆರಿಗೆ ಸಂಗ್ರಹ ನಿಗದಿತ ಗುರಿಗಿಂತ ಕಡಿಮೆಯಿದೆ. ಅಲ್ಲಿನ ಸಮಸ್ಯೆಯನ್ನು ಪತ್ತೆ ಮಾಡಿ ನಿಗದಿಯಂತೆ ತೆರಿಗೆ ಸಂಗ್ರಹಿಸಬೇಕು. ಅಲ್ಲದೆ, ಎಲ್ಲ ವಿಭಾಗಗಳು 2025ರ ಮಾರ್ಚ್ ಅಂತ್ಯದೊಳಗೆ ನಿಗದಿಯಂತೆ ತೆರಿಗೆ ಸಂಗ್ರಹ ಮಾಡಬೇಕು ಎಂದು ಹೇಳಿದರು.
2023-24ನೇ ಸಾಲಿನಲ್ಲಿ ಒಟ್ಟು 70,575 ಕೋಟಿ ರು. ವಾಣಿಜ್ಯ ತೆರಿಗೆ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ತೆರಿಗೆ ಸಂಗ್ರಹದಲ್ಲಿ ಭಾರೀ ಹೆಚ್ಚಳವಾಗಿದೆ. ಆದರೂ, ವಿಜಿಲೆನ್ಸ್ ಹೆಚ್ಚಿಸಿ, ಸೋರಿಕೆ ಪತ್ತೆ ಮಾಡಿ ತೆರಿಗೆ ಸಂಗ್ರಹ ಹೆಚ್ಚಿಸಬೇಕು. ಅಲ್ಲದೆ, ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಶೇ. 15ರ ಬೆಳವಣಿಗೆ ದರ ಸಾಧಿಸಿದ್ದು, ನವೆಂಬರ್ ಅಂತ್ಯದವರೆಗೆ 13,722 ಕೋಟಿ ರು. ಜಿಎಸ್‌ಟಿ ಸಂಗ್ರಹಿಸಲಾಗಿದೆ. ಆಮೂಲಕ ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. ಅದನ್ನು ಮುಂದುವರಿಸುವಂತೆ ಹೇಳಿದರು.
2024-25ನೇ ಸಾಲಿನಲ್ಲಿ 38,525 ಕೋಟಿ ರು. ಅಬಕಾರಿ ರಾಜಸ್ವ ಸಂಗ್ರಹದ ಗುರಿಯಿದ್ದು, ನವೆಂಬರ್ ಅಂತ್ಯಕ್ಕೆ 23,600 ಕೋಟಿ ರು. ರಾಜಸ್ವ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1,432.23 ಕೋಟಿ ರು. ಸಂಗ್ರಹಿಸಲಾಗಿದೆ. ರಾಜಸ್ವ ಸಂಗ್ರಹ ಹೆಚ್ಚಿಸಲು ಜಾಗೃತ ದಳ ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದ ಸಿದ್ದರಾಮಯ್ಯ, ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಉಳಿದಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಸಕ್ತ ಸಾಲಿನಲ್ಲಿ 26 ಸಾವಿರ ಕೋಟಿ ರು. ಸಂಗ್ರಹದ ಗುರಿ ಹೊಂದಿದ್ದು, ನವೆಂಬರ್ ಕೊನೆಗೆ 15,160.97 ಕೋಟಿ ರು. ರಾಜಸ್ವ ಸಂಗ್ರಹಿಸಲಾಗಿದೆ. ನಿಗದಿತ ಗುರಿ ತಲುಪಲು ಕಾನೂನು ಬಾಹಿರ ನೋಂದಣಿಗೆ ಕಡಿವಾಣ ಹಾಕಬೇಕು. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕು ಹಾಗೂ ಇ-ಖಾತಾ ನೀಡುವ ಪ್ರಕ್ರಿಯೆಯಲ್ಲಿನ ತೊಡಕು ನಿವಾರಿಸುವಂತೆ ನಿರ್ದೇಶಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 9 ಸಾವಿರ ಕೋಟಿ ರು. ರಾಜಸ್ವದ ಗುರಿಯಿದ್ದು, ಈವರೆಗೆ 4,862 ಕೋಟಿ ರು. ರಾಜಸ್ವ ಸಂಗ್ರಹವಾಗಿದೆ. ಅದನ್ನು ಹೆಚ್ಚಿಸಲು ಖನಿಜ ಹಕ್ಕು ತೆರಿಗೆ ಅಧಿನಿಯಮ ಜಾರಿಗೊಳಿಸಬೇಕು ಹಾಗೂ ಅರಣ್ಯ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.