ಸಾರಾಂಶ
ಮೆರವಣಿಗೆ ಆಕರ್ಷಕ, ವೈಭವದಿಂದ ಆಯೋಜಿಸಲು ಸಲಹೆ । ಕನ್ನಡ ಭಾಷೆಯನ್ನು ಮೆರೆಸುವುದು ಮುಖ್ಯ ಗುರಿಯಾಗಿರಲಿ
ಕನ್ನಡಪ್ರಭ ವಾರ್ತೆ ಮಂಡ್ಯ‘ಸಕ್ಕರೆ ನಗರ’ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ವರ್ಣರಂಜಿತ ಆರಂಭ ನೀಡಲಾಗುವುದು ಎಂದು ಮೆರವಣಿಗೆ ಸಮಿತಿ ಅಧ್ಯಕ್ಷರೂ ಆದ ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ‘ಮೆರವಣಿಗೆ ಸಮಿತಿ’ ಸಭೆ ನಡೆಸಿ ಮಾತನಾಡಿ, ಸಮ್ಮೇಳನಾಧ್ಯಕ್ಷರಿಗೆ ಗೌರವ ಸಲ್ಲಿಸುವುದೆಂದರೆ ಕನ್ನಡ ನಾಡು- ನುಡಿ, ಸಾಹಿತ್ಯಕ್ಕೆ ಗೌರವ ಸಲ್ಲಿಸಿದಂತೆ. ಹಾಗಾಗಿ, ಮೆರವಣಿಗೆಯನ್ನು ಯಾವುದೇ ಲೋಪವಿಲ್ಲದಂತೆ ಅರ್ಥಪೂರ್ಣ, ಆಕರ್ಷಕ ಮತ್ತು ವೈಭವಯುತವಾಗಿ ಆಯೋಜಿಸಬೇಕು. ಮೆರವಣಿಗೆಯ ಯಶಸ್ಸೇ ಸಮ್ಮೇಳನದ ಯಶಸ್ಸು ಕೂಡ ಆಗಲಿದೆ. ಎಂದು ಹೇಳಿದರು.
ಮೆರವಣಿಗೆ ಆರಂಭ:ನಗರದ ಸರ್ ಎಂ.ವಿಶ್ವೇಶ್ವರಯ್ಯರವರ ಪ್ರತಿಮೆ ಮುಂಭಾಗದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಿಸಬೇಕು. ಆರಂಭ ಸ್ಥಳದಿಂದ ಮುಖ್ಯ ವೇದಿಕೆವರೆಗೆ ಸುಮಾರು 6 ಕಿ.ಮೀ ದೂರವಿದ್ದು, ಕ್ರಮಿಸಲು 3 ರಿಂದ 4 ಗಂಟೆ ಸಮಯ ತೆಗೆದುಕೊಳ್ಳಲಿದೆ. ಕನ್ನಡ ಭಾಷೆಯನ್ನು ಮೆರೆಸುವಂತೆ ಮೆರವಣಿಗೆ ಇರಲಿದ್ದು ಸಂಪೂರ್ಣ ಕನ್ನಡಮಯವಾಗಿರಲಿದೆ. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿ ಕನ್ನಡ ಬಾವುಟಗಳಿಂದ ಸಿಂಗಾರ ಮಾಡುವುದು ಹಾಗೂ ಕುಡಿಯುವ ನೀರು, ಕಬ್ಬಿನ ರಸ, ಮಜ್ಜಿಗೆ ಹಾಗೂ ಪಾನಕ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಕಲಾತಂಡಗಳಿಗೆ ಆದ್ಯತೆ:ಕನ್ನಡದ ಅಸ್ಮಿತೆ ಸಾರುವಂತೆ ಸಮ್ಮೇಳಾನಾಧ್ಯಕ್ಷರ ರಥ ಅಲಂಕರಿಸಲಾಗುವುದು. ಮೆರವಣಿಗೆಯಲ್ಲಿ ಮಂಡ್ಯ ಜಿಲ್ಲೆ, ಹೊರ ಜಿಲ್ಲೆ, ಗಡಿನಾಡು ಜಿಲ್ಲೆ ಹಾಗೂ ಹೊರ ರಾಜ್ಯಗಳ ಕಲಾತಂಡಗಳಿಗೂ ಅವಕಾಶ ಕಲ್ಪಿಸಲಾಗುವುದು. ಕೀಲು ಕುದುರೆ, ಕರಡಿ ಮಜಲು, ಪೂಜಾ ಕುಣಿತ, ಚಂಡೆ ಕುಣಿತ, ತಮಟೆ, ಡೊಳ್ಳು ಕುಣಿತ, ಕೊಂಬು ಕಹಳೆ ಸೇರಿ ವಿವಿಧ ಪ್ರಕಾರಗಳ ಜನಪದ ಕಲಾವಿದರ ದಂಡು ಮೆರವಣಿಗೆಗೆ ಉತ್ಸಾಹ ಮತ್ತು ಶಕ್ತಿ ತುಂಬಲಿದ್ದು, ಜನಪದ ಶ್ರೀಮಂತಿಕೆಯನ್ನು ಬಿಂಬಿಸಲಿವೆ. ಸ್ಕೌಟ್ಸ್ ಮತ್ತು ಎನ್.ಎಸ್.ಎಸ್. ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.
ಸ್ತಬ್ಧಚಿತ್ರ ಮೆರವಣಿಗೆ:ಮೈಸೂರು ದಸರಾ ಮಾದರಿಯಲ್ಲೇ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲೂ ಸ್ತಬ್ಧಚಿತ್ರಗಳು ಇರಬೇಕು. ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಹಾಗೂ ಕನ್ನಡ ನಾಡು, ನುಡಿ, ಸಂಸ್ಕೃತಿ, ಶಿಲ್ಪಕಲೆ, ಸ್ಥಳೀಯ ಸಂಸ್ಕೃತಿ ಬಿಂಬಿಸುವಂತೆ, ಸ್ತಬ್ಧಚಿತ್ರಗಳನ್ನು ಕಳುಹಿಸಿಕೊಡುವಂತೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಅಲ್ಲದೆ, ಪ್ರತಿ ತಾಲೂಕುಗಳ ವಿಶೇಷತೆ, ಸಂಸ್ಕೃತಿ ಬಿಂಬಿಸುವಂತೆ ತಲಾ ಒಂದು ಸ್ತಬ್ಧಚಿತ್ರ ಏರ್ಪಾಡು ಮಾಡುವ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
ಪೂರ್ಣಕುಂಭ:ಪೂರ್ಣಕುಂಭವು ಮೆರವಣಿಗೆಯಲ್ಲಿ 6 ಕಿ.ಮೀ ಕ್ರಮಿಸಬೇಕಿದೆ. ಸುಮಾರು 870 ಮಹಿಳೆಯರು ಪೂರ್ಣಕುಂಭದೊಂದಿಗೆ ಅಷ್ಟೂ ದೂರದವರೆಗೆ ಸಾಗುವುದು ಕಷ್ಟ. ಹಾಗಾಗಿ, ಮೂರು ತಂಡಗಳನ್ನಾಗಿ ವಿಭಾಗಿಸಿ ನಿರ್ದಿಷ್ಟ ದೂರ ಕ್ರಮಿಸಿದ ನಂತರ ಬೇರೊಂದು ಪೂರ್ಣಕುಂಭ ತಂಡ ಮೆರವಣಿಗೆ ಸೇರುವಂತೆ ಏರ್ಪಾಡು ಮಾಡಬೇಕು ಎಂಬ ಸಲಹೆ ವ್ಯಕ್ತವಾಯಿತು.
ವಿದ್ಯಾರ್ಥಿಗಳೂ ಭಾಗವಹಿಸಲಿ:ಕನ್ನಡ ನಾಡು, ನುಡಿ, ಸಂಸ್ಕೃತಿ ಬಗ್ಗೆ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ತಿಳಿಸಬೇಕಿದೆ. ಹಾಗಾಗಿ, ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮತ್ತು ಕಾಲೇಜುಗಳ ಮಕ್ಕಳ ಹೆಚ್ಚಿನ ಭಾಗವಹಿಸಲು ಅನುಕೂಲ ಆಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ, ಶಿಕ್ಷಣ ಇಲಾಖೆ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಡಿ.ದೇವರಾಜ ಅರಸು ಸಂಘಟನೆಯ ಸಂದೇಶ್ ಮಾತನಾಡಿ, ಮೆರವಣಿಗೆಯು ನಗರದಲ್ಲಿ ಸಾಂಸ್ಕೃತಿಕ ವಾತಾವರಣ, ಕನ್ನಡದ ವಾತಾವರಣವನ್ನು ನಿರ್ಮಿಸುವಂತಿರಬೇಕು ಎಂದು ಹೇಳಿದರು.ಸಭೆಯಲ್ಲಿ ಐದು ಉಪ ಸಮಿತಿಗಳ ರಚನೆಗೆ ತೀರ್ಮಾನಿಸಲಾಯಿತು, ಕಲಾತಂಡಗಳ ಆಯ್ಕೆ ಸಮಿತಿ, ಸ್ತಬ್ಧಚಿತ್ರ ಆಯ್ಕೆ ಉಪ ಸಮಿತಿ, ಪೂರ್ಣಕುಂಭ ಉಪ ಸಮಿತಿ, ದೈಹಿಕ ಶಿಕ್ಷಣ ಶಿಕ್ಷಕರ ಉಪ ಸಮಿತಿ, ಶಾಲಾ- ಕಾಲೇಜು ವಿದ್ಯಾರ್ಥಿಗಳನ್ನು ಕರೆತರುವ ಉಪ ಸಮಿತಿ, ಸಮ್ಮೇಳನದ ಸಮನ್ವಯ ಸಮಿತಿಗಳಾಗಿವೆ. ಅಧ್ಯಕ್ಷರಾದ ಮೀರಾ ಶಿವಲಿಂಗಯ್ಯ, ಸಮಿತಿಯ ಸದಸ್ಯ ಕಾರ್ಯದರ್ಶಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ಕನ್ನಡ ಸೇನೆ ಮಂಜುನಾಥ್, ಜಿಲ್ಲಾ ಕಸಾಪದ ಹುಸ್ಕೂರು ಕೃಷ್ಣೇಗೌಡ, ಹರ್ಷ, ಅಪ್ಪಾಜಪ್ಪ ಹಾಗೂ ಕೀಲಾರ ಕೃಷ್ಣೇಗೌಡ, ಯೋಗಣ್ಣ, ನಾಗಮ್ಮ, ಕುಬೇರಪ್ಪ ಇತರರಿದ್ದರು.