ಸಾರಾಂಶ
ಅಧಿಕಾರಕ್ಕಾಗಿ ಎರಡೂ ಪಕ್ಷಗಳು ಆಪರೇಷನ್ ಹಸ್ತ/ಕಮಲ ಮೊರೆ! । ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಜಟಾಪಟಿ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಇಲ್ಲಿನ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಯಾಗಿದ್ದು, ಪುರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿಗೂ ಮ್ಯಾಜಿಕ್ ನಂಬರ್ ಇಲ್ಲ. ಪುರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿ ಆಪರೇಷನ್ ಕಮಲ, ಹಸ್ತ ನಡೆಯಲೇ ಬೇಕಿದೆ!
ಕಳೆದ ಅವಧಿಯ ಪುರಸಭೆಯ ಮೊದಲ ಅವಧಿಯಲ್ಲಿ 30 ತಿಂಗಳು ಕಾಲ ಅಧಿಕಾರ ಸವಿದಿದ್ದ ಬಿಜೆಪಿಗೆ ಈ ಬಾರಿಯ ಪುರಸಭೆ ಅಧಿಕಾರ ಹಿಡಿಯಲೇಬೇಕಾದ ಅನಿವಾರ್ಯತೆ ಇದೆ. ಮತ್ತೆ ಬಿಜೆಪಿ ಅಧಿಕಾರ ಹಿಡಿಯಲು ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್ ಕಸರತ್ತು ನಡೆಸುತ್ತಿದ್ದಾರೆ.ಪುರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿಲ್ಲ. ಆದರೂ ಶಾಸಕ, ಸಂಸದ ಮತ, ಎಸ್‌ಡಿಪಿಐ ಸದಸ್ಯರ ಒಂದು ಮತದ ಜತೆಗೆ ಕಾಂಗ್ರೆಸ್‌ನ 8 ಮಂದಿ ಪುರಸಭೆ ಸೇರಿ 11 ಸದಸ್ಯ ಬಲವಿದೆ. ಆದರೆ ಬಿಜೆಪಿ 13 ಮಂದಿ ಸದಸ್ಯರಲ್ಲಿ ಸದಸ್ಯರೊಬ್ಬರು ಬಿಜೆಪಿಯಿಂದ ದೂರ ಸರಿದಿರುವ ಕಾರಣ ಬಿಜೆಪಿ ಸದಸ್ಯರ ಸ್ಥಾನ 12ಕ್ಕೆ ಕುಸಿದಿದೆ. ಕಾಂಗ್ರೆಸ್‌ನಲ್ಲಿ 8 ಮಂದಿ ಕಾಂಗ್ರೆಸ್ ಸದಸ್ಯರು, ಒಬ್ಬ ಎಸ್‌ಡಿಪಿಐ ಸದಸ್ಯರ ಜತೆಗೆ ಶಾಸಕ, ಸಂಸದರ ಮತ ಸೇರಿದರೂ ಹನ್ನೊಂದಾಗಲಿದೆ.
ಪುರಸಭೆ ಅಧಿಕಾರ ಹಿಡಿಯಲು 13 ಮಂದಿ ಪುರಸಭೆ ಸದಸ್ಯರ ಮ್ಯಾಜಿಕ್ ನಂಬರ್ ಬೇಕೇ ಬೇಕು. ಪ್ರಸ್ತುತ ಪುರಸಭೆಯಲ್ಲಿ 12 ಮಂದಿ ಬಿಜೆಪಿ ಸದಸ್ಯರು, 8 ಮಂದಿ ಕಾಂಗ್ರೆಸ್ ಸದಸ್ಯರು, ಒಬ್ಬ ಎಸ್‌ಡಿಪಿಐ ಸದಸ್ಯ, ಒಬ್ಬ ಪಕ್ಷೇತರ ಸದಸ್ಯರು ಇದ್ದಾರೆ. ಬಿಜೆಪಿ ಚಿಹ್ನೆಯಡಿ ಗೆಲುವು ಸಾಧಿಸಿದ್ದ ಪುರಸಭೆ ಸದಸ್ಯ ರಮೇಶ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಕಾರಣ 13 ಸದಸ್ಯರಿದ್ದ ಬಿಜೆಪಿಯಲ್ಲಿ ಇದೀಗ 12ನೇ ಸ್ಥಾನಕ್ಕಿಳಿದಿದೆ.ಪುರಸಭೆ ಚುನಾವಣೆಯಲ್ಲಿ ಪಕ್ಷೇತರನಾಗಿ ಗೆಲುವು ಸಾಧಿಸಿದ್ದ ಪುರಸಭೆ ಸದಸ್ಯ ಪಿ.ಶಶಿಧರ್ (ದೀಪು), ಮೊದಲ ಅವಧಿಯಲ್ಲಿ ಬಿಜೆಪಿಗೆ ಜೈ ಎಂದಿದ್ದರು. 2023ರ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯಿಂದಲೂ ಒಂದು ಕಾಲು ಹೊರಗೆ ಇಟ್ಟಿದ್ದಾರೆ.
ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪುರಸಭೆಯ ಅಧಿಕಾರ ಹಿಡಿಯಲು ಆಪರೇಷನ್ ಹಸ್ತ/ಕಮಲ ನಡೆಸಬೇಕು. ಆಪರೇಷನ್ ಮಾಡದೆ ಇದ್ದರೆ ಅಧಿಕಾರ ಸಿಗುವುದಿಲ್ಲ. ಕಾಂಗ್ರೆಸ್, ಬಿಜೆಪಿ ಆಪರೇಷನ್‌ಗೆ ಇಳಿದು ತಮ್ಮ ಪ್ರಾಬಲ್ಯ ಸ್ಥಾಪಿಸಲು ಹೆಣಗಾಡುತ್ತಿವೆ.