ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಗೆಲುವು ಖಚಿತ: ಸುಂದರೇಶ್‌

| Published : Mar 16 2024, 01:47 AM IST

ಸಾರಾಂಶ

ಜಿಲ್ಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಂಘಟನೆ ಬಲವಾಗಿದೆ. ಎಲ್ಲ ನಾಯಕರು ಒಗ್ಗಟ್ಟಾಗಿ ಈ ಬಾರಿ ನಮ್ಮ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಅವರನ್ನು ಗೆದ್ದೇ ಗೆಲ್ಲಿಸುತ್ತೇವೆ. ಗೀತಾ ಅವರು ಈಗಾಗಲೇ ಸೊರಬದಲ್ಲಿ ಇದ್ದಾರೆ. ಪ್ರಚಾರವನ್ನೂ ಕೂಡ ಕೈಗೊಂಡಿದ್ದಾರೆ. ಅವರ ಸಹೋದರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕೂಡ ಚುನಾವಣೆ ಕೆಲಸ ಮಾಡುತ್ತಿದ್ದಾರೆ. ಗೀತಾ ಶಿವರಾಜ್‍ಕುಮಾರ್ ಜೊತೆಗೆ ನಟ ಶಿವರಾಜ್‍ಕುಮಾರ್ ಕೂಡ ಪ್ರಚಾರಕ್ಕೆ ಕೈ ಜೋಡಿಸಲಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಂಘಟನೆ ಬಲವಾಗಿದೆ. ಎಲ್ಲ ನಾಯಕರು ಒಗ್ಗಟ್ಟಾಗಿ ಈ ಬಾರಿ ನಮ್ಮ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಅವರನ್ನು ಗೆದ್ದೇ ಗೆಲ್ಲಿಸುತ್ತೇವೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗೀತಾ ಅವರು ಈಗಾಗಲೇ ಸೊರಬದಲ್ಲಿ ಇದ್ದಾರೆ. ಪ್ರಚಾರವನ್ನೂ ಕೂಡ ಕೈಗೊಂಡಿದ್ದಾರೆ. ಅವರ ಸಹೋದರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕೂಡ ಚುನಾವಣೆ ಕೆಲಸ ಮಾಡುತ್ತಿದ್ದಾರೆ. ಗೀತಾ ಶಿವರಾಜ್‍ಕುಮಾರ್ ಜೊತೆಗೆ ನಟ ಶಿವರಾಜ್‍ಕುಮಾರ್ ಕೂಡ ಪ್ರಚಾರಕ್ಕೆ ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು.

ಗೀತಾ ಶಿವರಾಜ್‍ಕುಮಾರ್‌ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಮುಖಂಡರು, ಜನಪ್ರತಿನಿಧಿಗಳು ಸಂಕಲ್ಪ ತೊಟ್ಟಿದ್ದಾರೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಶಿವಮೊಗ್ಗದಲ್ಲಿ ಮಾ.20ರಂದು ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆ ನಡೆಯಲಿದೆ. ಸ್ಥಳ ಇನ್ನೂ ನಿಗದಿಮಾಡಿಲ್ಲ. ಈಗಾಗಲೇ ಗೀತಾ ಶಿವರಾಜ್‍ಕುಮಾರ್ ಅವರು ಪ್ರಚಾರಕ್ಕೆ ರೆಡಿಯಾಗಿದ್ದಾರೆ. ಪ್ರತಿಯೊಂದು ಹಳ್ಳಿಯಲ್ಲೂ ಪ್ರಚಾರ ಸಭೆಗಳನ್ನು ಏರ್ಪಡಿಸುತ್ತೇವೆ. ಸುಮಾರು 400ಕ್ಕೂ ಹೆಚ್ಚು ಸಭೆಗಳನ್ನು ಮಾಡಲಿದ್ದೇವೆ. ಗ್ರಾ.ಪಂ. ಹೋಬಳಿಮಟ್ಟದಲ್ಲೂ ಪ್ರಚಾರ ಸಭೆಗಳು ನಡೆಯುತ್ತವೆ ಎಂದು ಮಾಹಿತಿ ನೀಡಿದರು.

ರಾಜ್ಯದ ಗ್ಯಾರಂಟಿಗಳ ಜೊತೆಗೆ ಈಗ ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್‍ ಗಾಂಧಿ ಕೂಡ ತಮ್ಮ ಪ್ರಣಾಳಿಕೆ ಪ್ರಕಟಿಸಿ 5 ಗ್ಯಾರಂಟಿಗಳನ್ನು ದೇಶದ ಜನತೆಗೆ ನೀಡಿದ್ದಾರೆ. 30 ಲಕ್ಷ ಹುದ್ದೆಗಳು ಭರ್ತಿ ಮಾಡುವುದು, ಮನೆ ಯಜಮಾನಿಗೆ ವರ್ಷಕ್ಕೆ ₹1 ಲಕ್ಷ ನೀಡುವ ನಾರಿ ಯೋಜನೆ, ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ 1 ವರ್ಷ ಸ್ಟೈಫಂಡರಿ, ಉದ್ಯೋಗಸ್ಥ ಮಹಿಳೆಯರಿಗಾಗಿ ಹಾಸ್ಟೆಲ್ ವ್ಯವಸ್ಥೆ ಇವು ಕಾಂಗ್ರೆಸ್‍ನ ಗ್ಯಾರಂಟಿಗಳು ಆಗಿವೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹಗರಣ ಎದ್ದು ಕಾಣುತ್ತಿದ್ದರೂ, ಸಾರ್ವಜನಿಕರು, ಸಂಘ ಸಂಸ್ಥೆಗಳು, ನೂರಾರು ಬಾರಿ ಮುಷ್ಕರ ಮಾಡಿದ್ದರೂ, ಕಣ್ಣಿಗೆ ರಾಚುವಂತೆ ಭ್ರಷ್ಟಾಚಾರ ನಡೆದಿದ್ದರೂ ಕೇಂದ್ರ ಸರ್ಕಾರದ ಈ ಯೋಜನೆ ಬಗ್ಗೆ ಸಂಸದರು ಒಮ್ಮೆಯೂ ಮಾತನಾಡಿಲ್ಲ. ಸ್ಮಾರ್ಟ್‍ಸಿಟಿ ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಎಸ್.ಟಿ. ಚಂದ್ರಶೇಖರ್, ಚಂದ್ರಭೂಪಾಲ್, ಕಲೀಂ ಪಾಶಾ, ಇಕ್ಕೇರಿ ರಮೇಶ್, ಎನ್.ಡಿ. ಪ್ರವೀಣ್‍ಕುಮಾರ್, ಜಿ.ಡಿ.ಮಂಜುನಾಥ್ ಮತ್ತಿತರರು ಇದ್ದರು.

- - -

ಬಾಕ್ಸ್‌ ರಾಘವೇಂದ್ರ ಹೇಳಿಕೊಳ್ಳುವಂಥ ಕೊಡುಗೆಗಳೇನೂ ನೀಡಿಲ್ಲಲೋಕಸಭಾ ಸದಸ್ಯನ್ನಾಗಿ 10 ವರ್ಷವಿದ್ದ ಬಿ.ವೈ.ರಾಘವೇಂದ್ರ ಶಿವಮೊಗ್ಗ ಜಿಲ್ಲೆಗೆ ಹೇಳಿಕೊಳ್ಳುವಂಥ ಕೊಡುಗೆಗಳನ್ನೇನೂ ನೀಡಿಲ್ಲ. ಅವು ಮಹತ್ವದ ಕೊಡುಗೆಗಳೇ ಅಲ್ಲ. ಅಡಕೆ ಸಮಸ್ಯೆ ಬಗ್ಗೆ ಸಂಸತ್‍ನಲ್ಲಿ ಧ್ವನಿ ಎತ್ತಲಿಲ್ಲ. ಶರಾವತಿ ಸಂತ್ರಸ್ತರ ಸಮಸ್ಯೆಯನ್ನು 15 ದಿನದೊಳಗೆ ಬಗೆಹರಿಸುತ್ತೇನೆ ಎಂದು ಹೇಳಿ ವರ್ಷಗಳಾದವು. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕೇಂದ್ರದಿಂದ ಯಾವ ನೆರವನ್ನು ಪಡೆಯಲಿಲ್ಲ. ತುಟಿ ಬಿಚ್ಚುತ್ತಿಲ್ಲ ಎಂದು ಸುಂದರೇಶ್‌ ಆರೋಪಿಸಿದರು.- - -

-15ಎಸ್‌ಎಂಜಿಕೆಪಿ01: ಎಚ್‌.ಎಸ್‌.ಸುಂದರೇಶ್‌