ಸಾರಾಂಶ
ಶಿವಮೊಗ್ಗ: ಕಾಂಗ್ರೆಸಿಗರಿಗೆ ದೇಶದ ಭದ್ರತಾ ವೈಫಲ್ಯದ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಒಂದೆಡೆ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕುಟುಂಬದೊಡನೆ ನಾವಿದ್ದೇವೆ ಎಂದು ಹೇಳುತ್ತಾರೆ.
ಆದರೆ ಇನ್ನೊಂದೆಡೆ ಈ ಘಟನೆಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಕಾಂಗ್ರೆಸಿಗರು ಇಂಥಹ ಹೇಳಿಕೆಯನ್ನು ನೀಡುವುದು ಅವರಿಗೆ ಶೋಭೆ ತರುವುದಿಲ್ಲ. ಈ ರೀತಿಯ ನರೆಟಿವ್ ಸೆಟ್ ಮಾಡುವುದು ದೇಶದ್ರೋಹದ ಕಾರ್ಯ ಎಂದು ಕಿಡಿಕಾರಿದರು.ನೆಹರುರವರು ಈ ಹಿಂದೆ ಭಾರತದಲ್ಲಿರುವ ಅಲ್ಪಸಂಖ್ಯಾತರಿಗೆ ನಾವು ರಕ್ಷಣೆ ಕೊಡುತ್ತೇವೆ, ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ನೀವು ರಕ್ಷಣೆ ಕೊಡಿ ಎಂದು ಒಪ್ಪಂದ ಮಾಡಿಕೊಂಡಿದ್ದರು.
ಅದು ಅವರು ಮಾಡಿದ ದೇಶ ದ್ರೋಹದ ಕೆಲಸ. ಈಗ ಪಾಕಿಸ್ತಾನದಲ್ಲಿ ಹಿಂದೂಗಳ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಇಷ್ಟೆಲ್ಲಾ ಮಾಡಿದ ಕಾಂಗ್ರೆಸಿಗರಿಗೆ ಭದ್ರತಾ ವೈಫಲ್ಯದ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದರು.ಈ ಹಿಂದೆ ಭದ್ರತಾ ವೈಫಲ್ಯ ಆಗಿಲ್ವಾ ಎಂದು ಪ್ರಶ್ನಿಸಿದ ಅವರು, ಭಾರತದ ತಾಕತ್ತು ಇಡೀ ಜಗತ್ತಿಗೆ ಗೊತ್ತಿದೆ. ನಾವು ಬಿಕ್ಷೆ ಕೊಟ್ಟಂತಹ ಪಾಕಿಸ್ತಾನ ಅದು. ಆದರೆ ಆ ವ್ಯಕ್ತಿಗಳು ಈ ರೀತಿಯ ದುಷ್ಕೃತ್ಯವೆಸಗುತ್ತಿದ್ದಾರೆ.
ನೆಹರೂ ಕಾಲದಿಂದಲೂ ಹಿಂದೂಗಳೇ ಟಾರ್ಗೆಟ್ ಆಗುತ್ತಿದ್ದರು. ಇವತ್ತು ಹಿಂದೂಗಳೇ ಟಾರ್ಗೆಟ್ ಆಗುತ್ತಿದ್ದಾರೆ. ಇನ್ನುಮುಂದೆ ಈ ದೇಶದ ಜನ ಭಯ ಪಡುವ ಅಗತ್ಯವಿಲ್ಲ. ಸಂವಿಧಾನ ಬದ್ಧವಾಗಿ ಪಾಕಿಸ್ತಾನಕ್ಕೆ ಗಂಟು ಮೂಟೆ ಕಟ್ಟುವ ಪರಿಸ್ಥಿತಿ ನಿರ್ಮಾಣ ಮಾಡಿ ಅಖಂಡ ಭಾರತವನ್ನು ನಿರ್ಮಿಸುತ್ತೇವೆ ಎಂದು ಹೇಳಿದರು.
ಭಯೋತ್ಪಾದಕರನ್ನು ಹುಡುಕಿ ಹುಡುಕಿ ಕೊಲ್ಲಬೇಕು:
ಭಯೋತ್ಪಾದಕರ ದಾಳಿಗೆ ರಾಜ್ಯದ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಭಯೋತ್ಪಾದಕರಿಗೆ ಮನುಷ್ಯತ್ವ ಇರುವುದಿಲ್ಲ. ಈ ರೀತಿ ಕೃತ್ಯವನ್ನು ಎಸಗುವ ಭಯೋತ್ಪಾದಕರನ್ನು ಹುಡುಕಿ ಹುಡುಕಿ ಕೊಲ್ಲಬೇಕು ಹಾಗೆಯೇ ಪಾಕಿಸ್ತಾನಕ್ಕೆ ಬಾಂಬ್ ಹಾಕಿ ಭಾರತ ಮಾತೆಗೆ ಹೂವು ಹಾಕಿ ಎಂಬ ಘೋಷಣೆಗಳು ಕಾರ್ಯಗತವಾಗಬೇಕು. ಇದು ಜನಮಾನಸದ ಬೇಡಿಕೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೋಹನ್ ರೆಡ್ಡಿ, ಜ್ಞಾನೇಶ್ವರ್, ಕೆ.ಎನ್.ಜಗದೀಶ್, ಎನ್.ಜೆ.ನಾಗರಾಜ್, ಮಂಜುನಾಥ್ ಇದ್ದರು.