ಪ್ರತಿ ಯುನಿಟ್‌ಗೆ 86 ಪೈಸೆ ದರ ಹೆಚ್ಚಳ : ಹೆಸ್ಕಾಂ ದರ ಪರಿಷ್ಕರಣೆಗೆ ಗ್ರಾಹಕರ ವಿರೋಧ

| N/A | Published : Feb 28 2025, 02:00 AM IST / Updated: Feb 28 2025, 11:40 AM IST

ಪ್ರತಿ ಯುನಿಟ್‌ಗೆ 86 ಪೈಸೆ ದರ ಹೆಚ್ಚಳ : ಹೆಸ್ಕಾಂ ದರ ಪರಿಷ್ಕರಣೆಗೆ ಗ್ರಾಹಕರ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಯುನಿಟ್‌ಗೆ 86 ಪೈಸೆ ದರ ಹೆಚ್ಚಳ ಹಾಗೂ ಫಿಕ್ಸಡ್ ಡೆಪಾಸಿಟ್ ಆಗಿ ₹ 40 ಹೆಚ್ಚಳ ಮಾಡಲು ಹೆಸ್ಕಾಂ ಸಲ್ಲಿಸಿದ ಮನವಿ ಖಂಡನೀಯ. ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಯಲ್ಲಿ ಲೈನ್‌ಮನ್‌ಗಳ ಕೊರತೆ ಇದ್ದು, ಇದರಿಂದ ಗ್ರಾಹಕರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ

ಹುಬ್ಬಳ್ಳಿ: ದರ ಪರಿಷ್ಕರಣೆ ಕುರಿತು ಹುಬ್ಬಳ್ಳಿ ವಿದ್ಯುತ್‌ ಸರಬರಾಜು ನಿಗಮ (ಹೆಸ್ಕಾಂ) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಕ್ಕೆ ಗ್ರಾಹಕರು, ಉದ್ಯಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.

ದರ ಪರಿಷ್ಕರಣೆ ಕುರಿತಂತೆ ಗ್ರಾಹಕರೊಂದಿಗೆ ಚರ್ಚಿಸಲು ನವನಗರದ ಹೆಸ್ಕಾಂ ಸಭಾಭವನದಲ್ಲಿ ಗುರುವಾರ ಕರೆದಿದ್ದ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.

ಆರ್ಥಿಕ ವರ್ಷ 2025-26 ಹಾಗೂ 27-28ನೇ ಸಾಲಿನ (3 ವರ್ಷ) ಅವಧಿಗೆ ದರಪರಿಷ್ಕರಣೆ ಮಾಡುವುದರ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ.ರವಿಕುಮಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಜಿಲ್ಲೆಯ ಉದ್ಯಮಿಗಳು ದರ ಏರಿಕೆ ಮಾಡದಂತೆ ತಮ್ಮ ಮನವಿಯ ಜತೆಗೆ ಹೆಸ್ಕಾಂ ಸಂಸ್ಥೆಯ ಬೇಜವಾಬ್ದಾರಿ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬೆಳಗಾವಿಯ ಪ್ರಭಾಕರ ಎಂಬುವರು ಮಾತನಾಡಿ, ಪ್ರತಿ ಯುನಿಟ್‌ಗೆ 86 ಪೈಸೆ ದರ ಹೆಚ್ಚಳ ಹಾಗೂ ಫಿಕ್ಸಡ್ ಡೆಪಾಸಿಟ್ ಆಗಿ ₹ 40 ಹೆಚ್ಚಳ ಮಾಡಲು ಹೆಸ್ಕಾಂ ಸಲ್ಲಿಸಿದ ಮನವಿ ಖಂಡನೀಯ. ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಯಲ್ಲಿ ಲೈನ್‌ಮನ್‌ಗಳ ಕೊರತೆ ಇದ್ದು, ಇದರಿಂದ ಗ್ರಾಹಕರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಅನೇಕ ಕಡೆ ಸೆಕ್ಷನ್ ಆಫೀಸರ್ ಹಾಗೂ ಜೆಇ ಗಳೇ ಇಲ್ಲ. ಒಂದು ಕಡೆ ಎಸ್ಸೆಸ್ಸೆಲ್ಸಿ ಅಧಿಕಾರಿ ಒಬ್ಬರೆ ಕೈಗಾರಿಕೆ ಪ್ರದೇಶದ 7 ಸಾವಿರ ಟಿಸಿ ನಿರ್ವಹಣೆ ಮಾಡುತ್ತಿದ್ದಾರೆ. ದರ ಏರಿಕೆ ಬದಲು ಅಗತ್ಯ ಪ್ರಮಾಣದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ನೇಮಕ ಮಾಡಬೇಕು ಎಂದರು.

ಭ್ರಷ್ಟಾಚಾರ ತಾಂಡವ: ಕುಮಟಾ ವಿದ್ಯುತ್ ಬಳಕೆದಾರರ ಸಂಘದ ಅರವಿಂದ ಪೈ ಮಾತನಾಡಿ, 23 ವರ್ಷಗಳಿಂದ ವಿದ್ಯುತ್ ಸರಬರಾಜು ಕಾರ್ಯ ಮಾಡುತ್ತಾ ಬಂದಿರುವ ಹೆಸ್ಕಾಂ ಸಂಸ್ಥೆಗೆ ಇಂದಿಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗದಿರುವುದು ದುರಂತದ ಸಂಗತಿ. ಹೆಸ್ಕಾಂ ಸಂಸ್ಥೆಯಲ್ಲಿ ಭ್ರಷ್ಟಾಚಾರ ಹಾಗೂ ಅವ್ಯವಹಾರಗಳು ತಾಂಡವಾಡುತ್ತಿದೆ. ದರ ಏರಿಕೆ ಪ್ರಸ್ತಾವನೆಗೆ ಸರ್ಕಾರ ಹಾಗೂ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಅಂಗೀಕಾರ ನೀಡಬಾರದು ಎಂದರು.

ನಷ್ಟ ಮಾಡುವ ಹೆಸ್ಕಾಂ ಬೇಡ: ಹೆಸ್ಕಾಂ ಸಂಸ್ಥೆ ನಷ್ಟವನ್ನೇ ತೋರಿಸುತ್ತಾ ಬಂದಿದ್ದು, ಸರ್ಕಾರ ಬೇರೊಬ್ಬರಿಗೆ ಹೆಸ್ಕಾಂ ಸಂಸ್ಥೆಯ ಜವಾಬ್ದಾರಿ ನೀಡುವ ಮೂಲಕ ಅದನ್ನು ಲಾಭದತ್ತ ಕೊಂಡ್ಯೊಯ್ಯುವ ಕೆಲಸ ಮಾಡಬೇಕು. ಸಂಸ್ಥೆಯಲ್ಲಿ ಅನಗತ್ಯವಾಗಿ ಹಣ ಖರ್ಚು ಮಾಡಲಾಗುತ್ತಿದೆ. ನಷ್ಟ ಮಾಡುವ ಹೆಸ್ಕಾಂ ಸಂಸ್ಥೆ ಬೇಡವೇ ಬೇಡ. ಸರ್ಕಾರ ಹಾಗೂ ಆಯೋಗ ಇತ್ತ ಗಮನ ಹರಿಸಿ, ಲಾಭ ಮಾಡಿ ಕೊಡುವ ಮತ್ತೊಂದು ಸಂಸ್ಥೆಗೆ ವಿದ್ಯುತ್ ನಿರ್ವಹಣೆಯ ಜವಾಬ್ದಾರಿ ನೀಡಬೇಕು. ಜತೆಗೆ ಸಂಸ್ಥೆಗೆ ಇಂಡಿಯನ್ ಎಂಜಿನೀಯರಿಂಗ್ ಸರ್ವೀಸ್ ಪಾಸಾದ ಐಎಎಸ್ ಅಧಿಕಾರಿಗಳನ್ನು ಎಂಡಿಯಾಗಿ ನೇಮಕ ಮಾಡಲಿ ಎಂದು ಪೈ ಮನವಿ ಮಾಡಿದರು.

ಶಿರಸಿಯ ಜಿ.ಜಿ. ಹೆಗಡೆ ಮಾತನಾಡಿ, ಅಧಿಕಾರಿಗಳು ವಿವಿಧ ಕಂಪನಿಯ ಗ್ರಾಹಕರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸುತ್ತಿಲ್ಲ. ಹೆಸ್ಕಾಂ ವ್ಯಾಪ್ತಿಯ ಎಲ್ಲ 22 ವಿಭಾಗದಲ್ಲಿ ಪ್ರತಿ ವರ್ಷ ಸ್ವತಂತ್ರ ಸಂಸ್ಥೆಯಿಂದ ಆಡಿಟ್ ನಡೆಸುವ ಮೂಲಕ ಸರಿಯಾದ ಮಾಹಿತಿ ಹೊರ ತರುವ ಕೆಲಸ ಮಾಡಬೇಕು. ಹೆಸ್ಕಾಂ ಜಾಗೃತಿ ದಳಕ್ಕೆ ₹50 ಲಕ್ಷ ಅನುದಾನ ನೀಡುವುದು ಬೇಡ, ಆದರಿಂದ ಸಂಸ್ಥೆಗೆ ಯಾವುದೇ ಲಾಭವಿಲ್ಲ ಎಂದರು.

ರೈತರಾದ ಮಲ್ಲಣ್ಣ ಅಲೇಕರ, ಬಸವರಾಜ ಗುಡಿ, ಗ್ರಾಹಕರಾದ ಮಹಾಂತಪ್ಪ ನಿಲೂಗಲ್ಲ, ಗೋಕಾಕ್‌ನ ಆನಂದ ಕುಲಕರ್ಣಿ, ಬಾಗಲಕೋಟೆಯ ಈರಣ್ಣ ನಾವಳಗಿ, ಗದಗನ ಎಸ್‌.ಎಸ್‌. ಪಾಟೀಲ ಸೇರಿದಂತೆ ಹಲವರು ಮಾತನಾಡಿ, ತಾಂತ್ರಿಕ ದೋಷವಿರುವ ಹಾಗೂ ಹಳೆಯ ಮೀಟರ್‌ ಬೇಗನೆ ಬದಲಾಯಿಸುವ ಕೆಲಸ ಲೈನ್‌ಮನ್‌ಗಳು ಮಾಡುತ್ತಿಲ್ಲ. ಅನಗತ್ಯವಾಗಿ ಗ್ರಾಹಕರಿಂದಲೇ ಮೀಟರ್ ದರ ಭರಿಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಹಾಗೂ ಕೈಗಾರಿಕಾ ಪ್ರದೇಶದಲ್ಲಿ ತ್ರಿಫೇಸ್ ವಿದ್ಯುತ್ ಸಮಸ್ಯೆ ಇದ್ದು, ಅದನ್ನು ಪರಿಹರಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಆಯೋಗದ ಸದಸ್ಯರಾದ ಎಚ್.ಕೆ.ಜಗದೀಶ, ಜಾವಿದ್ ಅಖ್ತರ್‌, ಹೆಸ್ಕಾಂ ಹಣಕಾಸು ನಿರ್ದೇಶಕ ಪ್ರಕಾಶ ಪಾಟೀಲ, ತಾಂತ್ರಿಕ ನಿರ್ದೇಶಕ ಎಸ್. ಜಗದೀಶ ಸೇರಿದಂತೆ ಅಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಗ್ರಾಹಕರು ಪಾಲ್ಗೊಂಡಿದ್ದರು.

ಹೆಸ್ಕಾಂ ಸಂಸ್ಥೆಯ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ 2025-26 ನೇ ವರ್ಷದಲ್ಲಿ ಪ್ರತಿ ಯುನಿಟ್‌ಗೆ 69 ಪೈಸೆ ದರ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೆಸ್ಕಾಂ ಎಂಡಿ ವೈಶಾಲಿ ಎಂ.ಎಲ್ ತಿಳಿಸಿದರು.