ಸಾರಾಂಶ
ಕೃಷಿ ವಿಜ್ಞಾನಿಗಳು, ಕೃಷಿ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಸಲಹೆ
ಕನ್ನಡಪ್ರಭ ವಾರ್ತೆ ಗಂಗಾವತಿ
ಜಿಲ್ಲೆಯ ಹಲವೆಡೆ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗಿದ್ದು, ಇನ್ನೂ ಎರಡು ದಿನ ಮುಂದುವರಿಯುವ ಸಾಧ್ಯತೆ ಇದೆ. ರೈತರು ಕೃಷಿ ಚಟುವಟಿಕೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ವಿಜ್ಞಾನಿ ಡಾ. ರಾಘವೇಂದ್ರ ಎಲಿಗಾರ, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು, ಹವಾಮಾನ ವಿಜ್ಞಾನಿ ಡಾ. ಫಕೀರಪ್ಪ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ ಮತ್ತು ಶೇಂಗಾ ಬೆಳೆಗಳನ್ನು ಕೊಯ್ಲು ಮಾಡುತ್ತಿದ್ದು, ನೀರು ತಾಗದಂತೆ ಸುರಕ್ಷಿತ ಜಾಗದಲ್ಲಿ ಶೇಖರಿಸಿಡಬೇಕು. ರೈತರು ಜಮೀನಿನಲ್ಲಿ ಬಸಿಗಾಲುವೆ ಮಾಡಿ, ನೀರು ಹೊರಹಾಕಬೇಕು ಹಾಗೂ ಕಾಲುವೆ ಸ್ವಚ್ಛಗೊಳಿಸಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರೈತರು ಬೆಳೆಗಳಿಗೆ ನೀರು ಹಾಯಿಸುವುದು ಮತ್ತು ಸಿಂಪಡಣೆಯನ್ನು ಮುಂದೂಡಲು ಸೂಚಿಸಲಾಗಿದೆ. ಮಳೆ ನೀರನ್ನು ಆದಷ್ಟು ನೀರು ಕೊಯ್ಲಿನ ಮುಖಾಂತರ ಅಥವಾ ಕೃಷಿ ಹೊಂಡಗಳಲ್ಲಿ ಶೇಖರಿಸಿಡುವುದರಿಂದ ಒಣ ಪರಿಸ್ಥಿತಿಯಲ್ಲಿ ಉಪಯೋಗಿಸಲು ಅನುಕೂಲ. ಸತತ ಮೋಡ ಕವಿದ ವಾತಾವರಣವಿರುವುದರಿಂದ ಬತ್ತದಲ್ಲಿ ಕಣೆ, ನೊಣ, ಕೀಟ ಬಾಧೆ ಕಂಡುಬರುವ ಸಾಧ್ಯತೆಯಿದ್ದು, ರೈತರು ನಿರ್ವಹಣೆಗಾಗಿ ಫಿಪ್ರೊನೀಲ್ 1.0 ಮಿ.ಲೀ. ಅಥವಾ ಥಯೋಮಿಥಾಕ್ಸಮ್ 0.2 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಭತ್ತದಲ್ಲಿ ಸತತವಾಗಿ ನೀರು ನಿಲ್ಲುವುದರಿಂದ ಎಲೆ ಕವಚದ ಮಚ್ಚೆ ರೋಗ ಕಂಡುಬರುವ ಸಾಧ್ಯತೆಯಿದ್ದು, ಇದರ ನಿರ್ವಹಣೆಗಾಗಿ 1.0 ಮಿ.ಲೀ. ಹೆಕ್ಸಾಕೋನಾಜೋಲ್ ಅಥವಾ 0.4 ಗ್ರಾಂ. (ಟ್ರಿಪ್ಲಾಕ್ಸಿಸ್ಟ್ರೋಬಿನ್ 25 ಡಬ್ಲ್ಯೂ.ಜಿ+ಟೆಬೂಕೋನೋಜೋಲ್ 50 ಡಬ್ಲ್ಯೂ.ಜಿ) ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.ಬತ್ತದ ಗದ್ದೆಯಲ್ಲಿ ಬತ್ತದ ಗಿಡಗಳು ನೆಲಕ್ಕೆ ಬೀಳುವುದು ಹೆಚ್ಚಾಗುತ್ತಿದ್ದು, ಅದಕ್ಕೆ ಗಿಡಗಳನ್ನು ಮೇಲಕ್ಕೆ ಕಟ್ಟುವುದರಿಂದ ನೆಲಕ್ಕೆ ಬಿದ್ದು ಮೊಳಕೆ ಬರುವ ನಷ್ಟ ತಪ್ಪಿಸಬಹುದು.
ತೊಗರಿಯಲ್ಲಿ ಹೂ ಉದುರುವುದು ಕಂಡುಬಂದಿದ್ದು, ಇದರ ನಿರ್ವಹಣೆಗಾಗಿ ನ್ಯಾಫ್ತಾಲೀನ್ ಅಸೆಟಿಕ್ ಆಸಿಡ್ 0.5 ಮೀ.ಲೀ ಪ್ರತಿ ಲೀಟರ್ ನೀರಿಗೆ ಹಾಗೂ ಸೊರಗು/ನೆಟೆ/ಸಿಡಿ ರೋಗದ ನಿರ್ವಹಣೆಗಾಗಿ ಸಾಫ್ (ಕಾರ್ಬೆಂಡಾಜಿಮ್+ಮ್ಯಾಂಕೋಜೆಬ್) 2.0 ಗ್ರಾಂ. ಪ್ರತಿ ಲೀಟರ್ ನೀರಿಗೆ ಹಾಕಿ ಬುಡಕ್ಕೆ ಸುರಿಯಬೇಕು.ತೊಗರಿ ಕಾಯಿಕೊರಕದ ನಿರ್ವಹಣೆಗಾಗಿ 0.15 ಮಿ.ಲೀ. ಕ್ಲೋರಂಟ್ರಿನಿಲಿಪ್ರೋಲ್ ಅಥವಾ 0.1 ಮಿ.ಲೀ. ಸ್ಪೈನೊಸಾಡ್ ಅಥವಾ 2.0 ಮಿ.ಲೀ. ಕ್ವಿನಾಲ್‍ಫಾಸ್ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕೆಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.