ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸ್ಮಾರ್ಟ್ ಸಿಟಿ ಯೋಜನೆಯಡಿ ಎಸ್‌ಪಿಎಂ ರಸ್ತೆಯಿಂದ ಹಳೆಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿವರೆಗೆ ನಿರ್ಮಿಸಲಾಗಿದ್ದ ರಸ್ತೆಯ ಒಂದು ಭಾಗವನ್ನು ಹೈಕೋರ್ಟ್ ಆದೇಶದ ಮೇರೆಗೆ ಭೂ ಮಾಲೀಕ ಬಾಳಾಸಾಹೇಬ ಪಾಟೀಲ ಅವರಿಗೆ ಬೆಳಗಾವಿ ಮಹಾನಗರ ಪಾಲಿಕೆ ಶನಿವಾರ ಹಸ್ತಾಂತರ ಮಾಡಿದೆ. ಈ ಮೂಲಕ ಮಹಾನಗರ ಪಾಲಿಕೆ ₹20 ಕೋಟಿ ತಲೆದಂಡದಿಂದ ಪಾರಾಗಿದೆ.ಹೈಕೋರ್ಟ್ ಆದೇಶದ ಹಿನ್ನೆಲೆ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕಿ ಸಯೀದಾ ಆಫ್ರೀನ್‌ಭಾನು ಬಳ್ಳಾರಿ ಹಾಗೂ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ ಅವರು ಜಮೀನಿನ ದಾಖಲೆಗಳನ್ನು ಮಾಲೀಕ ಬಾಳಾಸಾಹೇಬ ಪಾಟೀಲ ಕುಟುಂಬಸ್ಥರಿಗೆ ಶನಿವಾರ ಹಸ್ತಾಂತರಿಸಿದರು. ಭೂಮಿಯ ಎರಡೂ ಬದಿಗೆ ಬ್ಯಾರಿಕೇಡ್ ಅಳಡಿಸಲಾಗಿದೆ. ಈ ಮೂಲಕ ಬೆಳಗಾವಿ ಮಹಾನಗರ ಪಾಲಿಕೆಯ ₹20 ಕೋಟಿ ದಂಡ ಪ್ರಕರಣ ಅಂತ್ಯಗೊಂಡಿದೆ.ಏನಿದು ಪ್ರಕರಣ?:
ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ರಸ್ತೆ ಕಾಮಗಾರಿ ಕೈಗೊಳ್ಳಲು ಮಹಾನಗರ ಪಾಲಿಕೆಯ ನಿರಾಕ್ಷೇಪಣಾ ಪ್ರಮಾಣಪತ್ರ ಕೊಟ್ಟಿತ್ತು. ಸ್ಮಾರ್ಟ್ ಸಿಟಿ ವತಿಯಿಂದ ₹5.88 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಗೊಂಡು 2022ರಲ್ಲಿ ಪೂರ್ಣಗೊಳಿಸಿತ್ತು. ಕಾಮಗಾರಿಗೆ ಸರ್ವೆ ನಂ. 4111ರಲ್ಲಿ 21.65 ಗುಂಟೆ ಜಮೀನನ್ನು ಬಳಸಿಕೊಳ್ಳಲಾಗಿತ್ತು. ಭೂ ಮಾಲೀಕರಾದ ಬಾಳಾಸಾಹೇಬ ಪಾಟೀಲ ಪರಿಹಾರಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದರು.ನ್ಯಾಯಾಲಯ ಭೂಮಿ ಕಳೆದುಕೊಂಡ ಮಾಲೀಕರಿಗೆ ₹20 ಕೋಟಿ ಪರಿಹಾರ ನೀಡುವಂತೆ ಪಾಲಿಕೆಗೆ ಆದೇಶ ನೀಡಿತ್ತು. ಆದರೆ, ಪಾಲಿಕೆ ಆರ್ಥಿಕ ಸಂಕಷ್ಟದಲ್ಲಿರುವಾಗಲೇ ಈ ದಂಡ ಪಾವತಿಸುವುದು ಪಾಲಿಕೆಗೆ ದೊಡ್ಡ ಸಮಸ್ಯೆ ತಂದಿತ್ತು. ಪರಿಹಾರ ಬಾರದೇ ಇರುವುದರಿಂದ ಬಾಳಾಸಾಹೇಬ ಪಾಟೀಲ ಪಾಲಿಕೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಧಾರವಾಡ ಪೀಠವು ಪಾಲಿಕೆ ಆಯುಕ್ತರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಪಾಲಿಕೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಭೂಮಾಲೀಕರಿಗೆ ಕೂಡಲೇ ₹20 ಕೋಟಿ ಪರಿಹಾರ ಕೊಡಿ ಇಲ್ಲವೆ ನ್ಯಾಯಾಂಗ ನಿಂದನೆಗೆ ಗುರಿಯಾಗಿ ಎಂದು ತಿಳಿಸಿತ್ತು.
ಪಾಲಿಕೆ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ನಡುವೆಯೇ ನ್ಯಾಯಾಂಗ ನಿಂದನೆ ಪ್ರಕರಣ ಅಧಿಕಾರಿಗಳ ನಿದ್ದೆಗೆಡಿಸುವಂತೆ ಮಾಡಿತ್ತು. ಈ ಮಧ್ಯೆ ಭೂ ಮಾಲೀಕರಿಗೆ ₹20 ಕೋಟಿ ಪರಿಹಾರ ನೀಡಲು ಮೇಯರ್ ಸವಿತಾ ಕಾಂಬಳೆ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದಕ್ಕೆ ಪ್ರತಿಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸ್ಮಾರ್ಟ್ ಸಿಟಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆಯೇ ಹೊರತು ಮಹಾನಗರ ಪಾಲಿಕೆಯಿಂದ ಕೈಗೆತ್ತಿಕೊಂಡಿಲ್ಲ. ಹಾಗಾಗಿ, ದಂಡದ ಮೊತ್ತವನ್ನು ಬೆಳಗಾವಿ ಸ್ಮಾರ್ಟ್ ಸಿಟಿ ವತಿಯಿಂದಲೇ ಪಾವತಿಸುವಂತೆ ಒತ್ತಾಯ ಕೇಳಿಬಂದಿತ್ತು. ನ್ಯಾಯಾಂಗ ನಿಂದನೆ ಪ್ರಕರಣ ಹಿನ್ನೆಲೆಯಲ್ಲಿ ಬೆಳಗಾವಿ ಉಪವಿಭಾಗದ ಸಹಾಯಕ ಆಯುಕ್ತರು ₹20 ಕೋಟಿ ಪರಿಹಾರ ನೀಡುವುದಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು.ಇದರ ನಡುವೆ ಸಾಮಾಜಿಕ ಕಾರ್ಯಕರ್ತ ಸುಜಿತ ಮುಳಗುಂದ ಅವರು ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆ ಉಳಿಸಿ ಅಭಿಯಾನ ಆರಂಭಿಸಿದ್ದರು. ಕೊನೆಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಹಾರ ಬದಲು ಕಾಮಗಾರಿಗೆ ಬಳಸದ ಭೂಮಿಯನ್ನು ಮಾಲೀಕರಿಗೆ ಮರಳಿಸಲು ತೀರ್ಮಾನಿಸಿ, ಇದಕ್ಕೆ ಜಮೀನು ಮಾಲೀಕರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಭೂಮಿಯನ್ನು ಮಾಲೀಕರಿಗೆ ಹಿಂದಿರುಗಿಸುವಂತೆ ಪಾಲಿಕೆಗೆ ಸೂಚನೆ ನೀಡಿ, ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸೆ.23ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಭೂಮಾಲೀಕರಿಗೆ ಅವರ ಜಮೀನನ್ನು ಮರಳಿ ನೀಡಿ ಬೀಸುವ ಡೊಣ್ಣೆಯಿಂದ ತಪ್ಪಿಸಿಕೊಂಡಿದೆ.