ಐತಿಹಾಸಿಕ ಶರಣಬಸವೇಶ್ವರರ ಜಾತ್ರೆಗೆ ಕ್ಷಣಗಣನೆ; ಇಂದು ರಥೋತ್ಸವ

| Published : Mar 30 2024, 12:56 AM IST

ಐತಿಹಾಸಿಕ ಶರಣಬಸವೇಶ್ವರರ ಜಾತ್ರೆಗೆ ಕ್ಷಣಗಣನೆ; ಇಂದು ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಗಾರಗೊಂಡ ದಾಸೋಹ ಮಹಾಮನೆ, ಶರಣರ ಸಮಾಧಿ ಮಂದಿರ । 2 ವಾರಕ್ಕೂ ಹೆಚ್ಚು ಕಾಲ ನಡೆಯಲಿರುವ ಜಾತ್ರೆ. ರಾಯಚೂರು, ವಿಜಯಪುರ, ಬೀದರ್ ಸೇರಿದಂತೆ ನೆರೆಯ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಗಡಿ ಜಿಲ್ಲೆಗಳು ಸೇರಿದಂತೆ ದೂರದ ತಮ್ಮ ಗ್ರಾಮಗಳಿಂದ ದೇವಸ್ಥಾನಕ್ಕೆ ಆಗಮಿಸುತ್ತಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

18ನೇ ಶತಮಾನದ ಸಂತ, ಸಮಾಜ ಸುಧಾರಕ ಶ್ರೀ ಶರಣಬಸವೇಶ್ವರರ 202ನೇ ಪುಣ್ಯತಿಥಿಯ ಸ್ಮರಣಾರ್ಥ ಶನಿವಾರದಂದು ಜರುಗಲಿರುವ ಶರಣಬಸವೇಶ್ವರ ರಥೋತ್ಸವದೊಂದಿಗೆ ಎಲ್ಲಾ ವರ್ಗದ ಜನ ಸಾಮರಸ್ಯದಿಂದ ಸಂಭ್ರಮಿಸುವ ಐತಿಹಾಸಿಕ ಜಾತ್ರಾ ಮಹೋತ್ಸವಕ್ಕೆ ಕಲಬುರಗಿ ನಗರ ಸಜ್ಜಾಗಿದೆ.

ಕಲಬುರಗಿ ಸಾಮರಸ್ಯದ ನಗರ, ‘ಸೂಫಿ-ಸಂತ ತತ್ತ್ವಶಾಸ್ತ್ರ’ದ ಸಂಗಮಕ್ಕೆ ಹೆಸರುವಾಸಿಯಾದ ಪ್ರಸಿದ್ಧ ಶರಣಬಸವೇಶ್ವರ ಪುಣ್ಯಕ್ಷೇತ್ರವನ್ನು ಹೊಂದಿದೆ. ಇಲ್ಲಿ ಶರಣಬಸವೇಶ್ವರರ ಪಾರ್ಥಿವ ಶರೀರ ಸಮಾಧಿಯಲ್ಲಿ ನೆಲೆಗೊಂಡಿದ್ದಾರೆ. ಪ್ರತಿ ದಿನ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಕಾಯಿ-ಕರ್ಪೂರದೊಂದಿಗೆ ಆಗಮಿಸಿ ತಮ್ಮ ಭಕ್ತಿ ನಮನ ಸಲ್ಲಿಸುತ್ತಾರೆ.

ಇಡೀ ದಿನ ಭಕ್ತರ ಉಪವಾಸ ವ್ರತ: ತಮ್ಮ ಇಡೀ ಜೀವನವನ್ನು ಜನರ ಕಲ್ಯಾಣಕ್ಕಾಗಿ ಮತ್ತು ಸಮಾಜದಲ್ಲಿರುವ ಬಡವರ ಮತ್ತು ವಂಚಿತ ವರ್ಗದವರ ಅಗತ್ಯತೆಗಳನ್ನು ಪೂರೈಸಲು ಮುಡಿಪಾಗಿಟ್ಟ ಸಂತ ಶರಣಬಸವೇಶ್ವರರು ತಾವು ಹೋಳಿ ಆಚರಣೆಯ ಐದು ದಿನಗಳ ನಂತರ ಲಿಂ. ಮುನ್ಸೂಚನೆ ನೀಡಿದ್ದರು ಮತ್ತು ಅದೇ ದಿನ ಅವರು ದಾಸೋಹ ಮಹಾಮನೆಯಲ್ಲಿ ಕೊನೆಯುಸಿರೆಳೆದರು.

ಈ ದಿನ ಭಕ್ತರು ಇಡಿ ದಿನ ಉಪವಾಸವಿದ್ದು, ಸಂಜೆ ಶರಣಬಸವೇಶ್ವರ ದೇಗುಲದ ಆವರಣದಲ್ಲಿ ಜರುಗುವ ರಥೋತ್ಸವದ ನಂತರ ಸಿಹಿ ತಿಂಡಿ ಸೇರಿದಂತೆ ವಿಶೇಷವಾಗಿ ತಯಾರಿಸಿದ ಭಕ್ಷ್ಯಗಳನ್ನು ಸೇವಿಸಿ ಪೂಜೆ ಸಲ್ಲಿಸುತ್ತಾರೆ.

ರಾಯಚೂರು, ವಿಜಯಪುರ, ಬೀದರ್ ಸೇರಿದಂತೆ ನೆರೆಯ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಗಡಿ ಜಿಲ್ಲೆಗಳು ಸೇರಿದಂತೆ ದೂರದ ತಮ್ಮ ಗ್ರಾಮಗಳಿಂದ ದೇವಸ್ಥಾನಕ್ಕೆ ಆಗಮಿಸುತ್ತಾರೆ.

‘ಉಚ್ಛಾಯಿ’ (ಉತ್ಸವ) ಒಂದು ದಿನ ಮುಂಚಿತವಾಗಿ ನಡೆಯುತ್ತದೆ. ಇದರಲ್ಲಿ ಸಂಸ್ಥಾನದ ಪೂರ್ವ ಪೀಠಾಧಿಪತಿಗಳು ಲಿಂಗೈಕ್ಯರಾದ ವರ್ಷವನ್ನು ಗುರುತಿಸುವು ಅಂಗವಾಗಿ ದೇವಸ್ಥಾನದ ಸುತ್ತಲೂ ವರ್ಣರಂಜಿತವಾಗಿ ಅಲಂಕರಿಸಲ್ಪಟ್ಟ ‘ಉಚ್ಛಾಯಿ’ (ಸಣ್ಣ ರಥ) ಎಳೆಯಲಾಗುತ್ತದೆ.ರಥೋತ್ಸವದ ಅಂಗವಾಗಿ ಜಾತ್ರಾ ಮೈದಾನದಲ್ಲಿ ಯುಗಾದಿ ಹಬ್ಬದವರೆಗೆ ಹತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ವ್ಯಾಪಾರಿಗಳು ತಮ್ಮ ಸರಕುಗಳನ್ನು ಪ್ರದರ್ಶಿಸಿ ಮಾರಾಟ ಮಾಡುತ್ತಾರೆ. ಮಕ್ಕಳಿಗೆ ಮನರಂಜನೆ ಮತ್ತು ವಿನೋದ ಹಾಗೂ ಉಲ್ಲಾಸಕ್ಕಾಗಿ ವಿಶೇಷ ಆವರಣವನ್ನು ಮೀಸಲಿಡಲಾಗಿದೆ.

ಭಕ್ತರಿಗೆ ಹುಳಿಬಾನ ನೈವೇದ್ಯ ವಿತರಣೆ: ಎಲ್ಲಾ ಭಕ್ತರಿಗೆ ದಾಸೋಹ ಮಹಾಮನೆಯಲ್ಲಿ ಭಕ್ತರ ಹಸಿದ ಹೊಟ್ಟೆ ತುಂಬಲು ವಿಶೇಷ ಅನ್ನಸಂತರ್ಪಣೆ (ಪ್ರಸಾದ) ವ್ಯವಸ್ಥೆ ಮಾಡಲಾಗಿದೆ. ಹಸುವಿನ ಹಾಲಿನಿಂದ ತಯಾರಿಸಿದ ತಾಜಾ ಮೊಸರು ಮತ್ತು ಹೊಸದಾಗಿ ಕೊಯ್ಲು ಮಾಡಿದ ಜೋಳದಿಂದ ತಯಾರಿಸಿದ ವಿಶೇಷ ಭಕ್ಷ್ಯವಾದ ‘ಹುಳಿ ಬಾನ’ ತಯಾರಿಸಲಾಗುತ್ತದೆ.

ಈ ಖಾದ್ಯವನ್ನು ವಿಶೇಷವಾಗಿ ನೇಮಿಸಿದ ಭಕ್ತನು ತಲೆಯ ಮೇಲಿಟ್ಟುಕೊಂಡು ರಥದ ಕಡೆಗೆ ಹೆಜ್ಜೆ ಹಾಕುತ್ತಾನೆ. ಹುಳಿ ಬಾನವನ್ನು ತಲೆಯ ಮೇಲೆ ಹೊತ್ತ ಈ ವ್ಯಕ್ತಿಯು ರಥವನ್ನು ಎಳೆಯುವ ಮೊದಲು ಐದು ಬಾರಿ ರಥದ ಪ್ರದಕ್ಷಿಣೆ ಹಾಕಿದ ನಂತರ ರಥವು ದೇಗುಲದ ಸಂಕೀರ್ಣದಲ್ಲಿ ಪ್ರದಕ್ಷಿಣೆ ಮಾಡಿ, ಅದರ ಮೂಲ ಸ್ಥಳಕ್ಕೆ ಹಿಂದಿರುಗಿದ ನಂತರ ಭಕ್ತರಿಗೆ ವಿತರಿಸಲಾಗುತ್ತದೆ.