ಸಾರಾಂಶ
ಕಂಪ್ಲಿ: ತಾಲೂಕಿನ ರೈತರು ಭತ್ತದ ಇಳುವರಿ ಕುಸಿತ, ಮಾರುಕಟ್ಟೆ ದರಗಳ ಬಿಕ್ಕಟ್ಟು ಮತ್ತು ಹವಾಮಾನ ವೈಪರಿತ್ಯದ ಪರಿಣಾಮದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲೇ, ಸರ್ಕಾರ ಎರಡನೇ ಬೆಳೆಗೆ ನೀರು ಬಿಡುಗಡೆ ಮಾಡುವ ಕುರಿತು ಸ್ಪಷ್ಟ ತೀರ್ಮಾನ ಪ್ರಕಟಿಸದಿರುವುದು ವಿಷಾದನೀಯ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜು ನಾಯಕ ಖಂಡಿಸಿದರು.
ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ರೈತ ಈಗ ಅತ್ಯಂತ ದುಸ್ಥಿತಿಯಲ್ಲಿದ್ದಾನೆ. ಭತ್ತದ ಬೆಳೆಗೂ ರೋಗ ಬಾಧೆ ತಗುಲಿದ್ದು ಇಳುವರಿ ಕುಸಿತವಾಗಿದೆ. ಮಳೆಯಿಂದಾಗಿ ಕೆಲವೆಡೆಗಳಲ್ಲಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಬೆಳೆದ ಬೆಳೆ ನಾಶವಾಗಿ, ಮಾರುಕಟ್ಟೆಯಲ್ಲಿ ದರ ಕುಸಿತದಿಂದ ರೈತ ನಷ್ಟದ ಬಾವಿಯಲ್ಲಿ ಬೀಳುತ್ತಿದ್ದಾನೆ. ಇಂತಹ ಕಠಿಣ ಸಂದರ್ಭದಲ್ಲಿಯೂ ಎರಡನೇ ಬೆಳೆಗೆ ನೀರು ಕೊಡಬೇಕೇ ಬೇಡವೇ ಎಂಬ ವಿಚಾರದಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ರೈತರ ಹೃದಯಕ್ಕೆ ನೋವು ತಂದಿದೆ” ಎಂದರು.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೈತರ ಪರವಾಗಿ ನಿಂತು ತಕ್ಷಣವೇ ನೀರು ಬಿಡುಗಡೆ ಮಾಡುವ ತೀರ್ಮಾನ ಪ್ರಕಟಿಸಬೇಕು. ರೈತರ ಬದುಕು ಅವರ ಕೈಯಲ್ಲಿದೆ. ನೀರು ಬಿಡುಗಡೆ ಮಾಡುವಲ್ಲಿ ಮತ್ತಷ್ಟು ವಿಳಂಬವಾದರೆ ತೀವ್ರ ಹೋರಾಟ ನಡೆಯುವುದು ಅನಿವಾರ್ಯ. ಐಸಿಸಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುವುದಕ್ಕಿಂತ ಮುನಿರಾಬಾದಿನಲ್ಲಿಯೇ ನಡೆಸುವ ಮೂಲಕ ಸ್ಥಳೀಯ ಪರಿಸ್ಥಿತಿ ತಿಳಿದುಕೊಳ್ಳುವ ಜವಾಬ್ದಾರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಿದೆ” ಎಂದರು.
ಅದೇ ರೀತಿ ಭತ್ತ ಕೊಯ್ಲು ಮುಗಿದಿರುವ ಈ ಹಂತದಲ್ಲಿ ಮಾರುಕಟ್ಟೆಯಲ್ಲಿ ದರ ಕುಸಿತಗೊಂಡಿದ್ದು, ಸರ್ಕಾರ ತಕ್ಷಣವೇ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರಿಗೆ ನ್ಯಾಯವಾದ ಬೆಂಬಲ ಬೆಲೆ ಒದಗಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಮೇಘರಾಜ್, ನಗರ ಘಟಕದ ಅಧ್ಯಕ್ಷ ಇರ್ಫಾನ್ ಗುತ್ತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಜಗದೀಶ್ ಪೂಜಾರ್, ಹಾಗೂ ಪಕ್ಷದ ಪದಾಧಿಕಾರಿಗಳಾದ ಅಂಜಿನಪ್ಪ, ನಾಗರಾಜ್, ಚಂದ್ರಣ್ಣ, ಲಿಂಗಪ್ಪ, ವಿರುಪಾಕ್ಷಿ, ರಾಮುಲು ಮತ್ತಿತರರು ಉಪಸ್ಥಿತರಿದ್ದರು.
;Resize=(128,128))