ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಈ ವರ್ಷದಿಂದ ಅತ್ಯುತ್ತಮ ಮುದ್ರಣಕಾರರಿಗೂ ಪ್ರಶಸ್ತಿ ನೀಡಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಘೋಷಿಸಿದ್ದಾರೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸ್ಪಂದನ ಸಾಂಸ್ಕೃತಿಕ ಪರಿಷತ್ತು, ಕದಂಬ ಕಲಾಪೀಠ, ಉದಯಗಿರಿ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸುಜಯಾ ಸುರೇಶ್ ಅವರ ''''''''''''''''ಶುಭ ಮುಹೂರ್ತಗಳು'''''''''''''''' ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಅತ್ಯುತ್ತಮ ಲೇಖಕ, ಪ್ರಕಾಶಕ, ಮುಖಪುಟ ವಿನ್ಯಾಸಕಾರರಿಗೆ ಪ್ರಾಧಿಕಾರ ಪ್ರಶಸ್ತಿ ನೀಡುತ್ತಿದೆ. ಆದರೆ ಎಲ್ಲವನ್ನು ಸಂಯೋಜಿಸಿ, ಸುಂದರವಾಗಿ ಮುದ್ರಿಸುವ ಮುದ್ರಣಕಾರನಿಗೆ ಯಾವುದೇ ಪ್ರಶಸ್ತಿ ಇಲ್ಲದಿರುವುದನ್ನು ಗಮನಿಸಿ, ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.
ಶುಭಮುಹೂರ್ತಗಳು ಕೃತಿ ಅತ್ಯುತ್ತಮವಾಗಿ ಮುದ್ರಣವಾಗಿರುವುದನ್ನು ಗಮನಿಸಿದ ನಂತರ ತಮಗೆ ಈ ಆಲೋಚನೆ ಬಂದಿತು ಎಂದರು.ಶುಭ ಮುಹೂರ್ತಗಳು ಕೃತಿಯಲ್ಲಿ ಜ್ಞಾನಕೋಶವೂ ಇದೆ. ಮಾಹಿತಿ ಕೋಶವೂ ಇದೆ. ಲೇಖಕಿಯ ಜೀವನಪ್ರೀತಿ, ಪುಸ್ತಕ ಪ್ರೀತಿ ವ್ಯಕ್ತವಾಗಿದೆ. ಈ ಕೃತಿಯಲ್ಲಿ ಎಲ್ಲವೂ ಇದೆ. ಯಾವುದನ್ನು ಬಿಟ್ಟಿಲ್ಲ. ಅವರು ಎಲ್ಲವನ್ನು ಮಿತಿಯಲ್ಲಿಯೇ ಹೇಳಿದ್ದಾರೆ ಎಂದರು.
ಈ ಕೃತಿಯನ್ನು ಸಂಸ್ಕಾರ- ಸಂಸ್ಕೃತಿ ಅಧ್ಯಯನ ವಿಭಾಗಕ್ಕೆ ಸೇರಿಸಬಹುದು ಎಂದ ಅವರು, ಪಂಚಭೂತಗಳಲ್ಲಿ ಯಾವುದೇ ತಾರತಮ್ಯ ಇಲ್ಲ. ಅನಕ್ಷರಸ್ಥೆಯಾದ ನಮ್ಮ ತಾಯಿ ಬೆಳಗ್ಗೆ ಎದ್ದು ಸೂರ್ಯನಿಗೆ ನಮಸ್ಕಾರ ಮಾಡುತ್ತಿದ್ದಳು. ಏಕೆಂದು ಹೇಳಿದರೆ ಅವರ ತಾಯಿ ಮಾಡುತ್ತಿದ್ದರಂತೆ. ಇದು ನಮ್ಮ ಸಂಸ್ಕಾರ. ಈ ರೀತಿಯಲ್ಲಿ ನಮ್ಮ ಸಂಸ್ಕೃತಿಯನ್ನು ಆರಾಧಿಸಬೇಕು ಎಂದರು.ಯುವರಾಜ ಕಾಲೇಜಿನ ಆಂಗ್ಲ ಉಪನ್ಯಾಸಕಿ, ಅಂಕಣಕಾರ್ತಿ ಎಚ್. ನಿವೇದಿತಾ ಕೃತಿ ಕುರಿತು ಮಾತನಾಡಿ, ಗೃಹಿಣಿಯಾದ ಲೇಖಕಿ ಸುಜಯಾ ಸುರೇಶ್ ಅವರು ಅಧ್ಯಯನಶೀಲತೆಯಿಂದ ಈ ಜ್ಞಾನಶಾಖೆಯನ್ನು ರಚಿಸಿದ್ದಾರೆ. ಇದನ್ನು ಓದಿದಾಗ ನಮ್ಮ ಶಾಸ್ತ್ರ, ಸಂಪ್ರದಾಯಗಳು ಸ್ಮತಿಪಟಲದಲ್ಲಿ ಹಾದು ಹೋದವು ಎಂದರು.
ಪುರಾಣದ ಜೊತೆಗೆ ವೈಜ್ಞಾನಿಕ ಅಂಶಗಳನ್ನು ಸೇರಿಸಿ, ಸ್ವಾರಸ್ಯಕರವಾಗಿ ಆಚರಣೆಗಳನ್ನು ದಾಖಲಿಸಿದ್ದಾರೆ. ಅವರಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ, ಮುಂದಿನ ಪೀಳಿಗೆಗೆ ದಾಟಿಸುವ ಕಾಳಜಿ ಎದ್ದು ಕಾಣುತ್ತದೆ ಎಂದರು.ನಾವು ಈಗ ಸಂಧಿ ಕಾಲದಲ್ಲಿದ್ದೇವೆ. ಎರಡು ದೋಣಿಗಳ ಮೇಲೆ ಪ್ರಯಾಣಿಸುತ್ತಿದ್ದೇವೆ.
ನಮ್ಮಲ್ಲಿ ಆಚರಣೆಗಳು ಕಡಿಮೆಯಾಗುತ್ತಿವೆ. ಇದಕ್ಕೆ ಆಧುನಿಕತೆ ಕಾರಣ ಇರಬಹುದು. ಇಲ್ಲವೇ ಬೇರೆ ಧರ್ಮಗಳಲ್ಲಿ ಇರುವಂತೆ ಕಟ್ಟುಪಾಡುಗಳಿಲ್ಲದೇ ಅತಿಯಾದ ಸ್ವಾತಂತ್ರ್ಯವೂ ಕೂಡ ಇರಬಹುದು. ಎಂದು ಅವರು ಅಭಿಪ್ರಾಯಪಟ್ಟರು.ಹಿರಿಯ ಸಂಪ್ರದಾಯಗಳನ್ನು ಪಾಲಿಸಿದರೆ ಶ್ರೇಯಸ್ಕರ ಎಂಬ ನೀತಿ ಕೋಶದಂತೆ ಈ ಕೃತಿ ಇದೆ. ಸಂಪ್ರದಾಯದ ಮದುವೆಗಳ ಜೊತೆಗೆ ಕುವೆಂಪು ಅವರ ಮಂತ್ರ ಮಾಂಗಲ್ಯದ ಬಗ್ಗೆ ಕೂಡ ಬರೆದಿದ್ದಾರೆ. ಹೀಗಾಗಿ ಲೇಖಕಿ ಎಲ್ಲಿಯೂ ಸಂಪ್ರದಾಯಗಳನ್ನು ಓದುಗರ ಮೇಲೆ ಹೇರಲು ಹೋಗಿಲ್ಲ. ಬದಲಿಗೆ ಈ ರೀತಿಯ ಆಚರಣೆಗಳಿವೆ. ಯಾವುದನ್ನಾದರೂ ಪಾಲಿಸಿ ಎಂಬ ಧೋರಣೆ ತೋರಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಟಿ. ಜವರೇಗೌಡ ಆಶಯ ಭಾಷಣ ಮಾಡಿ, ಮಹಿಳಾ ಸಂವೇದನ ಒಂದು ರೀತಿ ಮಾತೃ ಸಂವೇದನೆ ಇದ್ದಂತೆ. ಸ್ವಾನುಭವದ ಜೊತೆಗೆ ಲೋಕಾನುಭವ ಕೂಡ ಮುಖ್ಯ. ಸುಜಯಾ ಸುರೇಶ್ ಅವರ ಈ ಎರಡನ್ನೂ ಮಿಶ್ರಣ ಮಾಡಿ, ಈ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ ಎಂದರು.ಮಹಿಳೆಯರು ರೀಲ್ಸ್ ನೋಡಿಕೊಂಡು ಕಾಲ ಕಳೆಯುತ್ತಿರುವಾಗ ಗೃಹಿಣಿಯಾಗಿರುವ ಹಾಗೂ ಹೆಚ್ಚು ಓದದ ಲೇಖಕಿ ಸಂಸ್ಕಾರ, ಸಂಪ್ರದಾಯ ಕುರಿತು ಈವರೆಗೆ ನಾಲ್ಕು ಕೃತಿಗಳನ್ನು ರಚಿಸಿದ್ದಾರೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿದರು.ಕದಂಬ ಕಲಾಪೀಠದ ಅಧ್ಯಕ್ಷ ಬಿ. ವಿದ್ಯಾಸಾಗರ ಕದಂಬ ಸ್ವಾಗತಿಸಿದರು. ರಾಜು ಪ್ರಾರ್ಥಿಸಿದರು. ಜಯಣ್ಣ ನಿರೂಪಿಸಿದರು. ಉದಯಗಿರಿ ಕನ್ನಡ ಸಂಘದ ಕಾರ್ಯದರ್ಶಿ ಜಯಕುಮಾರ್, ಕೆ.ಎಸ್. ಸತೀಶ್ ಕುಮಾರ್, ಡಾ.ಬಿ. ಬಸವರಾಜು, ಟಿ. ಲೋಕೇಶ್ ಹುಣಸೂರು, ಆರ್. ಸಹನಾ, ಚಂದ್ರು ಮಂಡ್ಯ, ನಾಗೇಶ್ ಕಾವ್ಯಪ್ರಿಯ. ಅವ್ವ ಪರಮೇಶ್ ಮೊದಲಾದವರು ಇದ್ದರು.