ಸಾರಾಂಶ
ಗುಂಡಿಗಳನ್ನು ಮುಚ್ಚಿದ ಬಳಿಕ ಅಂತಹ ರಸ್ತೆಯನ್ನು ‘ಗುಂಡಿ ಮುಕ್ತ ರಸ್ತೆ’ ಎಂದು ಘೋಷಿಸುವಂತೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರುಗುಂಡಿಗಳನ್ನು ಮುಚ್ಚಿದ ಬಳಿಕ ಅಂತಹ ರಸ್ತೆಯನ್ನು ‘ಗುಂಡಿ ಮುಕ್ತ ರಸ್ತೆ’ ಎಂದು ಘೋಷಿಸುವಂತೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಚಿಕ್ಕಪೇಟೆ ವಿಭಾಗದ ರಸ್ತೆಗಳಲ್ಲಿ ಸುಮಾರು 25 ಕಿ.ಮೀ. ಬೈಕ್‌ನಲ್ಲಿ ಸಂಚರಿಸಿ ರಸ್ತೆ ಗುಂಡಿಗಳು, ದುರಸ್ತಿ ಕಾಮಗಾರಿಗಳು ಹಾಗೂ ಇತರೆ ಸಮಸ್ಯೆಗಳನ್ನು ಪರಿಶೀಲಿಸಿದ ಅವರು, ಗುಂಡಿ ಮುಕ್ತವಾಗಿರುವ ರಸ್ತೆಗಳಲ್ಲಿ ಜಿಬ್ರಾ ಕ್ರಾಸಿಂಗ್, ಕ್ಯಾಟ್ ಐಸ್, ಲೈನ್ ಮಾರ್ಕಿಂಗ್, ಕರ್ಬ್‌ಗಳಿಗೆ ಬಣ್ಣ ಹಚ್ಚುವ ಮೂಲಕ ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು. ನಂತರವೇ ಗುಂಡಿ ಮುಕ್ತ ರಸ್ತೆ ಎಂದು ಘೋಷಿಸಬೇಕು ಎಂದು ತಿಳಿಸಿದರು.ಚಿಕ್ಕಪೇಟೆ ವಿಭಾಗದ ಪ್ರಮುಖ ಜಂಕ್ಷನ್‌ಗಳನ್ನು ಬೇರೆ ಬೇರೆ ವಿನ್ಯಾಸದೊಂದಿಗೆ ಅಭಿವೃದ್ಧಿಪಡಿಸಬೇಕು. ಹೊಸೂರು ರಸ್ತೆಯ ಮೇಲ್ಮೈ ಹೆಚ್ಚು ಹಾಳಾಗಿದ್ದು, ತಕ್ಷಣವೇ ಡಾಂಬರೀಕರಣ ಮಾಡಬೇಕು. ರಸ್ತೆ ಬದಿಯ ತ್ಯಾಜ್ಯ ತೆರವುಗೊಳಿಸಬೇಕು. ಜೆ.ಸಿ. ರಸ್ತೆಯಲ್ಲಿನ ಪಾಲಿಕೆ ಜಾಗದ ಸುತ್ತ ತಂತಿ ಬೇಲಿ ಹಾಕಿ, ಜಾಗದ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ತಯಾರಿಸಬೇಕು ಎಂದು ಚೋಳನ್ ಸೂಚಿಸಿದರು.