ಬೆಟ್ಟಹಲಸೂರು ಕ್ರಾಸ್ ಬಳಿ ಮೆಟ್ರೋ ನಿಲ್ದಾಣಕ್ಕೆ ಆಗ್ರಹ

| N/A | Published : Jul 04 2025, 01:02 AM IST / Updated: Jul 04 2025, 07:23 AM IST

ಸಾರಾಂಶ

ಬೆಟ್ಟಹಲಸೂರು ಕ್ರಾಸ್ ಬಳಿ ಮೆಟ್ರೋ ನಿಲ್ದಾಣ ಸ್ಥಾಪಿಸಬೇಸುವಂತೆ ಕೋರಿ ರಾಜ್ಯ ರೈತಸಂಘದ ವತಿಯಿಂದ ಸಲ್ಲಿಸಲಾದ ಪಿಐಎಲ್ ಪ್ರತಿ ಪ್ರದರ್ಶಿಸಿದ ರೈತ ಮುಖಂಡರು.

  ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಕ್ರಾಸ್ ಬಳಿ ಮೆಟ್ರೋ ನಿಲ್ದಾಣ ಸ್ಥಾಪಿಸಬೇಕು ಎಂದು ಕೋರಿ ಸುತ್ತಮುತ್ತಲಿನ ಗ್ರಾಮಸ್ಥರ ಪರವಾಗಿ ರಾಜ್ಯ ರೈತಸಂಘದ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ರೈತಸಂಘದ ಕಾರ್ಯದರ್ಶಿ ಬೆಟ್ಟಹಲಸೂರು ಬಿ.ಜಿ.ನಂಜುಂಡಪ್ಪ, ಸಮಾಜ ಸೇವಕ ಬಿ.ಸಿ ಶಿವರಾಜ್ (ಶಿವು), ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಟಿ.ಪಿ.ಪ್ರಕಾಶ್, ಯಲಹಂಕ ತಾಲೂಕು ಸೊಸೈಟಿ ಸದಸ್ಯರಾದ ಟಿ.ಅಗ್ರಹಾರದ ಪಟೇಲ್ ಪಿ., ಬೆಟ್ಟಹಲಸೂರು ಗ್ರಾ.ಪಂ. ಮಾಜಿ ಸದಸ್ಯರಾದ ಚಂದ್ರು ಬಿ.ಕೆ ಅವರು ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.

ಈ‌ ಕುರಿತು ಪ್ರತಿಕ್ರಿಯೆ ನೀಡಿರುವ ರೈತ ಮುಖಂಡರು, ಬೆಟ್ಟಹಲಸೂರು ಕ್ರಾಸ್ ಬಳಿ ಮೆಟ್ರೋ ರೈಲ್ವೆ ನಿಲ್ದಾಣ ಸ್ಥಾಪಿಸಬೇಸುಂತೆ ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದ್ದರೂ ದುರುದ್ದೇಶದಿಂದ ನಿಲ್ದಾಣವನ್ನು ಕೈ ಬಿಟ್ಟಿರುವುದು ವಿಷಾದಕರ ಸಂಗತಿ. ಬೆಟ್ಟಹಲಸೂರು ಕೇಂದ್ರಿತ ವ್ಯಾಪ್ತಿಯಲ್ಲಿ ಸುಮಾರು 40 ಗ್ರಾಮಗಳಿದ್ದು, ಒಂದೂವರೆ ಲಕ್ಷಕ್ಕಿಂತ ಅಧಿಕ ಜನರು ವಾಸಿಸುತ್ತಿದ್ದಾರೆ. ಇಲ್ಲಿಗೆ ಮೆಟ್ರೋ ನಿಲ್ದಾಣ ಅತ್ಯಂತ ಅವಶ್ಯವಿರುವ ಕಾರಣ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಅರ್ಜಿ ಸಲ್ಲಿಸುವ ಮುನ್ನ ಸುಮಾರು ಮೂರ್ನಾಲ್ಕು ತಿಂಗಳಿಂದ ಸಂಬಂಧಪಟ್ಟ ಕಚೇರಿಗಳು, ಮಂತ್ರಿಗಳು, ಅಧಿಕಾರಿಗಳು ಹಾಗೂ ಸಂಸದರನ್ನು ಖುದ್ದು ಭೇಟಿ ಮನವಿ ನೀಡಲಾಗಿದೆ. ಸಚಿವ ಕೃಷ್ಣ ಬೈರೇಗೌಡ ಅವರು ಮನವಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ರವಾನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಹ ಬಿಎಂಆರ್‌ಸಿಎಲ್‌ಗೆ ಮೆಟ್ರೋ ನಿಲ್ದಾಣ ಅವಶ್ಯಕತೆ ಬಗ್ಗೆ ಪತ್ರ ಬರೆದಿದ್ದಾರೆ. ಆದರೂ ಯಾವುದೇ ಕ್ರಮ ಕೈಕೊಂಡಿರುವುದಿಲ್ಲ. ಆದ್ದರಿಂದ ಅಂತಿಮವಾಗಿ ವಕೀಲರನ್ನು ಸಂಪರ್ಕಿಸಿ, ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು ಎಂದು ತಿಳಿಸಿದ್ದಾರೆ.

Read more Articles on