ಅಲೆಮಾರಿಗಳಿಗೆ ಒಳಮೀಸಲಾತಿಯಲ್ಲಿ ನ್ಯಾಯ ಒದಗಿಸಲು ಒತ್ತಾಯ

| Published : Aug 29 2025, 01:00 AM IST

ಅಲೆಮಾರಿಗಳಿಗೆ ಒಳಮೀಸಲಾತಿಯಲ್ಲಿ ನ್ಯಾಯ ಒದಗಿಸಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಜಾತಿಗಳ ಒಳಮೀಸಲಾತಿಯಲ್ಲಿ ಸೂಕ್ಷ್ಮ ಮತ್ತು ಅಲೆಮಾರಿ ಜಾತಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿಯ 59 ಸೂಕ್ಷ್ಮ ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ವಂಚಿತ ಹೋರಾಟ ಸಮಿತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪರಿಶಿಷ್ಟ ಜಾತಿಗಳ ಒಳಮೀಸಲಾತಿಯಲ್ಲಿ ಸೂಕ್ಷ್ಮ ಮತ್ತು ಅಲೆಮಾರಿ ಜಾತಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿಯ 59 ಸೂಕ್ಷ್ಮ ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ವಂಚಿತ ಹೋರಾಟ ಸಮಿತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಗಾಂಧಿ ಚೌಕ್ ನಿಂದ ಬಸ್ ನಿಲ್ದಾಣ, ಪುನೀತ್ ರಾಜ್ ಕುಮಾರ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಡಿಸಿ ಎಂ.ಎಸ್. ದಿವಾಕರ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.

ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿದಂತೆ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳ ಸಮೂಹಕ್ಕೆ ಅಘಾತವನ್ನುಂಟು ಮಾಡಿದೆ. ಒಳಮೀಸಲಾತಿ ಜಾರಿ ಮಾಡುವ ಒತ್ತಡದಲ್ಲಿ ಸರ್ಕಾರವು 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಮೀಸಲು ಪ್ರಮಾಣವನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕಿತ್ತು. ಅದರಲ್ಲೂ ಅಲೆಮಾರಿಗಳಂತಹ ತಬ್ಬಲಿ ಮತ್ತು ಧ್ವನಿ ಇಲ್ಲದ ಸಮುದಾಯಗಳ ವಿಷಯದಲ್ಲಿ ಸರ್ಕಾರ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಆದರೆ ಕ್ಯಾಬಿನೆಟ್ ನಿರ್ಣಯ ಅಲೆಮಾರಿ ಸಮುದಾಯಗಳಿಗೆ ಮರಣ ಶಾಸನವನ್ನು ಬರೆದುಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲೆಮಾರಿಗಳನ್ನು ಬಂಜಾರ, ಬೋವಿ, ಕೊರಮ, ಕೊರಚ ಸಮಯದಾಯಗಳ ಜೊತೆಗೆ ಸೇರಿಸಿ ಶೇ. 5ರಷ್ಟು ಮೀಸಲಾತಿ ನಿಗದಿಪಡಿಸಿರುವುದರಿಂದ ಅಲೆಮಾರಿ ಸಮುದಾಯಗಳು ಶಾಶ್ವತವಾಗಿ ಮೀಸಲಾತಿಯಿಂದ ವಂಚಿತವಾಗಲಿವೆ. ಸಾವಿರಾರು ವರ್ಷಗಳಿಂದ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾಗಿಯೇ ಬದುಕಿ ಬಂದ ಈ ಅನಾಥ ಸಮುದಾಯಗಳಿಗೆ ಸ್ವಾತಂತ್ರ್ಯನಂತರ ಸಂವಿಧಾನಬದ್ಧ ಸೌಲಭ್ಯಗಳು ಇನ್ನೂ ದೊರಕಿಲ್ಲ. ಸಾರ್ವಜನಿಕ ವಲಯದಲ್ಲಿ ಯಾವ, ಯಾವ ಸಮುದಾಯಗಳಿಗೆ ಅವಕಾಶಗಳು ಲಭ್ಯವಾಗಿಲ್ಲವೋ ಅಂತಹ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ದೊರಕಿಸುವುದೇ ಮೀಸಲಾತಿಯ ಪರಮ ತತ್ವವಾಗಿದೆ. ಆದರೆ, ಪರಿಶಿಷ್ಟ ಜಾತಿಯಲ್ಲಿನ ಬಲಾಢ್ಯ ಸಮುದಾಯಗಳು ಮೀಸಲಾತಿಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತಾ ಬಂದಿವೆ. ಈ ಕಾರಣದಿಂದ ಮೀಸಲಾತಿಯಲ್ಲಿ ಪ್ರಾತಿನಿಧ್ಯ ಪಡೆಯದ ಚಿಕ್ಕ, ಚಿಕ್ಕ ಸಮುದಾಯಗಳಿಗೆ ನಿರ್ದಿಷ್ಟ ಪಾಲನ್ನು ನಿಗದಿಪಡಿಸಲು ಒತ್ತಾಯಿಸಿ ಮೀಸಲಾತಿಯಲ್ಲಿ ಒಳವರ್ಗೀಕರಣ ಮಾಡಬೇಕು, ಕಳೆದ 30 ವರ್ಷಗಳಿಂದ ಹೋರಾಟವನ್ನು ಮಾಡುತ್ತಾ ಬರಲಾಗಿದೆ ಎಂದರು.

ನ್ಯಾಯಮೂರ್ತಿ ಡಾ. ಎಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದ ವರದಿಯಲ್ಲಿ ಸರ್ಕಾರದ ಸಮೀಕ್ಷೆಯ ದತ್ತಾಂಶಗಳ ಹಿನ್ನೆಲೆ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳ ಸಮೂಹಕ್ಕೆ ಪ್ರವರ್ಗ-ಎ ರಲ್ಲಿ ವರ್ಗೀಕರಿಸಿರುವುದು ನ್ಯಾಯಸಮ್ಮತವಾಗಿದೆ. ಈ ಜಾತಿಗಳನ್ನು ಸರ್ಕಾರ ಅಸಮಾಧಾನ ಪ್ರವರ್ಗದ ಜೊತೆ ಪ್ರವರ್ಗ ಸಿರಲ್ಲಿ ಸೇರಿಸಿ ಶೇ.5ರಷ್ಟು ಒಳ ಮೀಸಲಾತಿ ನೀಡಲು ಮುಂದಾಗಿರುವುದು ಈ ಸಮುದಾಯಗಳಿಗೆ ಮರಣ ಶಾಸನವಾಗುವುದರಲ್ಲಿ ಸಂದೇಹವಿಲ್ಲ. ಆಯೋಗದ ಶಿಫಾರಸ್ಸಿನಂತೆ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ-ಎ ರಲ್ಲಿಯೇ ಇರಿಸಿ ಶೇ. 1ರಷ್ಟು ಒಳ ಮೀಸಲಾತಿ ನೀಡಿದರೂ ಸಾಮಾಜಿಕ ನ್ಯಾಯ ದೃಷ್ಟಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಮತ್ತು ದಾರ್ಶನಿಕರ ಆಶಯದಂತೆ ಕಟ್ಟಕಡೆಯವರಿಗೆ ಒಳಮೀಸಲಾತಿಯ ಸರದಿಯಲ್ಲಿ ಪ್ರಥಮ ಆದ್ಯತೆ ನೀಡಿದಂತಾಗುತ್ತದೆ. ನಮ್ಮ ಸಮುದಾಯಕ್ಕೆ ಶೇ. 1 ರಷ್ಟು ಒಳ ಮೀಸಲಾತಿ ನಿಗದಿಗೊಳಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಅಲೆಮಾರಿ ಒಕ್ಕೂಟದ ಅಧ್ಯಕ್ಷ ಸಣ್ಣ ಮಾರೆಪ್ಪ, ಮುಖಂಡರಾದ ಮಂಜುನಾಥಶಾಸ್ತ್ರೀ, ಎಸ್.ಕೆ. ಚೌಡಪ್ಪ, ಜೆ.ರಮೇಶ, ಶೇಖರ್ ಡಿ., ಕಿನ್ನೂರಿ ಶೇಖಪ್ಪ, ಪಕ್ಕೀರಪ್ಪ ಬಾದಿಗಿ, ವೀರೇಶ, ಕರಿಬಸವರಾಜ ಅನೆಗಂಟಿ, ಸಿದ್ದು ಬೆಳಗಲ್, ಕೊಂಡ್ರಿ ರಾಜಪ್ಪ, ಹಂಪಯ್ಯ, ವಿ.ಮಲ್ಲೇಶಪ್ಪ, ಸಣ್ಣ ಅಜ್ಜಯ್ಯ, ಎಸ್.ಬಿ. ಮಂಜುನಾಥ ಮತ್ತಿತರರಿದ್ದರು.