ಸಾರಾಂಶ
ಡೆಂಘೀ ನಿಯಂತ್ರಣ ನಿಟ್ಟಿನಲ್ಲಿ ಮುಂದಿನ 3 ದಿನದಲ್ಲಿ ಜಿಲ್ಲೆಯ ಶಾಲಾ, ಅಂಗನವಾಡಿ ಹಾಗೂ ವಸತಿ ನಿಲಯದಲ್ಲಿ ಲಾರ್ವಾ ಸರ್ವೇ ಮಾಡಿಸಿ ಸೊಳ್ಳೆಗಳ ತಾಣ ನಿರ್ಮೂಲನೆ ಮಾಡಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಡೆಂಘೀ ನಿಯಂತ್ರಣ ನಿಟ್ಟಿನಲ್ಲಿ ಮುಂದಿನ 3 ದಿನದಲ್ಲಿ ಜಿಲ್ಲೆಯ ಶಾಲಾ, ಅಂಗನವಾಡಿ ಹಾಗೂ ವಸತಿ ನಿಲಯದಲ್ಲಿ ಲಾರ್ವಾ ಸರ್ವೇ ಮಾಡಿಸಿ ಸೊಳ್ಳೆಗಳ ತಾಣ ನಿರ್ಮೂಲನೆ ಮಾಡಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಶುಕ್ರವಾರ ಇಲ್ಲಿನ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಹ ಹಿನ್ನೆಲೆಯಲ್ಲಿ ಉದ್ಭವಿಸಬಹುದಾದ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆ ಮುಂದಾಗಬೇಕು. ವಸತಿ ನಿಲಯದಲ್ಲಿ ನಿಲಾಯಾರ್ಥಿಗಳಿಗೆ ಪ್ರತಿ ತಿಂಗಳ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು ಎಂದರು.
ಕಳೆದ ಜುಲೈ ಹಾಗೂ ಆಗಸ್ಟ್ ಮಾಹೆಯಲ್ಲಿ ಡೆಂಘೀ ಪ್ರಕರಣ ಹೆಚ್ಚು ಕಂಡುಬಂದ ಪ್ರದೇಶದಲ್ಲಿ ಸಿ.ಎಚ್.ಸಿ, ಪಿ.ಎಚ್.ಸಿ ವೈದ್ಯರು ಶಾಲೆ, ಅಂಗನವಾಡಿ, ವಸತಿ ನಿಲಯ ಹಾಗೂ ಗ್ರಾಮಗಳಿಗೆ ಹೋಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಸೊಳ್ಳೆಗಳ ಮೂಲ ತಾಣ ನಾಶಪಡಿಸುವುದಲ್ಲದೆ ನೀರು ನಿಂತು ಈಡೀಸ್ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಿ. ಶಾಲಾ, ವಸತಿ ನಿಲಯದಲ್ಲಿನ ನೀರಿನ್ ಟ್ಯಾಂಕ್ ಸ್ವಚ್ಛಗೊಳಿಸಿ ಎಂದರು.ಇತ್ತೀಚೆಗೆ ಸೇಡಂ ತಾಲೂಕಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದ ಕೋಡ್ಲಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದಾಗ, ಅಲ್ಲಿ ವಿಪರೀತ ಸೊಳ್ಳೆಗಳಿರುವುದು ಕಂಡುಬಂದಿದೆ. ಕೂಡಲೆ ಅಲ್ಲಿ ಸರಿಪಡಿಸಿ ಎಂದು ಅಲ್ಪಸಂಖ್ಯಾತ ಅಧಿಕಾರಿಗಳಿಗೆ ಡಿ.ಸಿ. ಸೂಚಿಸಿದರು.
ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಿ: ಕಲಬುರಗಿ ನಗರದಲ್ಲಿ ಪಾಲಿಕೆ ವಲಯ ಆಯುಕ್ತರು ಸ್ವಚ್ಛತೆಗೆ ಮುಂದಾಗಬೇಕು. ಕಚೇರಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವುದನ್ನು ಬಿಟ್ಟು ನಗರ ಸುತ್ತಾಡಿ ಸಮಸ್ಯೆ ಬಗೆಹರಿಸಬೇಕು. ಬ್ಲ್ಯಾಕ್ ಸ್ಪಾಟ್ ಸ್ಥಳದಲ್ಲಿ ಸ್ವಚ್ಛಗೊಳಿಸಿ ಮುಂದೆ ಅಲ್ಲಿ ಕಸ ಹಾಕದಂತೆ ಸಾರ್ವಜನಿಕರಿಗೆ, ಮಾರುಕಟ್ಟೆಯಲ್ಲಿನ ವ್ಯಾಪಾರಿಗಳಿಗೆ ತಿಳಿಸಬೇಕು. ಸೂಚನೆ ನೀಡಿದರೂ ಮತ್ತೆ ಕಸ ಹಾಕಿ ನೈರ್ಮಲ್ಯ ಸಮಸ್ಯೆಗೆ ಕಾರಣರಾದರೆ ಕೂಡಲೆ ಅಂತಹವರಿಗೆ ಎಸ್.ಬಿ.ಎಂ. ಕಾಯ್ದೆಯಂತೆ ದಂಡ ಹಾಕಿ ಎಂದು ಡಿ.ಸಿ. ಪಾಲಿಕೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಡಿ.ಎಚ್.ಓ, ಆರ್.ಸಿ.ಎಚ್.ಓ ಹಾಗೂ ಡಿ.ಎಲ್.ಓ ಗಳು ಪ್ರತಿಯೊಂದು ವಲಯದಲ್ಲಿ ಡೆಂಘೀ ನಿಯಂತ್ರಣ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಇದಕ್ಕೆ ಪಾಲಿಕೆ ಪರಿಸರ ಅಭಿಯಂತರರು ಇತರೆ ನೆರವು ಪಡೆಯಿರಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ಪ್ರಭುರೆಡ್ಡಿ, ಡಿ.ಎಚ್.ಓ ಡಾ. ರತಿಕಾಂತ ಸ್ವಾಮಿ, ಆರ್.ಸಿ.ಎಚ್.ಓ ಡಾ.ಶರಣಬಸಪ್ಪ ಖ್ಯಾತನಾಳ ಸೇರಿದಂತೆ ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.